ಬೆಂಗಳೂರು,ಏ.8- ಉತ್ತರ ಭಾರತದ ಗ್ರಾಹಕರನ್ನ ದೃಷ್ಟಿಯಲ್ಲಿ ಇಟ್ಟುಕೊಂಡು ಬೆಂಗಳೂರಿನಲ್ಲಿ ಹಾಲು ಮತ್ತು ಮೊಸರು ಮಾರಾಟಕ್ಕೆ ಮುಂದಾಗಿರುವ ಅಮೂಲ್ (Amul) ನಿರ್ಧಾರದ ವಿರುದ್ಧ ಇದೀಗ ಕನ್ನಡಿಗರು ತಿರುಗಿ ಬಿದ್ದಿದ್ದಾರೆ.
ಈ ಹಿಂದೆ ಕೇಂದ್ರ ಗೃಹ ಸಚಿವ ಮಾರುಕಟ್ಟೆ ಮತ್ತು ಬ್ರಾಂಡ್ ಮೌಲ್ಯ ಹೆಚ್ಚಳದ ದೃಷ್ಟಿಯಿಂದ ಗುಜರಾತ್ ನ ಅಮೂಲ್ ಜೊತೆ ಕೆಎಂಎಫ್ ಅನ್ನು ವಿಲೀನಗೊಳಿಸಬೇಕೆಂಬ ಎಂಬ ಪ್ರಸ್ತಾಪ ಮಾಡಿದ್ದರು. ಇದಕ್ಕೆ ಕರ್ನಾಟಕದ ಜನತೆ ಮತ್ತು ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಇದರ ಬೆನ್ನೆಲು ಇದು ಪ್ರಸ್ತಾಪವಲ್ಲ ಕೇವಲ ಸಲಹೆ ಮಾತ್ರ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿತು. ಈ ವಿವಾದ ಮಾಸುವ ಮುನ್ನವೇ ಆನ್ಲೈನ್ ಮೂಲಕ ಅಮೂಲ್ ಹಾಲು ಮತ್ತು ಮೊಸರು ಮಾರಾಟಕ್ಕೆ ಮುಂದಾಗುವುದು ಕೋಲಾಹಲವನ್ನು ಸೃಷ್ಟಿಸಿದೆ.
ಗುಜರಾತ್‍ನ ಅಮೂಲ್ ವಿರುದ್ಧ ಕಿಡಿ ಕಾರಿರುವ ಕನ್ನಡಿಗರು ಇದೀಗ `Save Nandini’ ಅಭಿಯಾನ ಆರಂಭಿಸಿದ್ದಾರೆ. ಆನ್‍ಲೈನ್ ಮೂಲಕ ಮನೆ ಬಾಗಿಲಿಗೆ ಹಾಲು, ಮೊಸರು ಸರಬರಾಜು ಮಾಡಲು ಮುಂದಾಗಿರುವ ಅಮೂಲ್ ಕ್ರಮದಿಂದ ಕನ್ನಡಿಗರ ಹೆಮ್ಮೆಯ ಸಂಸ್ಥೆಯಾಗಿರುವ ನಂದಿನಿ ಸಂಸ್ಥೆಗೆ ಬೀಗ ಜಡಿಯುವ ಪರಿಸ್ಥಿತಿ ಬರಲಿದೆ ಎಂದು ಆರೋಪಿಸಿರುವ ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ಸೇವ್ ನಂದಿನಿ ಅಭಿಯಾನ ಆರಂಭಿಸಿದ್ದಾರೆ.
ಅಮೂಲ್‍ನೊಂದಿಗೆ ಕೆಎಂಎಫ್ ವಿಲೀನ ವಿವಾದದ ಬೆನ್ನಲ್ಲೆ ಅಮೂಲ್ ಉದ್ಯಮ ವಿಸ್ತರಿಸುತ್ತಿರುವುದಕ್ಕೆ ಕೆರಳಿ ಕೆಂಡವಾಗಿರುವ ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ಸೇವ್ ನಂದಿನಿ ಕೆಎಂಎಫ್ ಹ್ಯಾಷ್‍ಟ್ಯಾಗ್‍ನೊಂದಿಗೆ ಅಭಿಯಾನ ಆರಂಭಿಸಿದ್ದಾರೆ.
ಟ್ವಿಟರ್‍ನಲ್ಲಿ ಆರಂಭಿಸಲಾಗಿರುವ ಸೇವ್ ನಂದಿನಿ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಯಾವುದೇ ಕಾರಣಕ್ಕೂ ಅಮೂಲ್ ಸಂಸ್ಥೆ ಬೆಳೆಯಲು ಬಿಡುವುದಿಲ್ಲ ಎಂದು ಕೆಲವರು ಶಪಥ ಮಾಡಿದ್ದಾರೆ.
ನಾವು ನಂದಿನಿ ಹಾಲು, ಮೊಸರನ್ನಲ್ಲದೆ ಬೇರೆ ಯಾವುದೇ ಬ್ರಾಂಡ್ ಬಳಸುವುದಿಲ್ಲ. ನಮ್ಮ ನಂದಿನಿಯನ್ನು ಈಗ ಕನ್ನಡಿಗರಾದ ನಾವೇ ಕಾಪಾಡಿಕೊಳ್ಳಬೇಕು. ನಂದಿನಿಯನ್ನಷ್ಟೇ ಬಳಸೋಣ ಎಂದು ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಕುಮಾರಸ್ವಾಮಿ ಎಚ್ಚರಿಕೆ:
ಗುಜರಾತ್ ಮೂಲದ ಅಮೂಲ್ ನಂದಿನಿ ಸಂಸ್ಥೆಯನ್ನು ನುಂಗಿ ಹಾಕಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ. ಒಂದು ವೇಳೆ ಬಿಜೆಪಿಗರು ತಮ್ಮ ಅಮೂಲ್ ಪ್ರೀತಿಯನ್ನು ಮುಂದುವರೆಸಿದರೆ ಮುಂಬರುವ ಚುನಾವಣೆಯಲ್ಲಿ ಕನ್ನಡಿಗರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ.
ಈ ಮಧ್ಯೆ ನಂದಿನಿ ಜಾಗಕ್ಕೆ ಅಮೂಲ್ ತಂದು ಕೂರಿಸುವ ಪ್ರಯತ್ನವನ್ನು ಬಿಜೆಪಿ ಮುಖಂಡರು ಕೈ ಬಿಡಬೇಕು. ಇಲ್ಲದಿದ್ದರೆ ರಾಜ್ಯಕ್ಕೆ ಬರುವ ಅಮೂಲ್ ಉತ್ಪನ್ನಗಳಿಗೆ ಬೆಂಕಿ ಹಚ್ಚಬೇಕಾಗುತ್ತದೆ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಎಚ್ಚರಿಸಿದ್ದಾರೆ.
ನಂದಿನಿ ಸಂಸ್ಥೆಯನ್ನು ವ್ಯವಸ್ಥಿತವಾಗಿ ಮುಳುಗಿಸಲು ಬಿಜೆಪಿ ಸರ್ಕಾರ ಹವಣಿಸುತ್ತಿದೆ ಎಂದು ಆರೋಪಿಸಿರುವ ಹಲವಾರು ಕನ್ನಡ ಪರ ಸಂಘಟನೆಗಳು ನಂದಿನಿ ಉಳಿಸಿ ಅಭಿಯಾನದಲ್ಲಿ ಕೈ ಜೋಡಿಸಿದ್ದಾರೆ.

