ಬೆಂಗಳೂರು, ಡಿ.12- ದೇಶಾದ್ಯಂತ ಸಂಚಲನ ಮೂಡಿಸಿದ ಬಿಟ್ ಕಾಯಿನ್ (Bitcoin) ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಹಲವು ಸವಾಲುಗಳು ಎದುರಾಗುತ್ತಿದ್ದು ಅವುಗಳನ್ನು ನಿಭಾಯಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಇದೀಗ ಕರ್ಮಕಾಂಡದ ಪ್ರಮುಖ ಆರೋಪಿಯಾಗಿರುವ ಶ್ರೀಕಿ ಅಲಿಯಾಸ್ ಶ್ರೀಕಾಂತ್ ತನಿಖೆಯ ವಿಚಾರಕ್ಕೆ ವಿಶೇಷ ತನಿಖಾ ತಂಡದ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದಾನೆ.
ಪೊಲೀಸರ ವಿಚಾರಣೆಗೆ ಹಾಜರಾಗದೇ ಶ್ರೀಕಿ ವಿಚಾರಣೆಗೆ ಹಾಜರಾಗದೇ ಕಳ್ಳಾಟ ಆಡುತ್ತಿದ್ದಾನೆ. ಐದಾರು ಬಾರಿ ನೋಟಿಸ್ ನೀಡಿದರೂ ಸಹ ಆತ ವಿಚಾರಣೆಗೆ ಹಾಜರಾಗುತ್ತಿಲ್ಲ.
ಪ್ರತಿ ಬಾರಿ ಒಂದೊಂದು ಕಾರಣ ನೀಡುತ್ತಿರುವ ಆತ, ತಂದೆಗೆ ಹುಷಾರಿಲ್ಲ, ತಾಯಿಗೆ ಹುಷಾರಿಲ್ಲ ಹಾಗೂ ನನಗೆ ಹುಷಾರಿಲ್ಲ ಎಂಬ ಕಾರಣ ನೀಡಿ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾನೆ.
ಒಂದೂವರೆ ತಿಂಗಳ ಹಿಂದೆ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಆತ ಊಟ, ತಿಂಡಿ ಸಮಯದಲ್ಲಿ ಹಾಗೂ ರಾತ್ರಿ ಮಲಗಲು ಮನೆಗೆ ತೆರಳುತ್ತಿರುವ ಮಾಹಿತಿ ಬಂದಿದೆ.
ವಿಚಾರಣೆ ನಡೆಸಲು ನಿಮ್ಹಾನ್ಸ್‌ಗೆ ಹೋದ ಎಸ್‍ಐಟಿ ತಂಡಕ್ಕೆ ಡೆತ್‍ನೋಟ್ ಬರೆದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಸಹ ಹಾಕಿದ್ದ. ಈ ರೀತಿ ಶ್ರೀಕಿ ನಡೆದುಕೊಳ್ಳುವುದರಿಂದ ತನಿಖೆಯಲ್ಲಿ ಹಿನ್ನಡೆ ಆಗುತ್ತಿದೆ.
ಶ್ರೀಕಿಯನ್ನು ಬಂಧಿಸಿ ಬಿಟ್ ಕಾಯಿನ್ ಪ್ರಕರಣದ ತನಿಖೆ ನಡೆಸಿದ್ದ ಸಿಸಿಬಿ ತನಿಖೆಯಲ್ಲಿ ಲೋಪ ನಡೆದಿದೆ ಎಂದು ಎಸ್‍ಐಟಿ ತನಿಖೆಯಲ್ಲಿ ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಎಫ್‍ಐಆರ್ ಕೂಡ ದಾಖಲಾಗಿತ್ತು. ಇದೀಗ ಈ ಪ್ರಕರಣದ ಪ್ರಮುಖ ಸಾಕ್ಷಿ ಶ್ರೀಕಿ ತನಿಖೆಗೆ ಸಹಕರಿಸದೇ ಸತಾಯಿಸುತ್ತಿದ್ದಾನೆ.