ಬೆಂಗಳೂರು : ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ ಮೊದಲ ಮಾನವ ರಹಿತ ಯುದ್ಧ ವಿಮಾನದ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ. ಈ ಮೂಲಕ ಭಾರತೀಯ ವೈಮಾನಿಕ ಪಡೆಗೆ ದೊಡ್ಡ ಶಕ್ತಿ ಬಂದಂತಾಗಿದ್ದು, ವಿಜ್ಞಾನಿಗಳ ಸಾಧನೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಡಿಆರ್‌ಡಿಒ ವಾಯುನೆಲೆಯಲ್ಲಿ ನಡೆದ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದ್ದು ಪ್ರಧಾನಿ ಸಚಿವಾಲಯ ಅಭಿನಂದನೆ ಸಲ್ಲಿಸಿದೆ.
ಇಂದು ನಡೆದ ಹಾರಾಟದಲ್ಲಿ ಮಾನವರಹಿತ ವೈಮಾನಿಕ ವಾಹನ ಸಂಪೂರ್ಣ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸಿತು. ಆಗಸಕ್ಕೆ ಹಾರಿದ ವಿಮಾನವು ಅಷ್ಟೇ ನಿಖರವಾಗಿ ಕೆಳಗೆ ಇಳಿದು ಭರವಸೆ ಮೂಡಿಸಿತು. ರಕ್ಷಣಾ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸುತ್ತಿರುವ ಭಾರತ, ಮಾನವರಹಿತ ವಿಮಾನಗಳ ಅಭಿವೃದ್ಧಿಯಂತಹ ಕ್ಲಿಷ್ಟಕರ ತಂತ್ರಜ್ಞಾನದಲ್ಲಿಯೂ ಮೈಲುಗಲ್ಲು ಸಾಧಿಸಿದಂತಾಯಿತು.
ಬೆಂಗಳೂರಿನಲ್ಲಿರುವ ಡಿಆರ್‌ಡಿಒ ಅಂಗಸಂಸ್ಥೆ ವೈಮಾನಿಕ ಅಭಿವೃದ್ಧಿ ಸಂಸ್ಥೆ (ಎಡಿಇ) ಇದನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ. ವೈಮಾನಿಕ ವಾಹನವನ್ನು ನಿರ್ಮಿಸುವ, ವಿನ್ಯಾಸಗೊಳಿಸುವ ಹಾಗು ನಿಯಂತ್ರಿಸುವ ಏವಿಯಾನಿಕ್ಸ್ ವ್ಯವಸ್ಥೆಯನ್ನು ಸ್ಥಳೀಯವಾಗಿ ಸಿದ್ಧಗೊಂಡ ವಿಮಾನವು ಒಳಗೊಂಡಿದೆ.