ಬೆಂಗಳೂರು,ಅ.16- ಈ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಪೇ ಸಿಎಂ ಆರೋಪ ಮಾಡಿದ್ದ ಕಾಂಗ್ರೆಸ್ ವಿರುದ್ಧ ಇದೀಗ ಬಿಜೆಪಿ ಇದೇ ರೀತಿಯ ಪೋಸ್ಟರ್ ಬಿಡುಗಡೆ ಮಾಡಿ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಎಟಿಎಂ ಸರ್ಕಾರ ಎಂದು ಟೀಕಿಸಿದೆ.
ಬೆಂಗಳೂರಿನ ಹಲವೆಡೆ ನಡೆದ ಐಟಿ ದಾಳಿಯಲ್ಲಿ (ATM Sarkara) ಸುಮಾರು ನೂರು ಕೋಟಿ ರೂಪಾಯಿ ಹಣ ದೊರಕಿರುವ ಬೆನ್ನಲ್ಲೇ ಬಿಜೆಪಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಲೆಕ್ಷನ್ ಮಾಸ್ಟರ್ ಎಂದು ಗಂಭೀರ ಆರೋಪ ಮಾಡಿದೆ.
ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೈಯ್ಯಲ್ಲೊಂದು ಬ್ರೀಫ್‍ಕೇಸ್ ಹಿಡಿದುಕೊಂಡಿರುವಂತೆ ಚಿತ್ರಿಸಿದ್ದು, ಅದರ ಮುಂಭಾಗದಲ್ಲಿ ಕಲೆಕ್ಷನ್ ಮಾಸ್ಟರ್ ಎಂದು ದೂರಿದೆ.
ಮತ್ತೊಂದು ಪೋಸ್ಟ್ ನಲ್ಲಿ,ಕೆಪಿಸಿಸಿ ಪಂಚರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಕೊಟ್ಟಿರುವ ಮೊದಲ ಹಂತದ ಒಂದು ಸಾವಿರ ಕೋಟಿ ಟಾರ್ಗೆಟ್ ಯಾವ ರಾಜ್ಯಕ್ಕೆ ಎಷ್ಟು ಎಂದು ಪ್ರಶ್ನಿಸಿದೆ. ತೆಲಂಗಾಣ ಕಾಂಗ್ರೆಸ್‍ಗೆ 300 ಕೋಟಿ, ಮಿಜೊರಾಂ ಕಾಂಗ್ರೆಸ್‍ಗೆ 100 ಕೋಟಿ, ಛತ್ತೀಸ್‍ಗಡ ಕಾಂಗ್ರೆಸ್‍ಗೆ 200 ಕೋಟಿ, ರಾಜಸ್ಥಾನ ಕಾಂಗ್ರೆಸ್‍ಗೆ 200 ಕೋಟಿ ಹಾಗೂ ಮಧ್ಯಪ್ರದೇಶ ಕಾಂಗ್ರೆಸ್‍ಗೆ 200 ಕೋಟಿ ನೀಡಿರಬಹುದೇ ಎಂದು ಪ್ರಶ್ನೆ ಮಾಡಿದೆ.
ಕಮಿಷನ್ ಕಲೆಕ್ಷನ್ ಮೂಲಕ ಸಾವಿರ ಕೋಟಿ ಟಾರ್ಗೆಟ್ ಮಾಡಿ ಸಂಗ್ರಹಿಸುತ್ತಿರುವ ಕಾಂಗ್ರೆಸ್ ಹಣ ಹಂಚುವ ಮುನ್ನವೇ ಸಿಕ್ಕಿಬಿದ್ದಿದೆ ಎಂದು ಬಿಜೆಪಿ ಹೇಳಿಕೊಂಡಿದೆ. ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ್ ಕೃಷ್ಣಪ್ಪ ಅವರ ಫ್ಲಾಟ್‍ನಲ್ಲಿ ಸಂಗ್ರಹಿಸಿಟ್ಟಿದ್ದ ಒಟ್ಟು90 ಕೋಟಿ ರೂ. ಹಣವನ್ನು ಐಟಿ ವಶಪಡಿಸಿಕೊಂಡಿದೆ.