ಬೆಂಗಳೂರು,ಫೆ.22-
IPS ಅಧಿಕಾರಿ ರೂಪ ಮೌದ್ಗಿಲ್ (Roopa Moudgil) ಮತ್ತು IAS ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ನಡುವಿನ ವಾಕ್ಸಮರ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ. ಇನ್ನು ಮುಂದೆ ಯಾವುದೇ ವಿಚಾರ ಮಾತನಾಡದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಇಬ್ಬರ ಬಾಯಿಗೂ ಬೀಗ ಹಾಕಿದ ನಂತರ ಡಿ.ರೂಪಾ ಅವರ ಫೇಸ್ ಬುಕ್ ನಲ್ಲಿ ಯ ಪೋಸ್ಟ್ ಈಗ ಗಮನ ಸೆಳೆಯುತ್ತಿದೆ.
ಇದರಲ್ಲಿ ರೂಪಾ ಅವರು, ‘ಸುಖ-ಸಂಸಾರಗಳಿಗೆ ಅಡ್ಡಿ ಆಗುತ್ತಿರುವವರನ್ನು ಪ್ರಶ್ನೆ ಮಾಡಬೇಕು ಇಲ್ಲವಾದರೆ, ಹಲವು ಕುಟುಂಬಗಳು ನಾಶವಾಗುತ್ತವೆ. ನಾನು ಧೈರ್ಯವಂತ ಮಹಿಳೆ, ನಾನು ಹೋರಾಡುತ್ತೇನೆ. ಎಲ್ಲ ಮಹಿಳೆಯರಿಗೂ ಆ ಶಕ್ತಿ ಇರುವುದಿಲ್ಲ. ಅಂತಹ ಮಹಿಳೆಯರಿಗೆ ಧ್ವನಿಯಾಗೋಣ’ ಎಂದಿದ್ದಾರೆ.
‘ನಾನು,ನನ್ನ ಪತಿ ಇನ್ನೂ ಒಟ್ಟಾಗಿದ್ದೇವೆ. ನಮ್ಮ ಕುಟುಂಬ ಚೆನ್ನಾಗಿ ಇರಬೇಕು ಎನ್ನುವ ಕಾರಣಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ಕೌಟುಂಬಿಕ ಮೌಲ್ಯಗಳಿಗೆ ಭಾರತ ಹೆಸರುವಾಸಿಯಾಗಿದೆ, ಅದನ್ನು ಮುಂದುವರಿಸೋಣ’ ಎಂದು ಹೇಳಿದ್ದಾರೆ.
ಯಾಕೆ ಅವರು ಈ ರೀತಿ ಹೇಳಿದ್ದಾರೆ ಎಂದರೆ ಮೈಸೂರು ಮೂಲದ ಸಾಮಾಜಿಕ ಕಾರ್ಯಕರ್ತ ಗಂಗರಾಜು ಎಂಬುವರ ಜೊತೆ ರೂಪ ಮೌದ್ಗಿಲ್ ನಡೆಸಿರುವ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಾಗಿದೆ. ಇದರಲ್ಲಿ ಡಿ.ರೂಪಾ ಅವರು ಸದ್ಯ ವರ್ಗಾವಣೆಗೊಂಡಿರುವ ರೋಹಿಣಿ ಸಿಂಧೂರಿ ವಿರುದ್ಧ ವೈಯಕ್ತಿಕ ಮಟ್ಟದಲ್ಲಿ ದಾಳಿ ನಡೆಸಿದ್ದಾರೆ.
ಡಿ.ರೂಪಾ ಅವರು ರೋಹಿಣಿ ಸಿಂಧೂರಿಯವರನ್ನು ಹಿಗ್ಗಾಮುಗ್ಗ ಬೈಯುತ್ತಿರುವ ಮತ್ತು ತಮ್ಮ ಸಂಸಾರದ ವಿಷಯಗಳನ್ನು ಪ್ರಸ್ತಾಪಿಸಿರುವ ಆಡಿಯೋ ಬಿಡುಗಡೆಯಾಗಿದೆ. ಆಡಿಯೋದಲ್ಲಿ ರೂಪ ಅವರು, IAS ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ದೂರು ನೀಡುವಂತೆ ಗಂಗರಾಜುಗೆ ಸಲಹೆ ಮಾಡಿದ್ದಾರೆ.
ವೈರಲ್ ಆಗಿರುವ ಆಡಿಯೋದಲ್ಲಿ ರೋಹಿಣಿ ಫ್ಯಾಮಿಲಿದು ಲ್ಯಾಂಡ್ ಬ್ಯುಸಿನೆಸ್, ರಿಯಲ್ ಎಸ್ಟೇಟ್ ಬ್ಯುಸಿನೆಸ್, ಕಬಿನಿ ಹತ್ತಿರ ಒಂದು ಲ್ಯಾಂಡ್ ಇದೆ ಅಂತಾ ಪಹಣಿ ಕೊಟ್ಟು ನನ್ನ ಗಂಡ ಲ್ಯಾಂಡ್ ರೆಕಾರ್ಡ್ಸ್ ನಲ್ಲಿ ಇರೋದ್ರಿಂದ ಹೆಲ್ಪ್ ತಗೊಂಡಿದ್ದಾಳೆ. ಯಾರೋ ಬುಜ್ಜಮ್ಮ ಅನ್ನೋರ ಲ್ಯಾಂಡ್ ಎಷ್ಟೋ ಜನರ ಹೆಸರಲ್ಲಿದೆ ತಗೋಬಹುದಾ ಎಂದು ಒಪಿನಿಯನ್ ಕೇಳಿದ್ದಾಳೆ. ನಮ್ಮವರನ್ನು ಬಳಸಿಕೊಂಡು ಲ್ಯಾಂಡ್ ಡೀಲ್ ಮಾಡಿದ್ದಾರೆ. ಗಂಡನ ರಿಯಲ್ ಎಸ್ಟೇಟ್ ಪ್ರಮೋಟ್ ಮಾಡಲು ಮಾಹಿತಿ ಸಂಗ್ರಹಿಸಿದ್ದಾರೆ. ಆಯಮ್ಮನ ದೆಸೆಯಿಂದ ನಮ್ಮ ಕುಟುಂಬ ಚೆನ್ನಾಗಿಲ್ವಲ್ಲ ಈಗ. ನಾನು ಅವರನ್ನ ಅಲ್ಲಿ ಇರೋಕೆ ಬಿಡಲ್ಲ. ನಾನೇ ಟ್ರಾನ್ಸ್‌ಫರ್ ಗೆ ರಿಕ್ವೆಸ್ಟ್ ಮಾಡಿದ್ದೀನಿ. ಆಯಮ್ಮ ಕ್ಯಾನ್ಸರ್ ಇದ್ದ ಹಾಗೆ ಎಲ್ಲರನ್ನೂ ಬುಟ್ಟಿಗೆ ಹಾಕ್ಕೋಳ್ತಾಳೆ. ಡಿ.ಕೆ.ರವಿ (DK Ravi) ವಿಷಯದಲ್ಲೂ ಆಗಿದ್ದು ಹಾಗೆನೇ. ನಾವು ನೋಡಿದ್ದೀವಲ್ಲ ಎಂದು ಹೇಳಿರುವ ಅಂಶ ಆಡಿಯೋದಲ್ಲಿದೆ.
‘ನೀವು ರೋಹಿಣಿ ಸಿಂಧೂರಿಯನ್ನು ಸಪೋರ್ಟ್ ಮಾಡುತ್ತಿದ್ದೀರಾ, ಊಸರವಳ್ಳಿ ಆಕೆ. ತನ್ನ ವೈಯಕ್ತಿಕ ಕೆಲಸ ಮಾಡಿಸಿಕೊಳ್ಳಲು ಹಲವರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಾಳೆ. ನೀವು ಫೈಲ್ ಹಿಡ್ಕೊಂಡು ಪದೇ ಪದೇ ಅವರ ಬಳಿ ಹೋಗುವುದೇನಿದೆ, ನನಗೆ ಬರುತ್ತಿರುವ ಕೋಪಕ್ಕೆ ಎದ್ದು ಹೋಗಿ ಅಲ್ಲಿಂದ ಆಚೆಗೆ’ ಎಂದು ಹೇಳುತ್ತಾರೆ.
ಸಿಂಧೂರಿಯವರು ತಮ್ಮ ಪ್ರಭಾವ ಬಳಸಿಕೊಂಡು ತಮ್ಮ ಪತಿಯ ಅಣ್ಣನನ್ನು BJP ಗೆ ಸೇರಿಸುವ ಸಿದ್ಧತೆ ಮಾಡುತ್ತಿದ್ದಾರೆ. ಮೈಸೂರು DC ಯಾಗಿದ್ದಾಗ ಕೇಳಿಬಂದ ಅಕ್ರಮ ಆರೋಪಗಳಿಂದ ಖುಲಾಸೆ ಪಡೆಯಲು ಶಾಸಕ ಸಾ.ರಾ.ಮಹೇಶ್ (Sa Ra Mahesh) ಅವರು ನೀಡಿರುವ ಕೇಸನ್ನು ವಾಪಸ್ ಪಡೆಯಲು ಸಂಧಾನ ಮಾಡಲು ಹೆಚ್.ಡಿ ಕುಮಾರಸ್ವಾಮಿ (HD Kumaraswamy), ಹೆಚ್.ಡಿ .ದೇವೇಗೌಡ (H.D. Deve Gowda), ಐಎಎಸ್ ರಮಣರೆಡ್ಡಿ (Ramana Reddy) ಮತ್ತು ಮಣಿವಣ್ಣನ್ (Manivannan) ಮೂಲಕವೂ ಒತ್ತಡ ಹಾಕುವ ಕೆಲಸ ಮಾಡಿದ್ದಾರೆ ಎಂದು ಆಡಿಯೊದಲ್ಲಿ ರೂಪಾ ಹೇಳಿದ್ದಾರೆ.
ಆಡಿಯೋ ಬಗ್ಗೆ ಗಂಗರಾಜು ಹೇಳಿದ್ದೇನು?
ಇನ್ನು ಈ ಆಡಿಯೋ ವೈರಲ್ ಬಗ್ಗೆ ಗಂಗರಾಜು ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ ತಿಂಗಳು 30ರಂದು ರೂಪಾ ನನಗೆ ಫೋನ್ ಮಾಡಿದ್ದರು. IAS ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ದೂರು ನೀಡುವಂತೆ ಸೂಚಿಸಿದ್ದರು ಎಂದು ಹೇಳಿದರು.
ರೂಪಾ ಅವರ ಫೋಟೊಗಳು ತಮ್ಮ ಬಳಿ ಇವೆ ಎಂದಿರುವ ಗಂಗರಾಜ್, ಅದನ್ನು ಬಹಿರಂಗಪಡಿಸುವುದಿಲ್ಲ ಅವರಿಗೂ ನನಗೂ ವ್ಯತ್ಯಾಸ ಇದೆ. ಅವರು ಸಾಮಾಜಿಕ ಜಾಲತಾಣದಲ್ಲಿ ಪೋಟೋ ಹಾಕಿ ಹೆಣ್ಣಿನ ತೇಜೋವಧೆ ಮಾಡಿದ್ದಾರೆ. ನೋಡುವ ದೃಷ್ಟಿ ಕೋನ ಸರಿ ಇದ್ದರೆ ಎಲ್ಲವು ಸರಿ ಇರುತ್ತದೆ. ಅರೆಬರೆ ಪೋಟೊ ಎಂದು ಹೇಳುತ್ತಿದ್ದಾರೆ. ಅದರಲ್ಲಿ ನೋಡಲಾಗದ್ದು ಏನಿದೆ ಎಂದು ಗಂಗರಾಜ್ ಪ್ರಶ್ನಿಸಿದ್ದಾರೆ.
ಅವರ ಕುಟುಂಬಕ್ಕೆ ಸಿಂಧೂರಿಯವರಿಂದ ಸಮಸ್ಯೆ ಇದ್ದರೆ ಅದನ್ನು ಕುಳಿತು ಮಾತನಾಡಬೇಕು. ಅದು ಬಿಟ್ಟು ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿ ಎಲ್ಲರೂ ನೋಡುವಂತೆ ಮಾಡುವುದು ಸರಿಯಲ್ಲ. ನಾನು ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ಸಿಂಧೂರಿ ತಪ್ಪು ಮಾಡಿದ್ದರೆ ಅವರ ವಿರುದ್ಧವೂ ಹೋರಾಟ ಮಾಡುತ್ತೇನೆ. ಆದರೆ, ರೂಪಾ ಅವರು ಒಬ್ಬರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದರು.
ನಾನು ಎಲ್ಲರ ವಿರುದ್ಧವೂ ಹೋರಾಟ ಮಾಡುತ್ತಿದ್ದೇನೆ. ನಾನು ರೋಹಿಣಿ ಪರ ಇದ್ದೇನೆ ಎಂದು ರೂಪಾ ನನ್ನನ್ನು ಪ್ರಶ್ನೆ ಮಾಡಿದರು. ರೋಹಿಣಿ ವಿರುದ್ಧ ಮಾತನಾಡು ಎಂದು ಪ್ರಚೋದನೆ ಮಾಡಿದರು. ನಾನು ಹಾಗೆ ಮಾಡಿದರೆ ಅಪರಾಧವಾಗುತ್ತದೆ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.
ಇನ್ನು ಗಂಗರಾಜು ಜೊತೆಗಿನ ಆಡಿಯೋ ಸಂಭಾಷಣೆ ವಿಚಾರವಾಗಿ ಸ್ಪಷ್ಟನೆ ನೀಡಿರುವ ಡಿ.ರೂಪಾ, ‘ಒಬ್ಬ IAS ಅಧಿಕಾರಿ ಕರ್ನಾಟಕದಲ್ಲಿ ಮೃತಪಟ್ಟಿದ್ದರು, IPS ಅಧಿಕಾರಿಯೊಬ್ಬರು ತಮಿಳುನಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಬ್ಬ IAS ದಂಪತಿ ಬೇರೆ ಆಗಿದ್ದಾರೆ. ಅದರ ಕಾರಣ ಗೊತ್ತಾಗಬೇಕಲ್ಲ’ ಎಂದರು.
‘ನಾನು ಯಾವತ್ತೂ ಭ್ರಷ್ಟಾಚಾರದ ಪರವಾಗಿ ಕೆಲಸ ಮಾಡಿಲ್ಲ. ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುತ್ತೇನೆ. ಅವತ್ತು, ಇವತ್ತಿಗೂ ನಾನು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿರುವೆ, ಗಂಗರಾಜುಗೆ ಭ್ರಷ್ಟಾಚಾರ ವಿರುದ್ಧ ಹೋರಾಟ ನಿಲ್ಲಿಸಲು ನಾನು ಹೇಳಿಲ್ಲ. ನಿಲ್ಲಿಸಿ ಎಂದು ಹೇಳಿದ್ದರೆ ಅದನ್ನು ಸಾಬೀತು ಮಾಡಲಿ. ಅನಾವಶ್ಯಕವಾಗಿ ಆಡಿಯೋ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ರೋಹಿಣಿ ಸಿಂಧೂರಿ ಭ್ರಷ್ಟಾಚಾರದ ಬಗ್ಗೆ ಮಾತ್ರ ಚರ್ಚೆ ಆಗಲಿ. ಇಲ್ಲಿ ಕೌಟುಂಬಿಕ ಮತ್ತು ವೈಯಕ್ತಿಕ ವಿಚಾರಗಳ ಚರ್ಚೆ ಬೇಡ’ ಎಂದರು.
‘ಗಂಗರಾಜು ಮೇಲೆ ಕೂಡ ಹಲವು ಕ್ರಿಮಿನಲ್ ಕೇಸ್‍ಗಳಿವೆ. ವೈಯಕ್ತಿಕ ವಿಚಾರಗಳ ಬಗ್ಗೆ ಚರ್ಚೆ ಮಾಡುವುದಾರೆ, ಯಾವ್ಯಾವ IAS ದಂಪತಿ ಬೇರ್ಪಟ್ಟಿದ್ದಾರೆ. ತಮಿಳುನಾಡಿನ ಯಾವ IPS ಅಧಿಕಾರಿ ಆತ್ಮಹತ್ಯೆ ಯಾಕೆ ಮಾಡಿಕೊಂಡರು. ಯಾರಿಂದ ಯಾರು, ಯಾಕೆ ಆತ್ಮಹತ್ಯೆ ಮಾಡಿಕೊಂಡರು, ಇದು ಚರ್ಚೆ ಆಗಲಿ’ ಎಂದು ಹೇಳಿದರು.