ಬೆಂಗಳೂರು, ಜ.18: ಮುಂಬರುವ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಸಮುದಾಯಗಳ ಬಹುದಿನದ ಬೇಡಿಕೆಯಾದ ಒಳ ಮೀಸಲಾತಿ ವಿಷಯದಲ್ಲಿ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
ವಿಧಾನಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ನೀಡಿದ ಭರವಸೆಯಂತೆ ಈ ನಿರ್ಧಾರ ಕೈಗೊಂಡಿದ್ದು. ಇನ್ನೂ ಒಳ ಮೀಸಲಾತಿ ಕುರಿತು ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿ ಕೇಂದ್ರ ಸರ್ಕಾರದ ಹೆಗಲೇರಿದೆ.
ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳಿಗೆ ಒಳ ಮೀಸಲಾತಿಯನ್ನು ಕಲ್ಪಿಸಲು ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ
ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಭೆಯ ನಂತರ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಸುದ್ದಿಗಾರರೊಂದಿಗೆ ತಿಳಿಸಿದರು.
ಸಂವಿಧಾನದ 341ನೇ ವಿಧಿಗೆ ಮೂರನೇ ಖಂಡವನ್ನು ಸೇರಿಸುವ ಮೂಲಕ ಪರಿಶಿಷ್ಟರಲ್ಲಿ ಒಳ ಮೀಸಲು ಅನುಷ್ಠಾನಕ್ಕೆ ತರುವಂತೆ ಶಿಫಾರಸು ಮಾಡಲಾಗುತ್ತದೆ ಎಂದು ವಿವರಿಸಿದರು.
ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರಗಳಿಗೆ ಯಾವುದೇ ಅಧಿಕಾರ ಇಲ್ಲ. ಕೇಂದ್ರ ಸರ್ಕಾರವು ಸಂವಿಧಾನದ 341ನೇ ವಿಧಿಗೆ ಹೊಸತಾಗಿ ಖಂಡ (3) ಅನ್ನು ಸೇರಿಸಿದರೆ ಮಾತ್ರ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸಲು ಅವಕಾಶವಿದೆ. ಒಳ ಮೀಸಲಾತಿ ಕೇಂದ್ರದ ಅಧಿಕಾರ
ವ್ಯಾಪ್ತಿಯಲ್ಲಿದೆ ಎಂದು ಪ್ರತಿಪಾದಿಸಲಾಗುವುದು ಎಂದು ತಿಳಿಸಿದರು.
ಪರಿಶಿಷ್ಟ ಜಾತಿಗಳಿಗೆ ಸಂವಿಧಾನದ ವಿಧಿ 15 ಮತ್ತು 16ರಂತೆ ಮೀಸಲಾತಿ ಮತ್ತು ಇತರ ಸೌಲಭ್ಯ ನೀಡಲಾಗಿದೆ. ಈ ಪಟ್ಟಿಯಲ್ಲಿರುವ ಎಲ್ಲರಿಗೂ ಮೀಸಲಾತಿ ಮತ್ತು ಸೌಲಭ್ಯಗಳಲ್ಲಿ ಸಮಾನ ಅವಕಾಶ ಕಲ್ಪಿಸಲು ಜನಸಂಖ್ಯೆ ಆಧಾರದಲ್ಲಿ ವರ್ಗೀಕರಣ ಮಾಡುವುದು ಸೂಕ್ತ. ಆದ್ದರಿಂದ, ಸಂವಿಧಾನದ ವಿಧಿ 341ಕ್ಕೆ ಹೊಸತಾಗಿ ಖಂಡ 3 ಅನ್ನು ಸೇರ್ಪಡೆ ಮಾಡಬೇಕಿದೆ’ ಎಂದು ವಿವರಿಸಿದರು
2011ರ ಜನಗಣತಿಯಂತೆ ಒಟ್ಟು 101 ಪರಿಶಿಷ್ಟ ಜಾತಿಗಳ ಜಾತಿವಾರು ಜನಸಂಖ್ಯೆಯನ್ನು ಪರಿಗಣಿಸಿ ನಾಲ್ಕು ಗುಂಪುಗಳಾಗಿ ವರ್ಗೀಕರಿಸಿ, ಒಳ ಮೀಸಲಾತಿ ಅನುಷ್ಠಾನ ಮಾಡಬೇಕು.ಗುಂಪುಗಳ ವರ್ಗೀಕರಣ, ಶೇಕಡವಾರು ಮೀಸಲಾತಿ ನಿಗದಿಪಡಿಸಬೇಕಿದ್ದು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಭೋವಿ, ಬಂಜಾರ, ಕೊರಮ, ಕೊರಚ ಜಾತಿಗಳನ್ನು ಉಳಿಸಿಕೊಳ್ಳುವಂತೆ ನಿರ್ಣಯ ಕೈಗೊಳ್ಳಲಾಗಿದೆ.
ಪರಿಶಿಷ್ಟ ಜಾತಿಗಳಲ್ಲಿ ವರ್ಗೀಕರಣದ ಬಗ್ಗೆ ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಉಷಾ ಮೆಹ್ರಾ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರ ರಚಿಸಿದ ರಾಷ್ಟ್ರೀಯ ಆಯೋಗವು ಸಂವಿಧಾನದ ಅನುಚ್ಛೇದ 341ರಲ್ಲಿ ಹೊಸತಾಗಿ ಖಂಡ (3)ನ್ನು ಸೇರಿಸುವ ಕುರಿತಂತೆ ಶಿಫಾರಸು ಮಾಡಿದೆ. ಅದನ್ನು ಯಥಾವತ್ ಸೇರಿಸುವಂತೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸು ಮಾಡಲಿದೆ. 341(1)ನೇ ಖಂಡದಲ್ಲಿ ಅಧಿಸೂಚಿಸಲಾದ ಅಥವಾ 341(2)ನೇ ಖಂಡದ ಪ್ರಕಾರ ಸಂಸತ್ತು ರೂಪಿಸಿದ ಪಟ್ಟಿಯಲ್ಲಿರುವ ಯಾವುದೇ ಜಾತಿ, ಜನಾಂಗ ಅಥವಾ ಬುಡಕಟ್ಟು ಅಥವಾ ಜನರ ಗುಂಪುಗಳಿಗೆ ಸಂಬಂಧಿಸಿದಂತೆ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಂದ ನೀಡಿದ ಶಿಫಾರಸಿನ ಆಧಾರದಲ್ಲಿ ಕೇಂದ್ರ ಸರ್ಕಾರವು ಉಪ ವರ್ಗೀಕರಣವನ್ನು ಮಾಡಬಹುದು ಅಥವಾ ಉಪ ವರ್ಗೀಕರಣವನ್ನು ತೆಗೆದುಹಾಕಲು 341(3) ಖಂಡವು ಅವಕಾಶ ಕಲ್ಪಿಸುತ್ತದಎಂದು ವಿವರಿಸಿದರು.
ಸಚಿವ ಸಂಪುಟ ಉಪ ಸಮಿತಿಯು ಪರಿಶಿಷ್ಟ ಜಾತಿಗಳನ್ನು 4 ಉಪ ಗುಂಪುಗಳಾಗಿ ವರ್ಗೀಕರಿಸಿ ಶೇಕಡವಾರು ಮೀಸಲಾತಿ ನಿಗದಿಪಡಿಸಿದೆ. ಅದಕ್ಕೆ ಅನುಮೋದನೆ ನೀಡಿದೆ. ಹೀಗಾಗಿ, ಇನ್ನು ಮುಂದೆ ಎ.ಜೆ. ಸದಾಶಿವ ಆಯೋಗದ ವರದಿಯು ಅಪ್ರಸ್ತುತವಾಗಲಿದೆ ಎಂದು ತಿಳಿಸಿದರು.

