ಮಂಗಳೂರು: ಕರಾವಳಿಯ ಹಲವು ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಲೆ ಸುರಿಯುತ್ತಿರುವ ಹಿನ್ನೆಲೆ ಆಯಾ ಭಾಗದಲ್ಲಿ ಅಪಾರ ನಷ್ಟಗಳು ಸಂಭವಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೂಡ ವರುಣನ ಆರ್ಭಟಕ್ಕೆ ಜನರು ತತ್ತರಿಸಿ ಹೋಗಿದ್ದರು. ರಜೆ ಸಾರಲಾಗಿದ್ದ ಶಾಲಾ ಕಾಲೇಜುಗಳು ಇಂದಿನಿಂದ ಪುನಃ ಪ್ರಾರಂಭವಾಗಿದೆ. ಇಂದು ಮಳೆಯ ಅಬ್ಬರ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ, ಆದರೂ ಕುಡ ಮಂಗಳೂರಿನಲ್ಲಿ ಮತ್ತೆ ಮತ್ತೆ ಕಡಲ್ಕೊರೆತ ಉಂಟಾಗುತ್ತಿದ್ದು, ಜನರು ಭೀತಿಯಿಂದ ಜೀವನ ಸಾಗಿಸುವಂತಾಗಿದೆ.
ಮಂಗಳೂರಿನ ಬೈಕಂಪಾಡಿ, ಮೀನಕಳಿಯ ಭಾಗದಲ್ಲಿ ಭಾರೀ ಕಡಲ್ಕೊರೆತ ಸಂಭವಿಸಿದ್ದು, ಅಲೆಗಳ ಅಬ್ಬರಕ್ಕೆ ಕಾಂಕ್ರೀಟ್ ರಸ್ತೆಯೇ ಸಮುದ್ರಪಾಲಾಗಿದೆ. ರಸ್ತೆ ಕೊಚ್ಚಿಕೊಂಡು ಹೋದ ಬೆನ್ನಲ್ಲೇ ಹತ್ತಾರು ಮನೆಗಳಿಗೆ ಅಪಾಯ ಎದುರಾಗಿದ್ದು, ಅಲೆಗಳು ಬಡಿದು ಮನೆಗಳು ಸಮುದ್ರ ಪಾಲಾಗುವ ಆತಂಕದಲ್ಲಿ ಜನರು ಬದುಕುತ್ತಿದ್ದಾರೆ.