ಬೆಂಗಳೂರು, ಸೆ.16- ರಾಜ್ಯದ ಮುಖ್ಯಮಂತ್ರಿ ಹುದ್ದೆಯ ಅವಧಿ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ವಿಷಯವಾಗಿ ಯಾರೂ ಕೂಡ ಬಹಿರಂಗವಾಗಿ ಮಾತನಾಡಬಾರದು ಎಂದು ಹೈಕಮಾಂಡ್ ತಾಕೀತು ಮಾಡಿದ್ದರೂ ಇದನ್ನು ರಾಜ್ಯ ಕಾಂಗ್ರೆಸ್ ನಾಯಕರು ಪರಿಗಣನೆಗೆ ತೆಗೆದುಕೊಂಡಿಲ್ಲ.
ಈ ವಿಷಯವಾಗಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು,ಸಿದ್ದರಾಮಯ್ಯ (Siddaramaiah) ಅವರೇ ಪೂರ್ಣಾವಧಿ ಮುಖ್ಯಮಂತ್ರಿ ಯಾಗಿರುತ್ತಾರೆ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು,ಹೈಕಮಾಂಡ್ ಹಂತದಲ್ಲಿ 50-50 ಅನುಪಾತದಲ್ಲಿ ಅಧಿಕಾರ ಹಂಚಿಕೆಯಾಗಿದೆ ಎಂದು ಯಾರೂ ಹೇಳಿಲ್ಲ. ದೆಹಲಿಯಲ್ಲಿ ನಡೆದ ಸಭೆಗಳಲ್ಲಿ ನಡೆದ ಚರ್ಚೆಯ ಮಾಹಿತಿಗಳು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರಿಗೆ ಮಾತ್ರ ಗೊತ್ತು. ಈವರೆಗೂ ಅವರು ಎಲ್ಲಿಯೂ ಈ ಬಗ್ಗೆ ಮಾತನಾಡಿಲ್ಲ ಎಂದರು.
ಸಿದ್ದರಾಮಯ್ಯನವರು (Siddaramaiah) ಪೂರ್ಣಾವಧಿಯ ಮುಖ್ಯಮಂತ್ರಿಯಾಗಿರಬೇಕು ಎಂಬುದು ನನ್ನೊಬ್ಬನದೇ ಅಲ್ಲ, ಕಾಂಗ್ರೆಸ್‌ನ ಬಹುತೇಕರ ಅಭಿಪ್ರಾಯ ನಮ್ಮ ಅಭಿಪ್ರಾಯಗಳನ್ನು ಹೈಕಮಾಂಡ್ ಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಹೇಳಿದ ಅವರು ಮುಖ್ಯಮಂತ್ರಿ ಹುದ್ದೆಗೆ ಅವಧಿ ನಿಗದಿಯಾಗಿದೆ ಎಂಬುದು ಈವರೆಗೂ ಯಾರೂ ಅಧಿಕೃತವಾಗಿ ತಿಳಿಸಿಲ್ಲ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಅವರು ಪಕ್ಷದ ಅಧ್ಯಕ್ಷರಾಗಿ ಉತ್ತಮ ಸಂಘಟನೆ ಮಾಡುತ್ತಿದ್ದಾರೆ. ಅವರ ಬಗ್ಗೆ ನಾನೂ ಕೂಡ ಹಲವು ಬಾರಿ ಮೆಚ್ಚುಗೆಯ ಮಾತುಗಳನ್ನಾಡಿದ್ದೇನೆ. ಕಾಂಗ್ರೆಸ್ ಪಕ್ಷ ಮತ್ತಷ್ಟು ಉಪಮುಖ್ಯಮಂತ್ರಿಗಳನ್ನಾಗಿ ಮಾಡಬೇಕು ಎಂಬ ತಮ್ಮ ಹೇಳಿಕೆ ಡಿ.ಕೆ.ಶಿವಕುಮಾರ್ ಸೇರಿದಂತೆ ಯಾರ ವಿರುದ್ಧವೂ ಅಲ್ಲ. ಅವರು ಬೇಸರಗೊಳ್ಳುವ ಅಗತ್ಯವೂ ಇಲ್ಲ ಎಂದು ಸ್ಪಷ್ಟಪಡಿಸಿದರು ನಾನು ಉಪಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ. ಆದರೆ ಬಹಳಷ್ಟು ಮಂದಿ ಈ ವಿಷಯವಾಗಿ ತಮ್ಮೊಂದಿಗೆ ಚರ್ಚೆ ಮಾಡಿದ್ದಾರೆ. ಎಲ್ಲರ ಜೊತೆಗೂ ಸೇರಿ ಮುಂದಿನ ದಿನಗಳಲ್ಲಿ ಈ ಬಗ್ಗೆ ಹೈಕಮಾಂಡ್ ನ ಗಮನ ಸೆಳೆಯುವುದಾಗಿ ತಿಳಿಸಿದರು.
ಲೋಕಸಭೆಯ ಚುನಾವಣೆಗೆ ಸಂಬಂಧಪಟ್ಟಂತೆ ಕಾಂಗ್ರೆಸ್ ತಯಾರಿಗಳನ್ನು ನಡೆಸಿದೆ. ರಾಜಕಾರಣ ನಿರಂತರವಾಗಿ ಚಲನಶೀಲತೆ ಹೊಂದಿದೆ. ಇಲ್ಲಿ ಮೈತ್ರಿ ನಡೆಯುವುದು ಸಾಮಾನ್ಯ. ಬೇರೆಯಾಗುವುದೂ ಕೂಡ ಹೊಸದಲ್ಲ ಎಂದು ಹೇಳಿದರು.
ಜೆಡಿಎಸ್, ಬಿಜೆಪಿ ಮೈತ್ರಿಯ ಬಗ್ಗೆ ಅವರ ಪಕ್ಷಗಳಲ್ಲೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅದರಲ್ಲಿ ನಾವು ಪ್ರತಿಕ್ರಿಯಿಸುವುದು ಅನಗತ್ಯ. ಈವರೆಗಿನ ಮಾಹಿತಿ ಪ್ರಕಾರ, ಬಿಜೆಪಿಯ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಯಡಿಯೂರಪ್ಪನವರು ಮೈತ್ರಿ ಇನ್ನೂ ಪೂರ್ತಿಗೊಂಡಿಲ್ಲ ಎಂದಿದ್ದಾರೆ. ರಾಜಕಾರಣದಲ್ಲಿ ಕೆಲವರು ಸಿದ್ಧಾಂತಗಳನ್ನು ಒಪ್ಪಿಕೊಳ್ಳುತ್ತಾರೆ, ಇನ್ನೂ ಕೆಲವರು ವಿರೋಧ ಮಾಡುತ್ತಾರೆ. ಅದಕ್ಕೆ ಏನೂ ಮಾಡಲಾಗುವುದಿಲ್ಲ ಎಂದರು.
ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವುದು ನಮ್ಮ ಆದ್ಯತೆ. ಅದಕ್ಕಾಗಿ ಎಲ್ಲರ ಜೊತೆಗೂ ಚರ್ಚೆಗಳು ನಡೆಯುತ್ತಿವೆ. ಅದನ್ನು ಆಧರಿಸಿ ಪಕ್ಷದ ವರಿಷ್ಠರಿಗೆ ಸಲಹೆ ನೀಡುತ್ತೇವೆ ಎಂದರು.
ಬಿಜೆಪಿಯ ಸಂಸದರು ಕಾಂಗ್ರೆಸ್ ಸೇರುತ್ತಾರೆ ಎಂಬುದರ ಬಗ್ಗೆ ತಮಗೆ ಮಾಹಿತಿ ಇಲ್ಲ. ಅವರು ಚುನಾವಣೆ ರಾಜಕೀಯದಿಂದ ನಿವೃತ್ತರಾಗುತ್ತೇವೆ ಎಂಬುದನ್ನು ಕೇಳಿದ್ದೇನೆ. ಹೈಕಮಾಂಡ್ ಕೆಲವು ನಿರ್ಧಾರಗಳನ್ನು ಕೈಗೊಂಡಾಗ ಕೆಳಹಂತದಲ್ಲಿ ವ್ಯತ್ಯಾಸಗಳಾಗುವುದು ಸಾಮಾನ್ಯ. ಅಂತಹ ಸಂದರ್ಭದಲ್ಲಿ ಅಭಿಪ್ರಾಯಗಳು ಭಿನ್ನವಾಗಿರುವುದು ಹೊಸದಲ್ಲ ಎಂದು ಹೇಳಿದರು.
ಬಿಜೆಪಿ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬುದು ಖಚಿತವಾಗಿದೆ. ನಮ್ಮ ಪಕ್ಷದ ಶಾಸಕ ಭೀಮಣ್ಣ ಅವರು ಶಿವರಾಂ ಹೆಬ್ಬಾರ್ ಕಾಂಗ್ರೆಸ್ ಸೇರುವುದು ಖಚಿತ ಎಂದಿದ್ದಾರೆ. ಈ ರೀತಿಯ ಬೆಳವಣಿಗೆಗಳು ಸಾಮಾನ್ಯ ಎಂದರು. ಬಿಜೆಪಿಯ ಮಾಜಿ ಸಚಿವ ವಿ.ಸೋಮಣ್ಣ ಕಾಂಗ್ರೆಸ್ಗೆ ಬರುತ್ತಾರೆ. ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ಗಾಳಿಮಾತಷ್ಟೆ. ಅಂತಹ ಯಾವ ಚರ್ಚೆಗಳೂ ನಡೆದಿಲ್ಲ ಎಂದು ತಿಳಿಸಿದರು.