ಬೆಂಗಳೂರು,ಜ.12-
ಅಧಿಕಾರ ಹಂಚಿಕೆ ಹಾಗೂ ಸಂಪುಟ ವಿಸ್ತರಣೆ ವಿಚಾರ ರಾಜ್ಯ ಕಾಂಗ್ರೆಸ್ಸಿನಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿರುವ ನಡುವೆ ನಾಳೆ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಮಾಲೋಚನೆ ನಡೆಸಲಿದ್ದಾರೆ.
ಒಂದು ವಾರದಿಂದ ವಿದೇಶ ಪ್ರವಾಸದಲ್ಲಿದ್ದ ರಾಹುಲ್ ಗಾಂಧಿ ಅವರು ಸ್ವದೇಶಕ್ಕೆ ಹಿಂತಿರುಗಿದ್ದು ನಾಳೆ ತಮ್ಮ ಸಹೋದರಿ ಪ್ರತಿನಿಧಿಸುತ್ತಿರುವ ಲೋಕಸಭಾ ಕ್ಷೇತ್ರ ವಯನಾಡಿಗೆ ತೆರಳುತ್ತಿದ್ದಾರೆ. ವಯನಾಡಿಗೆ ತೆರಳಲು ರಾಹುಲ್ ಗಾಂಧಿ ಅವರು ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸುತ್ತಿದ್ದಾರೆ ಅಲ್ಲಿಂದ ರಸ್ತೆ ಮಾರ್ಗವಾಗಿ ವಯನಾಡಿಗೆ ಹೋಗುತ್ತಿದ್ದಾರೆ. ಅಲ್ಲಿಗೆ ಬರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಾಳೆ ಮಧ್ಯಾಹ್ನ ಈ ಇಬ್ಬರೂ ಪ್ರತ್ಯೇಕವಾಗಿ ಮೈಸೂರಿಗೆ ತೆರಳುತ್ತಿದ್ದು ರಾಹುಲ್ ಗಾಂಧಿ ಜೊತೆಗೆ ರಾಜ್ಯ ಕಾಂಗ್ರೆಸ್ಸಿನ ಹಲವಾರು ವಿಚಾರಗಳ ಕುರಿತಂತೆ ಮಾತುಕತೆ ನಡೆಸಲಿದ್ದಾರೆ.
ಈ ಭೇಟಿಯ ನಂತರ ಅಧಿಕಾರ ಹಸ್ತಾಂತರ ಮತ್ತು ಸಂಪುಟ ಪುನಾರಚನೆ ಕುರಿತಂತೆ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಇದರ ಜೊತೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಪದಾಧಿಕಾರಿಗಳು ಮತ್ತು ಜಿಲ್ಲಾಧ್ಯಕ್ಷರ ನೇಮಕ ಕುರಿತಂತೆ ಪ್ರಮುಖವಾಗಿ ಚರ್ಚೆಯ ನಡೆಯಲಿದೆ.
ಇದಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಫೆಬ್ರವರಿ 16 ಕ್ಕೆ ಒಂದು ಸಾವಿರ ದಿನಗಳನ್ನು ಪೂರ್ಣಗೊಳಿಸುತ್ತಿದ್ದು ಇದರ ಅಂಗವಾಗಿ ಹಾವೇರಿಯಲ್ಲಿ ಬೃಹತ್ ಸಮಾವೇಶ ಏರ್ಪಡಿಸಲು ಚಿಂತನೆ ನಡೆಸಿದ್ದಾರೆ ಈ ಸಮಾವೇಶವನ್ನು ಉದ್ಘಾಟಿಸಲು ಬರುವಂತೆ ರಾಹುಲ್ ಗಾಂಧಿ ಅವರಿಗೆ ಆಹ್ವಾನ ನೀಡಲಿದ್ದಾರೆ.
ಒಂದು ಸಾವಿರ ದಿನದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಜನರಿಗೆ ನೀಡಿದ ಗ್ಯಾರಂಟಿ ಯೋಜನೆಗಳು ಸೇರಿದಂತೆ ಹಲವು ಭರವಸೆಗಳನ್ನು ಈಡೇರಿಸಿದೆ ಈ ಹಿನ್ನೆಲೆಯಲ್ಲಿ ಮತದಾರರಿಗೆ ಅಭಿನಂದನೆ ಹಾಗೂ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಸನ್ಮಾನ ಸಲ್ಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. ಇದನ್ನು ರಾಹುಲ್ ಗಾಂಧಿ ಅವರಿಗೆ ತಿಳಿಸಿ ಹಾವೇರಿಗೆ ಬರುವಂತೆ ಮನವಿ ಮಾಡುವ ಸಾಧ್ಯತೆ ಇದೆ.
ಇದಲ್ಲದೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಜನವರಿ 26ರಿಂದ ಹಮ್ಮಿಕೊಂಡಿರುವ ಮನರೇಗಾ ಯೋಜನೆ ಕುರಿತಾದ ಜನಾಂದೋಲನ ಸಭೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.
ರಾಹುಲ್ ಗಾಂಧಿ ಜೊತೆ ಸಿಎಂ ಮತ್ತು ಡಿಸಿಎಂ ಮೀಟಿಂಗ್ ಫಿಕ್ಸ್
Previous Articleಎ.ಐ ಹುಡುಗಿ ನೋಡಿ ಹಳ್ಳಕ್ಕೆ ಬಿದ್ದ!
Next Article ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದು ಯಾರು ಗೊತ್ತಾ..?

