ಬೆಂಗಳೂರು,ಆ. 29- ಕರ್ನಾಟಕವನ್ನು ಕಾಂಗ್ರೆಸ್ ನಿಂದ ಮುಕ್ತ ಮಾಡುತ್ತೇವೆ ಎಂದು ಹೇಳಿಕೊಂಡು ಓಡಾಡುತ್ತಿದ್ರ ನಮಗೆ ಜನತೆ ಪಾಠ ಕಲಿಸಿದ್ದು, ಕರ್ನಾಟಕ ಶೀಘ್ರದಲ್ಲೇ ಬಿಜೆಪಿ ಮುಕ್ತವಾಗಲಿದೆ ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಮಂತ್ರಿ ರೇಣುಕಾಚಾರ್ಯ (MP Renukacharya) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿಯ ಕೆಲವು ನಾಯಕರ ಧೋರಣೆಯಿಂದ ಪಕ್ಷ ತೀವ್ರ ಹಿನ್ನಡೆ ಅನುಭವಿಸುತ್ತಿದೆ.ಯಡಿಯೂರಪ್ಪ ಅವರಂತಹ ನಾಯಕರನ್ನು ಕಡೆಗಣಿಸಿದ ಪರಿಣಾಮ ಕರ್ನಾಟಕದಲ್ಲಿ ಬಿಜೆಪಿ ಮೂಲೆಗುಂಪಾಗುತ್ತಿದೆ ಎಂದು ಆಪಾದಿಸಿದರು ನಾವು ಕರ್ನಾಟಕವನ್ನು ಕಾಂಗ್ರೆಸ್ ಮುಕ್ತಮಾಡುತ್ತೇವೆ ಎನ್ನುತ್ತಿದ್ದೆವು ಪರಿಸ್ಥಿತಿ ಈಗ ಉಲ್ಟಾ ಆಗಿದ್ದು, ಬಿಜೆಪಿಯೇ ಕರ್ನಾಟಕದಿಂದ ಮುಕ್ತವಾಗುತ್ತಿದೆ ಎಂದು ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನ ಹೊರಹಾಕಿದರು.
ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಕಡೆಗಣಿಸಿದ್ದೇ ಬಿಜೆಪಿಗೆ ಶಾಪವಾಗಿ ಪರಿಣಮಿಸಿದೆ. ಸರ್ಕಾರ ರಚನೆಯಾಗಿ 100 ದಿನ ಪೂರೈಸಿದರೂ ಅಧಿಕೃತ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ. ಈ ಬೆಳವಣಿಗೆ ಕಾರ್ಯಕರ್ತರಿಗೆ ನೋವುಂಟು ಮಾಡಿದೆ. ಕಾಂಗ್ರೆಸ್ ಮಾಡುವ ಆರೋಪಗಳಿಗೆ ನಾವು ಉತ್ತರ ಕೊಡಲಾಗದ ಸ್ಥಿತಿಗೆ ಬಂದಿದ್ದೇವೆ ಎಂದು ವಿಷಾದಿಸಿದರು.
ರೇಣುಕಾಚಾರ್ಯ (MP Renukacharya) ಬೆಳೆಯುತ್ತಾನೆಂದು ತುಳಿಯುವ ಕೆಲಸ ಮಾಡಿದರು. ನಾನು ಮಾತಾಡಿದ ತಕ್ಷಣ ರೇಣುಕಾಚಾರ್ಯ ಪಕ್ಷ ಬಿಡುತ್ತಾನೆಂದು ಹಬ್ಬಿಸುತ್ತಿದ್ದಾರೆ. ಯಾರು ರಾಜಕೀಯವಾಗಿ ಬೆಳೆಯುತ್ತಾರೋ ಅವರನ್ನು ಕತ್ತಿರುಸುತ್ತಾರೆ, ಯಾರು ಬಕೇಟ್ ಹಿಡಿಯುತ್ತಾರೋ ಅವರನ್ನು ಬೆಳೆಸುತ್ತಾರೆ ಎಂದು ಕಿಡಿಕಾರಿದರು.
ನಾನು ಬಿಜೆಪಿ ಬಿಟ್ಟು ಕಾಂಗ್ರೇಸ್ ಸೇರುತ್ತೇನೆಂದು ಎಲ್ಲೂ ಹೇಳಿಲ್ಲಾ. ನಾನು ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಕಾಂಗ್ರೇಸ್ ನಾಯಕರನ್ನು ಭೇಟಿ ಮಾಡಿದರೆ ತಪ್ಪೇನು ಎಂದು ಪ್ರಶ್ನಿಸಿದ ಅವರು ರಾಜ್ಯದ ಅಧ್ಯಕ್ಷರ ಅವಧಿ ಮುಗಿದರೂ ಇನ್ನೂ ರಾಜ್ಯಾಧ್ಯಕ್ಷರ ನೇಮಕ ಮಾಡಿಲ್ಲಾ, ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲಾ. ಇದರಿಂದ ತುಂಬಾ ಬೇಸರವಾಗಿದೆ ಎಂದು ಹೇಳಿದರು