ಮಂಗಳೂರು,ಸೆ.22-ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆ ಎನ್ಐಎ ಅಧಿಕಾರಿಗಳು ಇಂದು ಮುಂಜಾನೆ ದಾಳಿ ನಡೆಸಿ ಎಸ್ ಡಿಪಿಐ ಮುಖಂಡರಾದ ಅಬ್ದುಲ್ ಖಾದರ್ ಹಾಗೂ ಅಬೂಬಕ್ಕರ್ ನನ್ನು ವಶಕ್ಕೆ ಪಡೆದಿದ್ದಾರೆ. ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಎಸ್ ಡಿಪಿಐ, ಪಿಎಫ್ಐ ಕಚೇರಿಗೆ, ಕೂಳೂರು, ಕಾವೂರು, ಉಪ್ಪಿನಂಗಡಿ, ಬಜಪೆ ಕಿನ್ನಿಪದವು, ವಿಟ್ಲ ಬೊಳಂತೂರು ಮೊದಲಾದ ಕಡೆ ಮುಖಂಡರ ಮನೆಗೆ, ಪುತ್ತೂರು ಹಾಗೂ ಬಂಟ್ವಾಳದ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.
ದಾಳಿಯ ಸಂದರ್ಭದಲ್ಲಿ ಹಲವು ದಾಖಲೆ ಪತ್ರಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ.
ಮಂಗಳೂರಿನಲ್ಲಿ ದಾಳಿ ವೇಳೆ ಪಿಎಫ್ ಐ, ಎಸ್ ಡಿಪಿಐ ಕಾರ್ಯಕರ್ತರು ಜಮಾಯಿಸಿ ದಾಳಿ ವಿರುದ್ಧ ಪ್ರತಿಭಟನೆ ನಡೆಸಿದರು. ಪೊಲೀಸರು ಅವರನ್ನು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತರ ನೇತೃತ್ವದ ಪೊಲೀಸ್ ತಂಡಗಳು ದಾಳಿ ವೇಳೆ ಎನ್ ಐಎ ಅಧಿಕಾರಿಗಳಿಗೆ ಸಾಥ್ ನೀಡಿದ್ದಾರೆ. ಶಿವಮೊಗ್ಗ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆ ಬೆಳಗ್ಗೆ 6 ಗಂಟೆ ವೇಳೆಗೆ ಎನ್ಐಎ ದಾಳಿ ನಡೆದಿದೆ.
ಕೊಪ್ಪಳದಲ್ಲೂ ಅರೆಸ್ಟ್:
ದೇಶದ ಹಲವು ರಾಜ್ಯಗಳಲ್ಲಿ ದಾಳಿ ನಡೆಸಿರುವ ಎನ್ ಐಎ ಅಧಿಕಾರಿಗಳು ನಗರದಲ್ಲಿ ದಾಳಿ ಕೈಗೊಂಡು ಪಿಎಫ್‍ಐ ಸಂಘಟನೆಯ ಜಿಲ್ಲಾಧ್ಯಕ್ಷನನ್ನು ಬಂಧಿಸಿದ್ದಾರೆ.
ಗಂಗಾವತಿ ನಗರದ ಪಿಎಫ್‍ಐ ಸಂಘಟನೆಯ ಜಿಲ್ಲಾಧ್ಯಕ್ಷ ಅಬ್ದುಲ್ ಫೈಯಾಜ್‍ನನ್ನು ಬಂಧಿಸಿ ಬೆಂಗಳೂರಿನ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ಕೈಗೊಂಡಿದ್ದಾರೆ.
ಭಯೋತ್ಪಾದನೆಗೆ ಧನಸಹಾಯ, ತರಬೇತಿ ಶಿಬಿರಗಳನ್ನು ಆಯೋಜಿಸುವುದು ಮತ್ತು ನಿಷೇಧಿತ ಸಂಸ್ಥೆಗಳಿಗೆ ಸೇರಲು ಜನರನ್ನು ಮೂಲಭೂತವಾಗಿ ರೂಪಿಸುವ ವ್ಯಕ್ತಿಗಳ ವಸತಿ ಮತ್ತು ಅಧಿಕೃತ ಆವರಣದಲ್ಲಿ ಈ ಹುಡುಕಾಟಗಳನ್ನು ನಡೆಸಲಾಗುತ್ತಿದೆ