ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಮತ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಿ.ರೂಪಾ ಮೌದ್ಗಿಲ್ ನಡುವಿನ ಜಟಾಪಟಿ ತೀವ್ರಗೊಂಡಿದೆ.
ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಅಕ್ರಮದಲ್ಲಿ ಶಾಮೀಲಾಗಿರುವ ಅನುಮಾನಗಳಿದ್ದು ಈ ಬಗ್ಗೆ ತನಿಖೆಯ ಅಗತ್ಯವಿದೆ ಎಂದು ರೂಪಾ ಮೌದ್ಗೀಲ್ ಹೇಳಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಆರು ಪುಟಗಳ ಪತ್ರ ಬರೆದಿರುವ ರೂಪ ನಿಗಮದ ಅಧ್ಯಕ್ಷರಾಗಿ ಎಲ್ಲಾ ನಿಯಮ ಗಾಳಿಗೆ ತೂರಿರುವ ರಾಘವೇಂದ್ರ ಶೆಟ್ಟಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಿಗಮದ ಮಂಡಳಿಯ ಸಭೆಯಲ್ಲಿ ಬೆದರಿಕೆ ಹಾಕಿದ್ದಾರೆ ಈ ಹಿನ್ನೆಲೆಯಲ್ಲಿ ಇವರ ವಿರುದ್ಧ ಪೊಲೀಸರಿಗೆ ದೂರು ನೀಡಲು ಅನುಮತಿ ನೀಡುವಂತೆ ಕೋರಿದ್ದಾರೆ.
ರಾಘವೇಂದ್ರ ಶೆಟ್ಟಿ ಯಾವುದೋ ಕಾರಣಕ್ಕೆ ಎಂ.ಜಿ. ರಸ್ತೆಯಲ್ಲಿರುವ ಕರಕುಶಲ ಅಭಿವೃದ್ಧಿ ನಿಗಮದ ಪ್ರಧಾನ ಕಚೇರಿಯಲ್ಲಿರುವ ಸಿಸಿಟಿವಿ ಡಿವಿಆರ್ ವಿರೂಪಗೊಳಿಸಿದ್ದಾರೆ ಈ ಸಂಬಂಧ ದೂರು ಕೂಡಾ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ತಮಗೆ ಬೇಕಾದಂತೆ ಆಪ್ತ ಸಿಬ್ಬಂದಿ ನೇಮಕ ಮಾಡಿಕೊಂಡು ಅವರಿಗೆ ನಿಗಮದ ವತಿಯಿಂದ ಸಂಬಳ ಕೊಡಿಸಿದ್ದಾರೆ. ಇವರ ಆಪ್ತ ಸಹಾಯಕನಾಗಿ ನೇಮಕಗೊಂಡ ವ್ಯಕ್ತಿ ಪಿಎಸ್ ಐ ನೇಮಕ ಅಕ್ರಮದಲ್ಲಿ ಸಿಕ್ಕಿಬಿದ್ದಿದ್ದಾರೆ. ಇದು ನಿಗಮದ ಘನತೆಗೆ ಅಪಚಾರ ತಂದಂತಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವಾಹನ ದುರ್ಬಳಕೆ, ಮಹಿಳಾ ಸಿಬ್ಬಂದಿ ಜೊತೆ ಅನುಚಿತ ವರ್ತನೆ ತೋರಿರುವ ಇವರು ನಿಗಮಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಮಾಡಿ ಅಮಾನತುಗೊಂಡಿರುವ ಹಣಕಾಸು ವಿಭಾಗದ ವ್ಯವಸ್ಥಾಪಕರನ್ನು ಮರು ನಿಯೋಜನೆಗೆ ಪ್ರಯತ್ನ ನಡೆಸಿದ್ದು ಇದರಲ್ಲಿ ನಾಲ್ಕೈದು ಕೋಟಿ ವಹಿವಾಟು ನಡೆದಿರುವ ಸಾಧ್ಯತೆಯಿದೆ ಎಂದು ಹೇಳಿರುವ ಅವರು ಚೆಕ್ ಬೌನ್ಸ್ ಸೇರಿದಂತೆ ಇವರ ಹಲವು ಅಕ್ರಮಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ..