ಬೆಂಗಳೂರು, ಜು.5:
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್ ಸಿ ಎಸ್ ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (ಟಿ ಎಸ್ ಪಿ) ಅಡಿಯಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು39,121.46 ಕೋಟಿ ವೆಚ್ಚದ ಕ್ರಿಯಾ ಯೋಜನೆಗೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ರಾಜ್ಯ ಅಭಿವೃದ್ಧಿ ಪರಿಷತ್ ಅನುಮೋದನೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯೋಜನೆಗಳು, ಅನುದಾನ ಹಾಗೂ ಕಳೆದ ವರ್ಷದ ಬಳಕೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಸ್‌ಸಿಎಸ್‌ಪಿ ಅಡಿಯಲ್ಲಿ 27,673.96 ಕೋಟಿ ಮತ್ತು ಟಿಎಸ್‌ಪಿ ಅಡಿಯಲ್ಲಿ 11,447.51 ಕೋಟಿ ವೆಚ್ಚ ಮಾಡಲಾಗುವುದು. ಕಳೆದ ವರ್ಷಕ್ಕೆ ಹೋಲಿಸಿದರೆ 3,900 ಕೋಟಿಯಷ್ಟು ಹೆಚ್ಚಿನ ವೆಚ್ಚ ಮಾಡಲಾಗುತ್ತದೆ’ ಎಂದು ವಿವರ ನೀಡಿದರು.
ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಲು 91 ಕೋಟಿ ಒದಗಿಸಲಾಗಿದೆ. ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಎದುರಿಸಲು ತರಬೇತಿ ಪಡೆಯಲು ದೆಹಲಿಗೆ ಹೋಗುವ ಈ ಸಮುದಾಯಗಳ ಅಭ್ಯರ್ಥಿಗಳಿಗೆ ನೀಡುತ್ತಿದ್ದ ಮಾಸಿಕ ಪ್ರೋತ್ಸಾಹಧನವನ್ನು 10,000ದಿಂದ 15,000ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಈ ಅಭ್ಯರ್ಥಿಗಳಿಗಾಗಿ ದೆಹಲಿಯಲ್ಲೇ ಒಂದು ವಸತಿ ನಿಲಯ ನಿರ್ಮಿಸುವುದಕ್ಕೂ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.
ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನದಲ್ಲಿ 14,282 ಕೋಟಿಯನ್ನು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅಡಿಯಲ್ಲಿ ವೆಚ್ಚ ಮಾಡಲಾಗುವುದು ಎಂದರು.
ಕಾಯ್ದೆ ಜಾರಿಯಾಗಿ ಹತ್ತು ವರ್ಷಗಳಾಗಿದೆ. ಈ ಅವಧಿಯಲ್ಲಿ ಪರಿಶಿಷ್ಟರಿಗೆ ಶೇಕಡ 65ರಷ್ಟು ಅನುಕೂಲವಾಗಿದೆ ಎಂಬ ವರದಿ ಸಮೀಕ್ಷೆಯಲ್ಲಿ ಬಂದಿದೆ. ಮುಂದೆ ಪ್ರತಿ ಕುಟುಂಬವನ್ನೂ ಸಂಪರ್ಕಿಸಿ ಮಾಹಿತಿ ಸಂಗ್ರಹಿಸುವ ಪ್ರಸ್ತಾವವಿದೆ ಎಂದು ತಿಳಿಸಿದರು.
ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನ ಬಳಕೆಯಲ್ಲಿ ಲೊಪ ಎಸಗುವವರು, ಅನುದಾನ ಬಳಸದೇ ಉಳಿಸುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
Previous Articleಡೆಂಗ್ಯೂ,ಜೀಕಾ ನಿಯಂತ್ರಣಕ್ಕೆ ದಿನೇಶ್ ಗುಂಡೂರಾವ್ ಸೂಚನೆ.
Next Article ಮುಡಾ ಅಕ್ರಮ ಆರೋಪಕ್ಕೆ ದಿನಕ್ಕೊಂದು ತಿರುವು.

