ಬೆಂಗಳೂರು,ಫೆ.20-
IAS ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಮತ್ತು IPS ಅಧಿಕಾರಿ ಡಿ.ರೂಪಾ (D Roopa) ನಡುವಿನ ಸಂಘರ್ಷ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ಇಬ್ಬರೂ ನಡೆಸುತ್ತಿರುವ ವಾಕ್ಸಮರ ಸರ್ಕಾರವನ್ನು ಮುಜುಗರಕ್ಕೆ ಸಿಲುಕುವಂತೆ ಮಾಡಿದೆ.
ಕಳೆದೆರಡು ದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಇಬ್ಬರ ವಿರುದ್ಧವೂ ಕ್ರಮ ಜರುಗಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚಿಸಿದ್ದಾರೆ.
ಇದರ ಬೆನ್ನಲ್ಲೇ ಶಿಸ್ತು ಉಲ್ಲಂಘನೆ, ದುರ್ನಡತೆ ಹಾಗೂ ಕರ್ನಾಟಕ ಸರ್ಕಾರದ ಸೇವಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ನೋಟಿಸ್ ನೀಡಲಾಗಿದೆ. ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತೆ ಹಾಗೂ IAS ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸೇವಾ ನಿಯಮ ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ಕಾರಣ ಕೇಳಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ನೋಟಿಸ್ ನೀಡಿದ್ದಾರೆ.
IPS ಅಧಿಕಾರಿ(IGP)ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ರೂಪ ಮೌದ್ಗಿಲ್ ಅವರಿಗೆ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ (Praveen Sood) ನೋಟೀಸ್ ನೀಡಿದ್ದಾರೆನ್ನಲಾಗಿದೆ.
ಈ ನಡುವೆ ಬೆಂಗಳೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra), IPS ಹಾಗೂ IAS ಅಧಿಕಾರಿಗಳು ತಮ್ಮನ್ನು ತಾವು ದೇವಮಾನವರು ಎಂದುಕೊಂಡಿದ್ದಾರಾ? ಇಲ್ಲಿ ಒಂದು ಆಡಳಿತ ವ್ಯವಸ್ಥೆಯೂ ಇದೆ. ಯಾವುದೇ ಅಧಿಕಾರಿಗಳು ಶಿಸ್ತು ಉಲ್ಲಂಘನೆ ಮಾಡಬಾರದೆಂಬ ನಿಯಮ ಇದ್ದರೂ ಇಬ್ಬರೂ ಜಿದ್ದಿಗೆ ಬಿದ್ದವರಂತೆ ಪರಸ್ಪರ ಆರೋಪ ಮಾಡಿದ್ದಾರೆ.
ಈ ಇಬ್ಬರಿಗೂ ಕಾನೂನಿನ ಚೌಕಟ್ಟಿನಲ್ಲಿ ಏನು ಆಗಬೇಕೋ ಅದೇ ಆಗುತ್ತದೆ ಎಂದರು. ಮುಖ್ಯಮಂತ್ರಿಗಳು ಇದರ ಬಗ್ಗೆ ಈಗಾಗಲೇ ಗಮನಹರಿಸಿದ್ದಾರೆ. ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರೊಂದಿಗೆ ಸ್ವತಃ ನಾನೇ ಮಾತುಕತೆ ನಡೆಸಿದ್ದೇನೆ. ಯಾರೇ ಆಗಲಿ ಇತಿಮಿತಿ ಇರಬೇಕು ಎಂದು ಕಿಡಿಕಾರಿದರು.
ಹಿರಿಯ ಅಧಿಕಾರಿಗಳು ಈ ರೀತಿಯಾಗಿ ಮಾಧ್ಯಮದ ಮುಂದೆ ಮಾತನಾಡುವುದು ಸರಿಯಲ್ಲ. ಶಿಸ್ತು ಉಲ್ಲಂಘನೆ ಮಾಡುವವರಿಗೆ ಕಾನೂನು ಚೌಕಟ್ಟಿನಲ್ಲಿ ಏನು ಮಾಡಬೇಕೋ ಅದನ್ನು ಮುಖ್ಯಮಂತ್ರಿಗಳು ಮಾಡಲಿದ್ದಾರೆ ಎಂದು ಉತ್ತರಿಸಿದರು.
ಇಬ್ಬರ ನಡುವೆ ಯಾವುದೋ ಹಳೆಯ ವೈಯಕ್ತಿಕ ದ್ವೇಷ ಇಲ್ಲವೇ ಸಮಸ್ಯೆಗಳಿರಬಹುದು. ಪರಸ್ಪರ ಕುಳಿತು ಮಾತುಕತೆ ಮೂಲಕ ಸಮಸ್ಯೆಯನ್ನು ಇತ್ಯರ್ಥ ಪಡಿಸಿಕೊಳ್ಳಬಹುದು. ಆದರೆ ಹಿರಿಯ ಅಧೊಕಾರಿಗಳಾಗಿ ಇವರೇ ಈ ರೀತಿ ವರ್ತಿಸಿರುವುದು ಸರಿಯಲ್ಲ. ಈ ಹಿಂದೆಯೂ ಕೂಡ ಇವರಿಬ್ಬರಿಗೆ ಎಚ್ಚರಿಕೆ ಕೊಡಲಾಗಿತ್ತು. ಆದರೂ ಈ ವರ್ತನೆ ಅತ್ಯಂತ ನೋವಿನ ಸಂಗತಿ. ಕಾನೂನಿನ ಪ್ರಕಾರ ಏನು ಶಿಕ್ಷೆಯಾಗಬೇಕೊ ಅದು ಆಗೇ ಆಗುತ್ತದೆ. ಸರ್ಕಾರ ಕಣ್ಣುಮುಚ್ಚಿ ಕುಳಿತಿಲ್ಲ ಎಂದು ಎಚ್ಚರಿಸಿದರು.
ಇಬ್ಬರೂ ಕೂಡ ಅತ್ಯಂತ ಕೆಟ್ಟದಾಗಿ ವರ್ತಿಸಿದ್ದಾರೆ. ಅವರು ವೈಯಕ್ತಿಕವಾಗಿ ಏನಾದರೂ ಮಾಡಿಕೊಳ್ಳಲಿ. ಅದು ನಮಗೆ ಸಂಬಂಧಿಸಿದ್ದಲ್ಲ. ಆದರೆ ಮಾಧ್ಯಮಗಳ ಮುಂದೆ ಬಂದು ಈ ರೀತಿ ಆಪಾದನೆ ಮಾಡಿದ್ದು ಸರಿಯಲ್ಲ. ಇಲಾಖೆಗಳಲ್ಲಿ ಅವ್ಯವಹಾರ ನಡೆದಿದ್ದರೆ ಸಂಬಂಧಪಟ್ಟವರ ಗಮನಕ್ಕೆ ತರಬೇಕು. ಅಂಥವರ ಮೇಲೆ ತನಿಖೆ ನಡೆಸಿ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಹಾದಿಬೀದಿಯಲ್ಲಿ ಮಾತನಾಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.
ಸಿಂಧೂರಿ ಭೇಟಿ:
ಇದರ ನಡುವೆ IAS ಅಧಿಕಾರಿ ರೋಹಿಣಿ ಸಿಂಧೂರಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ (Vandita Sharma) ಅವರನ್ನು ಭೇಟಿಯಾಗಿ ಲಿಖಿತ ದೂರು ಸಲ್ಲಿಸಿದರು.
ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ 3 ಪುಟಗಳ ಲಿಖಿತ ದೂರು ನೀಡಿದ ಅವರು ನಂತರ ಮಾತನಾಡಿದರು ಮಾಧ್ಯಮಗಳ ಮುಂದೆ ಬರಬಾರದೆಂಬ ನಿಯಮವಿದೆ ಹಾಗಾಗಿ ನಾನು ಮಾತನಾಡಲಿಲ್ಲ. ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ ಹಿನ್ನೆಲೆ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಿದ್ದೇನೆ ಎಂದರು.
ನನ್ನ ಕಾರ್ಯವ್ಯಾಪ್ತಿ ಬೇರೆ ಅವರ ಕಾರ್ಯವ್ಯಾಪ್ತಿ ಬೇರೆ. ಅವರು ನನ್ನ ವೈಯಕ್ತಿಕ ವಿಚಾರಗಳನ್ನು ಮಾತನಾಡಿದ್ದಾರೆ. ಅವರ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಸ್ಪಷ್ಟ ಪಡಿಸಿದರು.