ಸೀಟ್ ಬೆಲ್ಟ್ ಧರಿಸದೇ ಕಾರ್ ನಲ್ಲಿ ಪ್ರಯಾಣಿಸುತ್ತಿದ್ದ ಇಂಗ್ಲೆಂಡ್’ನ (England) ಪ್ರಧಾನ ಮಂತ್ರಿ ರಿಷಿ ಸುನಾಕ್ ರಿಗೆ (Rishi Sunak) ದಂಡ ವಿಧಿಸಲಾಗಿದೆ. ಇತ್ತೀಚೆಗೆ ಅವರು ಇಂಗ್ಲೆಂಡ್ ನ ಉತ್ತರ ಭಾಗದ ಪ್ರದೇಶಗಳ ಪ್ರವಾಸ ಕೈಗೊಂಡಿದ್ದರು. ಈ ವೇಳೆ, Lancashire ಎಂಬ ಊರಿನ ಮಾರ್ಗವಾಗಿ ಚಲಿಸುವಾಗ, ಚಲಿಸುತ್ತಿದ್ದ ಕಾರ್ ನಲ್ಲಿ ಅವರೊಂದು ವೀಡಿಯೊ ಚಿತ್ರೀಕರಿಸಿದ್ದರು. ಅದು “ಲೆವೆಲಿಂಗ್ ಅಪ್” (Levelling up) ಯೋಜನೆಯ ಪ್ರಚಾರಕ್ಕಾಗಿ ಮಾಡಿದ ವಿಡಿಯೋ ಆಗಿತ್ತು. ವೀಡಿಯೊವನ್ನು ರಿಷಿ ಸುನಾಕ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ವೀಡಿಯೊದಲ್ಲಿ ಕಂಡುಬಂದಂತೆ, ಚಲಿಸುತ್ತಿದ್ದ ಕಾರ್ ನಲ್ಲಿ ಪ್ರಧಾನ ಮಂತ್ರಿ ರಿಷಿ ಸುನಾಕ್ ಸೀಟ್ ಬೆಲ್ಟ್ ಧರಿಸದೇ ಕುಳಿತಿದ್ದರು. ನಿಯಮ ಉಲ್ಲಂಘಿಸಿದ್ದಕ್ಕಾಗಿ ಪ್ರಧಾನ ಮಂತ್ರಿಯವರಿಗೆ £100 (100 pound) ದಂಡ ವಿಧಿಸಲಾಗಿದೆ. ಇದರ ಕುರಿತು ಪ್ರತಿಕ್ರಿಯಿಸಿದ ರಿಷಿ ಸುನಾಕ್, “ತನ್ನಿಂದ ತಪ್ಪಾಗಿದೆ. ನಾನು ದಂಡ ತೆರಲು ಸಿದ್ಧನಿದ್ದೇನೆ” ಎಂದು ತಪ್ಪೊಪ್ಪಿಕೊಂಡಿದ್ದಾರೆ. ನಿಯಮಗಳೆಡೆ ನಿರ್ಲಕ್ಷ ತೋರಿದ್ದಕ್ಕಾಗಿ ರಿಷಿ ಸುನಾಕ್ ಹಲವು ನಾಯಕರ ಮಿಶ್ರ ಪ್ರತಿಕ್ರಿಯೆಗೆ ಗುರಿಯಾಗಿದ್ದಾರೆ.
ರಿಷಿ ಸುನಾಕ್ ಅವರು ಹೀಗೆ ದಂಡದ ನೋಟಿಸ್ ಪಡೆಯುತ್ತಿರುವುದು ಇದು ಎರಡನೇ ಬಾರಿ. 2020 ರ ಜೂನ್ ನಲ್ಲಿ, ಕೋವಿಡ್ 19 ರ ಲಾಕ್ಡೌನ್ ನಿಯಮಗಳ ನಡುವೆಯೂ, ಆಗಿನ ಪ್ರಧಾನ ಮಂತ್ರಿಯವರ ಹುಟ್ಟುಹಬ್ಬದ ಕೂಟದಲ್ಲಿ ಭಾಗವಹಿಸುವ ಮೂಲಕ ಕೋವಿಡ್ 19 ರ ಲಾಕ್ಡೌನ್ ನಿಯಮಗಳನ್ನು ಮುರಿದಿದ್ದರು. ಇದರ ಪರಿಣಾಮ ರಿಷಿ ಸುನಾಕ್ ರಿಗೆ ದಂಡ ವಿಧಿಸಲಾಗಿತ್ತು.
ಲೆವೆಲಿಂಗ್ ಅಪ್ ಕುರಿತು –
ಲೆವೆಲಿಂಗ್ ಅಪ್ ನ ಪ್ರಮುಖ ಧ್ಯೇಯ – “ಆರ್ಥಿಕತೆಯನ್ನು ಬೆಳೆಸುವುದು, ಉತ್ತಮ ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ಅವಕಾಶಗಳನ್ನು ಹರಡುವುದು”. ಲೆವೆಲಿಂಗ್ ಅಪ್ ಫಂಡ್, ಪಟ್ಟಣ ಕೇಂದ್ರಗಳನ್ನು ನವೀಕರಿಸುವುದು, ಸಾರಿಗೆ ಮತ್ತು ಸಾಂಸ್ಕೃತಿಕ ಮತ್ತು ಪಾರಂಪರಿಕ ಆಸ್ತಿಗಳನ್ನು ಸುಧಾರಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.