ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು. ಶೈಕ್ಷಣಿಕವಾಗಿ ಹಿಂದಿನಿಂದಲೂ ಉನ್ನತ ಮಟ್ಟದಲ್ಲಿರುವ ಜಿಲ್ಲೆ. ರಾಜಕೀಯವಾಗಿಯೂ ಅತ್ಯಂತ ಹೆಚ್ಚು ಪ್ರಾಮುಖ್ಯತೆ ಪಡೆದಿರುವ ಪ್ರದೇಶ. ಮೈಸೂರು ಜಿಲ್ಲೆಯೊಂದಿಗೆ ನೆರೆಯ ಕೊಡಗು ಜಿಲ್ಲೆ ಸೇರಿ ಇದನ್ನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಎಂದು ಕರೆಯಲಾಗುತ್ತದೆ.
ದಕ್ಷಿಣದ ಕಾಶ್ಮೀರ ಎಂದೇ ಖ್ಯಾತವಾಗಿರುವ ಕೊಡಗು ಜಿಲ್ಲೆ ಪ್ರಾಕೃತಿಕ ಸೌಂದರ್ಯದ ಖನಿ. ದೇಶಕ್ಕೆ ಅಪ್ರತಿಮ ಶೂರ ಸೇನಾನಿಗಳನ್ನು ಕಳುಹಿಸಿಕೊಟ್ಟ ವೀರಭೂಮಿ.ನಾಗರಹೊಳೆ ಅಭಯಾರಣ್ಯ ಹೊಂದಿಕೊಂಡಿರುವ ಈ ವಿಭಿನ್ನ ಭೌಗೋಳಿಕ ಪ್ರದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆ ಈ ಬಾರಿ ದೇಶದ ಗಮನ ಸೆಳೆದಿದೆ.
ಒಂದು ಕಾಲದಲ್ಲಿ ಈ ಪ್ರದೇಶ ಕಾಂಗ್ರೆಸ್ ಭದ್ರಕೋಟೆಯಾಗಿತ್ತು.ಆದರೆ ಈಗ ಕೊಡಗು ಬಿಜೆಪಿ ಕೋಟೆಯಾದರೆ,ಮೈಸೂರು ಮಿಶ್ರ ಫಲಿತಾಂಶದ ನಾಡಾಗಿದೆ.
ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅದ್ಭುತ ಗೆಲುವು ಸಾಧಿಸಿದೆ.ಕೊಡಗು ಬಿಜೆಪಿಯ ಕೈ ಜಾರಿದೆ.ಮೈಸೂರಿನಲ್ಲೂ ಹೆಚ್ಚಿನ ಸಾಧನೆಯ ಉತ್ಸಾಹದಿಂದಿರುವ ಕಾಂಗ್ರೆಸ್ ಪಕ್ಷ ಕಳೆದುಹೋಗಿರುವ ತನ್ನ ಗತ ವೈಭವವನ್ನು ಇಲ್ಲಿ ಮರಳಿ ಪಡೆಯುವ ಪ್ರಯತ್ನದಲ್ಲಿದೆ.
1962ರಿಂದಲೂ ಇದು ಮೈಸೂರು ಜಿಲ್ಲಾ ವ್ಯಾಪ್ತಿಯ ಲೋಕಸಭಾ ಕ್ಷೇತ್ರವಾಗಿತ್ತು. 2009ರಲ್ಲಿ ನಡೆದ ಕ್ಷೇತ್ರ ಪುನರ್ ವಿಂಗಡಣೆ ಪರಿಣಾಮವಾಗಿ ಮಂಗಳೂರು ಲೋಕಸಭಾ ಕ್ಷೇತ್ರದ ತೆಕ್ಕೆಯಲ್ಲಿದ್ದ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳನ್ನು ಮೈಸೂರಿನೊಂದಿಗೆ ಸೇರಿಸಿದ ಬಳಿಕ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರವಾಗಿ ಮಾರ್ಪಾಡುಗೊಂಡಿದೆ
ಕ್ಷೇತ್ರ ಪುನರ್ ವಿಂಗಡಣೆಯ ಬಳಿಕ ಇಲ್ಲಿ ನಡೆದ 3 ಚುನಾವಣೆಗಳಲ್ಲಿ 2 ಬಾರಿ ಬಿಜೆಪಿ, 1 ಬಾರಿ ಕಾಂಗ್ರೆಸ ಜಯ ಗಳಿಸಿದೆ. ಇನ್ನು1962ಕ್ಕೂ ಮೊದಲು ಕೊಡಗು ಸ್ವತಂತ್ರವಾದ ಲೋಕಸಭಾ ಕ್ಷೇತ್ರವಾಗಿತ್ತು.1962ರಲ್ಲಿ ಮೈಸೂರು ಸಂಸ್ಥಾನದೊಂದಿಗೆ ವಿಲೀನಗೊಂಡಿತು. ಬಳಿಕ ಜಿಲ್ಲೆಯ ವಿಧಾನಸಭೆ ಕ್ಷೇತ್ರಗಳು ಮಂಗಳೂರು ಲೋಕಸಭೆ ಕ್ಷೇತ್ರಕ್ಕೆ ಸೇರಿದ್ದವು.ಈಗ ಇವುಗಳು ಮೈಸೂರು ಲೋಕಸಭೆ ಕ್ಷೇತ್ರದೊಂದಿಗೆ ಸೇರಿಕೊಂಡಿವೆ.
ಮೈಸೂರು ಕ್ಷೇತ್ರ ದೇಶದ ರಾಜಕೀಯ ಚರಿತ್ರೆಯಲ್ಲಿ ಅತ್ಯಂತ ಮುತ್ಸದ್ದಿ ರಾಜಕಾರಣಿ ಎಂದು ಜನ ಮನ್ನಣೆಗಳಿಸಿದ ಎಂ.ಎಸ್. ಗುರುಪಾದಸ್ವಾಮಿ, ರಾಜಶೇಖರ ಮೂರ್ತಿ ಅಂತಹವರನ್ನು ಕೊಡುಗೆಯಾಗಿ ನೀಡಿದೆ.
ಕ್ಷೇತ್ರದಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ಮತಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಹಿಂದುಳಿದ ಅರಸು ಸಮುದಾಯಕ್ಕೆ ಸೇರಿದವರು ಅತಿ ಹೆಚ್ಚಿನ ಬಾರಿ ಈ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿರುವುದು ವಿಶೇಷ. ಇಲ್ಲಿಂದ ರಾಜವಂಶಸ್ಥರು ಕೂಡ ಪ್ರಜಾಪ್ರಭುತ್ವ ವ್ಯವಸ್ಥೆಯ ಹಬ್ಬವಾದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ಪತ್ರಕರ್ತ ಆಗಿದ್ದ ಯುವಕ ರಾಜಕೀಯಕ್ಕೆ ಪ್ರವೇಶಿಸಿದಾಗ ಅವರಿಗೆ ನೀರೆರೆದು ‘ಪೋಷಿಸಿದ’ ಕ್ಷೇತ್ರವಿದು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಮಂದಿ ಜನತಾ ಪರಿವಾರದ ಘಟಾನುಘಟಿ ನಾಯಕರು ಮೈಸೂರಿನವರೇ ಆದರೂ ಕೂಡ ಒಮ್ಮೆಯೂ ಇಲ್ಲಿಂದ ಜನತಾ ಪರಿವಾರದ ಅಭ್ಯರ್ಥಿ ಸಂಸತ್ತನ್ನು ಪ್ರವೇಶಿಸಿಲ್ಲ. ಆದರೆ ನಾಲ್ಕು ಸಲ ಬಿಜೆಪಿ ಇಲ್ಲಿ ಗೆದ್ದು ಬೀಗಿದೆ.
ಇತಿಹಾಸವನ್ನು ಗಮನಿಸಿದರೆ, ಈ ಕ್ಷೇತ್ರದಲ್ಲಿ ಕುರುಬ ಸಮಾಜದವರು ಮೂರು ಬಾರಿ ಗೆದ್ದಿದ್ದಾರೆ. ವೀರಶೈವ– ಲಿಂಗಾಯತರೂ ಗೆಲುವಿನ ಸವಿ ಉಂಡಿದ್ದಾರೆ. ಆದರೆ, 1984ರ ಚುನಾವಣೆಯಿಂದ ಹಿಡಿದು 2004ರವರೆಗೆ ಪ್ರಬಲ ಜಾತಿಗಳೆನಿಸುವ ವೀರಶೈವ–ಲಿಂಗಾಯತ ಅಥವಾ ಒಕ್ಕಲಿಗರು ಆಯ್ಕೆಯಾಗಿರಲಿಲ್ಲ. 1984, 1989, 1996 ಹಾಗೂ 1999ರಲ್ಲಿ ಅರಸು ಸಮಾಜದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಗೆದ್ದಿದ್ದರು. 1991ರಲ್ಲಿ ಕೂಡ ಇದೇ ಸಮಾಜದ ಚಂದ್ರಪ್ರಭಾ ಅರಸು ಜಯಿಸಿದ್ದರು. 1998 ಹಾಗೂ 2004ರಲ್ಲಿ ಗೆದ್ದಿದ್ದವರು ಸಿ.ಎಚ್. ವಿಜಯಶಂಕರ್. ಅವರು ಕುರುಬ ಸಮಾಜಕ್ಕೆ ಸೇರಿದವರು. 2009ರಲ್ಲಿ ಜಯಿಸಿದ ಎಚ್.ವಿಶ್ವನಾಥ್ ಕೂಡ ಕುರುಬ ಸಮಾಜದವರು. 2004ರಿಂದೀಚೆಗೆ ನಡೆದ ಎರಡೂ ಚುನಾವಣೆಗಳಲ್ಲಿ ಒಕ್ಕಲಿಗ ಸಮಾಜದ ಪ್ರತಾಪ ಸಿಂಹ ಅವರಿಗೆ ಮತದಾರರು ಆಶೀರ್ವಾದ ಮಾಡಿದ್ದಾರೆ.
ಸದ್ಯ ನಡೆಯುತ್ತಿರುವ ಚುನಾವಣೆ ಹಲವಾರು ಕಾರಣಗಳಿಂದ ಗಮನ ಸೆಳೆದಿದೆ ಬಿಜೆಪಿಯ ಹಾಲಿ ಸಂಸದ ಪ್ರತಾಪ ಸಿಂಹ ಅವರಿಗೆ ಟಿಕೆಟ್ ನಿರಾಕರಿಸಿ ರಾಜ ವಂಶಸ್ಥ ಯದುವೀರ್ ಒಡೆಯರ್ ಅವರಿಗೆ ಟಿಕೆಟ್ ನೀಡಿದೆ. ಮೈಸೂರು ಪ್ರದೇಶದಲ್ಲಿ ರಾಜ ವಂಶಸ್ಥರ ಬಗ್ಗೆ ಗೌರವ ಹಾಗೂ ಪೂಜನೀಯ ಭಾವನೆ ಇದೆ. ಇದರ ಲಾಭ ಪಡೆಯುವ ಲೆಕ್ಕಾಚಾರದೊಂದಿಗೆ ಬಿಜೆಪಿ ಅಳೆದು ತೂಗಿ ಯದುವಿರುವ ಒಡೆಯರ್ ಅವರನ್ನು ಕಣಕ್ಕಿಳಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲೊಡ್ಡಿದೆ.
ಯದುವೀರ್ ಒಡೆಯರ್ ಅವರ ಮೂಲಕ ಬಿಜೆಪಿ ಒಡ್ಡಿರುವ ಸವಾಲನ್ನು ಎದುರಿಸಲು ಕಾರ್ಯತಂತ್ರ ಹೆಣದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಒಕ್ಕಲಿಗ ಸಮುದಾಯದ ಮತಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅದೇ ಸಮುದಾಯಕ್ಕೆ ಸೇರಿದ ಲಕ್ಷ್ಮಣ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ.
ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೊಡಗು ಜಿಲ್ಲೆಯ
ಮಡಿಕೇರಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಮಂಥರ್ ಗೌಡ, ವಿರಾಜಪೇಟೆಯಲ್ಲಿ ಎಂಎಸ್ ಪೊನ್ನಣ್ಣ, ಮೈಸೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪೈಕಿ ಪಿರಿಯಾಪಟ್ಟಣದಲ್ಲಿ ಕಾಂಗ್ರೆಸಿನ ಕೆ. ವೆಂಕಟೇಶ್, ಚಾಮರಾಜದಲ್ಲಿ ಕೆ ಹರೀಶ ಗೌಡ, ನರಸಿಂಹರಾಜದಲ್ಲಿ ತನ್ಮೀರ್ ಸೇಠ್ ಕಾಂಗ್ರೆಸ್ ನಿಂದ ಗೆದ್ದಿದ್ದಾರೆ. ಇನ್ನು ಚಾಮುಂಡೇಶ್ವರಿಯಿಂದ ಜಿಟಿ ದೇವೇಗೌಡ, ಹುಣಸೂರಿನಿಂದ ಅವರ ಪುತ್ರ ಹರೀಶ್ ಗೌಡ ಜೆಡಿಎಸ್ ನಿಂದ ಗೆದ್ದಿದ್ದಾರೆ. ಬಿಜೆಪಿಗೆ ಲಭಿಸಿರುವ ಏಕೈಕ ಕ್ಷೇತ್ರವೆಂದರೆ ಅದು ಕೃಷ್ಣರಾಜ ಮಾತ್ರ. ಅಲ್ಲಿ ಟಿಎಸ್ ಶ್ರೀವತ್ಸ ಶಾಸಕರಾಗಿದ್ದಾರೆ.
ರಾಜ ಮನೆತನ ಮತ್ತು ಜನಸಾಮಾನ್ಯರ ನಡುವಿನ ಹೋರಾಟದಂತೆ ಬಿಂಬಿತವಾಗುತ್ತಿರುವ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಪರವಾಗಿ ಜೆಡಿಎಸ್ ನ ಎಲ್ಲ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡುತ್ತಿರುವುದು ಅಭ್ಯರ್ಥಿ ಯದುವೀರ್ ಅವರಿಗೆ ಆನೆ ಬಲ ಬಂದಂತಾಗಿದೆ ಅಭ್ಯರ್ಥಿ ಆಯ್ಕೆ ಸಮಯದಲ್ಲಿ ಬಿಜೆಪಿಯಲ್ಲಿ ಉಂಟಾಗಿದ್ದ ಗೊಂದಲ ಬಗೆಹರಿದಿದ್ದು ಎಲ್ಲರೂ ಪಕ್ಷದ ಸೂಚನೆಯನ್ನು ಪಾಲಿಸುತ್ತಿರುವುದು ಗಮನಸೆಳೆಯುತ್ತದೆ.
ಮೈಸೂರು ಲೋಕಸಭಾ ಕ್ಷೇತ್ರದ ಚರಿತ್ರೆಯನ್ನು ಗಮನಿಸಿದಾಗ ಬಹುತೇಕ ಸಮಯದಲ್ಲಿ ಜಾತಿವಾರು ಲೆಕ್ಕಾಚಾರ ಮರೆತು ಅಭ್ಯರ್ಥಿಗೆ ಮಣೆ ಹಾಕಿದ್ದು ಕಂಡುಬರುತ್ತದೆ. ಈ ಬಾರಿಯೂ ಅದು ಪುನರಾವರ್ತನೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕೆಲಸ ಮಾಡುತ್ತಿದ್ದಾರೆ ಪ್ರಧಾನಿ ಮೋದಿ ಪರವಾದ ಅಲೆ ಮತ್ತು ರಾಜವಂಶಸ್ಥರ ಬಗೆಗಿನ ಮತದಾರರು ಹೊಂದಿರುವ ಗೌರವವನ್ನು ಬಿಜೆಪಿ ಪರವಾಗಿ ನೆಚ್ಚಿಕೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು, ಸರ್ಕಾರ ರೂಪಿಸಿರುವ ಗ್ಯಾರಂಟಿ ಯೋಜನೆಗಳು ಅಲ್ಪಸಂಖ್ಯಾತ, ಒಕ್ಕಲಿಗ, ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯಗಳ ಮತಗಳ ಕ್ರೂಡೀಕರಣ ಕಾಂಗ್ರೆಸ್ ಕಾಂಗ್ರೆಸ್ ಕೈಹಿಡಿಯಲಿವೆ ಎಂದು ನಂಬಲಾಗಿದೆ.
ಕ್ಷೇತ್ರದಲ್ಲಿ ಒಂದು ಸುತ್ತು ಹಾಕಿದಾಗ ರಾಜ ವಂಶಸ್ಥರ ಪರವಾಗಿ ಗೌರವ, ಮತ್ತು ಪ್ರೀತಿ ಕಂಡುಬರುತ್ತದೆ ಜೊತೆಗೆ ನರೇಂದ್ರ ಮೋದಿ ಅವರ ಪರವಾಗಿ ಅಭಿಪ್ರಾಯವೂ ಕೇಳಿಬರುತ್ತದೆ ಅಯೋಧ್ಯೆಯಲ್ಲಿನ ರಾಮಮಂದಿರದ ಬಾಲರಾಮ ಮೂರ್ತಿಯ ವಿಗ್ರಹ ಕೆತ್ತಿದ್ದ ಶಿಲ್ಪಿ, ಮೈಸೂರಿನವರು ಎಂಬ ವಿಷಯವು ಕೂಡ ಚರ್ಚೆಗೆ ಬರುತ್ತಿದೆ ಕೆಲವು ಅಂಶಗಳು ಬಿಜೆಪಿಯ ಪರವಾಗಿ ಗೋಚರಿಸುತ್ತವೆ.
ಕಾಂಗ್ರೆಸ್ ಪರವಾಗಿ ಗ್ಯಾರಂಟಿ ಎಲೆ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ ಚುನಾವಣೆಯಲ್ಲಿ ಒಂದು ವೇಳೆ ಕಾಂಗ್ರೆಸ್ ಅಭ್ಯರ್ಥಿ ಸೋತರೆ ಸಿದ್ದರಾಮಯ್ಯ ಅವರು ಅಧಿಕಾರ ತ್ಯಾಗ ಮಾಡಬೇಕಾಗುತ್ತದೆ ಎಂಬ ಅಂಶ ಕೂಡ ಚರ್ಚೆಯಲ್ಲಿರುವುದು ಕಾಂಗ್ರೆಸ್ಸಿಗೆ ಕೊಂಚ ಬಲತಂದು ಕೊಟ್ಟಿದೆ.