ಬೆಂಗಳೂರು.
ಶಾಲಾ ಕಾಲೇಜುಗಳ ಸಮೀಪದಲ್ಲಿ ಮದ್ಯಪಾನ ಮತ್ತು ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ ಅಷ್ಟೇ ಅಲ್ಲ ಶಾಲಾ-ಕಾಲೇಜುಗಳ ಸಮೀಪದಲ್ಲಿ ತಂಬಾಕು ಉತ್ಪನ್ನಗಳು ಮತ್ತು ಮಧ್ಯ ಮಾರಾಟ ಮಾಡುವಂತಿಲ್ಲ.
ತಂಬಾಕು ಉತ್ಪನ್ನಗಳ ಮಾರಾಟದ ವಿರುದ್ಧ ಸಮರ ಸಾರಿರುವ ಅಧಿಕಾರಿಗಳು ಶಾಲಾ-ಕಾಲೇಜುಗಳ ಸಮೀಪದಲ್ಲಿರುವ ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆಯೇ ಎಂಬ ಬಗ್ಗೆ ಕಾಲಕಾಲಕ್ಕೆ ತಪಾಸಣೆ ನಡೆಸಿ ಕ್ರಮ ಕೈಗೊಳ್ಳುತ್ತಿದ್ದಾರೆ ಆದರೆ ಮದ್ಯ ಮಾರಾಟ ವಿಷಯದಲ್ಲಿ ಇಂಥಹ ಕ್ರಮಗಳು ನಡೆಯುತ್ತಿಲ್ಲ ಎಂಬ ಆಕ್ಷೇಪ ಕೇಳಿ ಬಂದಿದೆ.
ಸಾರ್ವಜನಿಕರು, ಶಾಲಾ ಮಕ್ಕಳು ಹಾಗೂ ಪಾಲಕರಲ್ಲಿ ವ್ಯಸನ ಮುಕ್ತಗೊಳಿಸುವ ಬಗ್ಗೆ ಜಾಗೃತಿ ಮೂಡಿಸಲು ಹೈಕೋರ್ಟ್ ನ ಬಾಲ ನ್ಯಾಯ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು ಕೆಲವೊಂದು ಕಠಿಣ ಕ್ರಮ ಜರುಗಿಸುವ ತೀರ್ಮಾನಕ್ಕೆ ಬರಲಾಗಿದೆ.
ಮದ್ಯಪಾನದಿಂದ ಹಾಗುವ ದುಷ್ಪರಿಣಾಮಗಳ ಕುರಿತು ಮಕ್ಕಳು ಮತ್ತು ಪೋಷಕರಲ್ಲಿಸಜಾಗೃತಿ ಮೂಡಿಸಲು ಕ್ರಿಯಾ ಯೋಜನೆ ರೂಪಿಸಲು ಸಮನ್ವಯ ಸಾಧಿಸುವಂತೆ ತಿಳಿಸಲಾಗಿದೆ.
ಇದರ ಜೊತೆಗೆ ಶಾಲಾ-ಕಾಲೇಜುಗಳ ಅಕ್ಕ ಪಕ್ಕದಲ್ಲಿ
ಬಾರ್ ಅಥವಾ ಮಧ್ಯದ ಅಂಗಡಿಗಳು ಇದ್ದಲ್ಲಿ ಅವುಗಳನ್ನು ತಕ್ಷಣವೇ ಮುಚ್ಚಿಸುವಂತೆ ಅಬಕಾರಿ ಇಲಾಖೆಗೆ ಸೂಚನೆ ನೀಡಿದೆ.
ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಆಯುಕ್ತರು ಶಿಕ್ಷಣ ಇಲಾಖೆ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ. ಬಾಲ ನ್ಯಾಯ ಸಮಿತಿಯಲ್ಲಿ ಪ್ರಸ್ತಾಪಿಸಿರುವ ವಿಷಯಗಳಂತೆ, ಶಾಲಾ-ಕಾಲೇಜುಗಳ ಸಮೀಪ ಮದ್ಯದಂಗಡಿಗಳಿದ್ದು ಅವುಗಳಿಂದ ವಿದ್ಯಾಭ್ಯಾಸ ಹಾಗೂ ನಿರ್ವಹಣೆಗೆ ತೊಂದರೆಯುಂಟಾಗುತ್ತಿದ್ದಲ್ಲಿ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳು ಅಬಕಾರಿ ಇಲಾಖೆಗೆ ದೂರು ಸಲ್ಲಿಸಲು ತಿಳಿಸಬೇಕು ಎಂದು ಹೇಳಿದ್ದಾರೆ.
ಇದರನ್ವಯ ಶಿಕ್ಷಣ ಸಂಸ್ಥೆಗಳ ಬಳಿ ಮದ್ಯದಂಗಡಿಗಳಿದ್ದು, ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಾಗೂ ನಿರ್ವಹಣೆಗೆ ತೊಂದರೆಯುಂಟಾಗುತ್ತಿದ್ದಲ್ಲಿ ಸಂಬಂಧಪಟ್ಟ ಶೈಕ್ಷಣಿಕ ಸಂಸ್ಥೆಗಳು ಅಬಕಾರಿ ಇಲಾಖೆಗೆ ದೂರು ಸಲ್ಲಿಸುವಂತೆ ಪ್ರೌಢ ಶಿಕ್ಷಣ ನಿರ್ದೇಶಕರು ಎಲ್ಲ ಜಿಲ್ಲಾ ಉಪ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.