ಬೆಂಗಳೂರು
ಹಿರಿಯ IAS ಅಧಿಕಾರಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಮರ ಸಾರಿರುವ ಹಿರಿಯ IPS ಅಧಿಕಾರಿ ಡಿ.ರೂಪಾ (D. Roopa) ಇದೀಗ ಆತ್ಮಹತ್ಯೆ ಮಾಡಿಕೊಂಡ IAS ಅಧಿಕಾರಿ ಡಿ.ಕೆ.ರವಿ (DK Ravi) ಅವರ ಪತ್ನಿ ಕುಸುಮಾ (Kusuma) ಅವರನ್ನು ಉಲ್ಲೇಖಿಸಿ ಟ್ವೀಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
‘ಕುಸುಮಾ, ಒಬ್ಬ ಮಹಿಳೆಯಾಗಿ ತಮ್ಮ ನೋವು ನನ್ನಂತಹ ಮಹಿಳೆಗೆ ಅರ್ಥವಾಗುತ್ತದೆ. ನಿನ್ನಂತಹ ಹಲವರಿಗೆ ಇಂತಹ ನೋವು ಕೊಡುತ್ತಿರುವ ಆ ಮಹಿಳೆಗೂ ಇದು ಅರ್ಥವಾಗಬೇಕು. ಅಂತಹ ಸದ್ಬುದ್ಧಿ ಅವರಿಗೆ ಬರಲಿ’ ಎನ್ನುವ ಮೂಲಕ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದಾರೆ.
JDS ಶಾಸಕ ಸಾ.ರಾ.ಮಹೇಶ್ (Sa Ra Mahesh) ಅವರೊಂದಿಗಿನ ರಾಜಿ ಸಂಧಾನದ ಬೆನ್ನಲ್ಲೇ ರೋಹಿಣಿ ಸಿಂಧೂರಿ (Rohini Sindhuri) ಅವರಿಗೆ ಹತ್ತೊಂಬತ್ತು ಪ್ರಶ್ನೆಗಳನ್ನು ಕೇಳಿದ್ದ IPS ರೂಪಾ ಅದರಲ್ಲಿ ಡಿ.ಕೆ.ರವಿ ಸಾವಿನ ಪ್ರಕರಣ ಪ್ರಸ್ತಾಪಿಸಿದ್ದರು. ಇದರ ಬೆನ್ನಲ್ಲೇ ಕುಸುಮಾ ಅವರನ್ನು ಕುರಿತು ಮಾಡಿರುವ ಟ್ವೀಟ್ ಕುತೂಹಲ ಮೂಡಿಸಿದೆ.
ಇದಷ್ಟೇ ಅಲ್ಲ, ಡಿ.ರೂಪಾ ಅವರು ಇದೀಗ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ ರೋಹಿಣಿ ಸಿಂಧೂರಿ ಅವರ ಖಾಸಗಿ ಫೋಟೊಗಳನ್ನು ಬಹಿರಂಗಪಡಿಸಿ ಹಲವು ಅನುಮಾನದ ಪ್ರಶ್ನೆಗಳನ್ನು ಕೇಳಿದ್ದಾರೆ.
‘ಈ ರೀತಿಯ ಪಿಕ್ಚರ್ಸ್ ನಾರ್ಮಲ್ ಅನ್ನಿಸಬಹುದು. ಆದರೆ, ಒಬ್ಬ ಮಹಿಳಾ IAS ಅಧಿಕಾರಿ ಒಂದಲ್ಲ, ಎರಡಲ್ಲ ಮೂರು ಐಎಎಸ್ ಪುರುಷ ಅಧಿಕಾರಿಗಳಿಗೆ ಆಗಾಗ ಇವುಗಳನ್ನು ಹಾಗೂ ಈ ರೀತಿಯ ಅನೇಕ ಪಿಕ್ಸ್ ಗಳನ್ನು ಒನ್ ಟು ಒನ್ ಕಳಿಸ್ತಾರೆ ಅಂದ್ರೆ ಅದಕ್ಕೆ ಏನರ್ಥ? ಇದು ಆಕೆಯ ಪ್ರೈವೆಟ್ ಮ್ಯಾಟರ್ ಆಗುವುದಿಲ್ಲ. IAS ಸರ್ವಿಸ್ conduct rules ಪ್ರಕಾರ ಅಪರಾಧ. ಈ ಪಿಕ್ಸ್ ಗಳ ನೈಜತೆ ಬಗ್ಗೆ ಯಾವುದೇ ತನಿಖಾ ಸಂಸ್ಥೆ ಕೂಡಾ ತನಿಖೆ ಮಾಡಬಹುದು. ಸಲೂನ್ ಹೇರ್‌ಕಟ್ ಚಿತ್ರ, ತಲೆದಿಂಬು ಇಟ್ಟು ಮಲಗಿ ತೆಗೆದಿರುವ ಚಿತ್ರ ನಾರ್ಮಲ್ ಅನ್ನಿಸಬಹುದು ಕೆಲವರಿಗೆ. ಕಳಿಸಿರುವ ಸನ್ನಿವೇಶ speaks otherwise’ ಎಂದಿದ್ದಾರೆ. ಈ ಎಲ್ಲವೂ ಹಲವು ಸಂದೇಹಗಳಷ್ಟೇ ಅಲ್ಲ, ಅನೇಕ ಪ್ರಶ್ನೆಗಳಿಗೆ ಅವಕಾಶ ಕಲ್ಪಿಸಿದೆ.