ಬೆಂಗಳೂರು :
ಪ್ರಧಾನಿ ಮೋದಿ ಮತ್ತು ಬಿಜೆಪಿಯವರು ದೇಶವನ್ನು ಬರ್ಬಾದು ಮಾಡಿದ್ದಾರೆ ಎಂದು ಆರೋಪಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈ ಬಾರಿ ರಾಜ್ಯದ ಜನರು ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಬಿಜೆಪಿಯನ್ನು ಕಿತ್ತೆಸೆದು ನೆಮ್ಮದಿಯ ನಾಳೆಗಳ ಕುರಿತು ಯೋಚಿಸಬೇಕೆಂದು ಮನವಿ ಮಾಡಿದ್ದಾರೆ.
ಈ ಸಂಬಂಧ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು,ಮೋದಿಯವರ ಕನಸಿನ ಸ್ಮಾರ್ಟ್‍ಸಿಟಿಗಳ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಸ್ಮಾರ್ಟ್ ಸಿಟಿ ಎಂದ ಮಂಗಳೂರು ಯಾಕೆ ಒಂದೇ ಮಳೆಗೆ ಮುಳುಗಿ ಹೋಗುತ್ತಿದೆ? ಬೆಂಗಳೂರಿನ ರಸ್ತೆಗಳು, ಕಾಲುವೆಗಳು ಏನಾಗಿವೆ ಎಂದು ಜನರು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.
ವಿರೋಧ ಪಕ್ಷಗಳನ್ನು ಆಪರೇಷನ್ ಮಾಡುವ ಉದ್ದೇಶದಿಂದ ಪೆಗಾಸಸ್ ಗೂಢಾಚಾರಿಕೆ ಮಾಡಲಾಯಿತು. ಆದರೆ ಈಗ ಕೇಂದ್ರ ಸರ್ಕಾರ ಸಮಿತಿಗೆ ಸಹಕರಿಸಿಲ್ಲ ಎಂದು ವರದಿ ನೀಡಿದೆ. ಇದನ್ನು ನೋಡಿದರೆ ಕೇಂದ್ರ ದೇಶದಲ್ಲಿ ಹಿಟ್ಲರ್‍ಗಿರಿ ನಡೆಸುತ್ತಿದೆ ಎಂದು ಅರ್ಥವಾಗುತ್ತದೆ ಎಂದಿದ್ದಾರೆ.
ಈ ಎಲ್ಲವನ್ನೂ ನೋಡಿದರೆ ಕಾರ್ಪೊರೇಟ್ ಪರವಾಗಿ ಕೆಲಸ ಮಾಡಲು ಹಣ ಕೊಟ್ಟು ಖರೀದಿಸಿ ರಚಿಸುತ್ತಿರುವ ಬಿಜೆಪಿ ಸರ್ಕಾರಗಳಿಂದ ಈ ದೇಶದ ಜನರಿಗೆ ಯಾವ ನ್ಯಾಯವೂ ಸಿಗುವುದಿಲ್ಲ. ದೇಶದ ಯುವಜನರು ಉದ್ಯೋಗವಿಲ್ಲದೆ, ದುಡಿಯುವ ಅವಕಾಶಗಳಿಲ್ಲದೆ ಅನಾಥರಾಗುತ್ತಾರೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರ ಹಿಂದೆ ವಿರೋಧ ಪಕ್ಷದವರಿದ್ದಾರೆ ಎಂದು ಹೇಳಿ ಜನರನ್ನು ಬಿಜೆಪಿಯವರು ದಾರಿ ತಪ್ಪಿಸಲು ನೋಡುತ್ತಿದ್ದಾರೆ
ಸರ್ಕಾರ ನಡೆಸುವವರಿಗೆ ಸಣ್ಣ ಲಜ್ಜೆ ಮತ್ತು ಕಾನೂನಿನ ತಿಳುವಳಿಕೆ ಇದ್ದರೆ ಹೀಗೆಲ್ಲ ಮಾತನಾಡುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ಗುತ್ತಿಗೆದಾರರ ಸಂಘದವರು ಮುಖ್ಯಮಂತ್ರಿಗಳನ್ನೂ ಭೇಟಿ ಮಾಡಿದ್ದರು. ಆದರೆ ಸಮಸ್ಯೆ ಬಗೆಹರಿಯುವ ಬದಲು, ಗುತ್ತಿಗೆದಾರರ ಸಂಘವನ್ನೆ ಒಡೆಯಲು ಪ್ರಯತ್ನಗಳು ನಡೆಯುತ್ತಿವೆ ಎಂಬ ಗಂಭೀರ ಆರೋಪವನ್ನವರು ಮಾಡುತ್ತಿದ್ದಾರೆ. ಜೊತೆಗೆ ಬಿಬಿಎಂಪಿಯಲ್ಲಿ ಶೇ.40 ರಷ್ಟಿದ್ದ ಕಮಿಷನ್ ದಂಧೆ, ಈಗ 50 ಪರ್ಸೆಂಟ್‍ಗೆ ತಲುಪಿದೆ ಎಂದು ಪತ್ರ ಬರೆದಿದ್ದಾರೆ.ಗುತ್ತಿಗೆದಾರರ ಸಂಘದವರು ಕಳೆದ ಒಂದು ವರ್ಷದಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಚೌಕಿದಾರ್ ಎಂದು ತನ್ನನ್ನು ಹೊಗಳಿಕೊಂಡ ಮೋದಿಯವರಾಗಲಿ, ರಾಜ್ಯ ಬಿಜೆಪಿ ಸರ್ಕಾರವಾಗಲಿ ಅವರ ಮನವಿಗಳನ್ನು ಗಂಭೀರವಾಗಿ ಪರಿಗಣಿಸಿದ್ದರೆ ಇವತ್ತು ಈ ಸಮಸ್ಯೆ ಬರುತ್ತಿರಲಿಲ್ಲ. ಬೆಳಗಾವಿಯ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರದ ಕಮಿಷನ್ ದಂಧೆಯಿಂದಾಗಿ ರಾಜ್ಯದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಗುಣ ಮಟ್ಟ ಹೇಗಿದೆಯೆಂದು ಜನರು ನೋಡುತ್ತಿದ್ದಾರೆ. ಪ್ರಧಾನಿ ಬಂದು ಹೋದ ಮಾರನೆ ದಿನವೆ ಹಾಕಿದ್ದ ಟಾರು ಕಿತ್ತು ಬರುತ್ತದೆ. ಮಡಿಕೇರಿಯಲ್ಲಿ ಕಳಪೆ ಕಾಮಗಾರಿ ಮಾಡಿ ಅದನ್ನು ನೋಡಲು ಹೋದರೆ ಟಾರ್ಪಾಲಿನಿಂದ ಮರೆ ಮಾಡಿ ಕಳ್ಳತನವನ್ನು ಮುಚ್ಚಿಹಾಕಲು ನೋಡುತ್ತೀರಿ. ನಿಮ್ಮ ಗೂಂಡಾಗಳನ್ನು ಬಿಟ್ಟು ದಾಂಧಲೆ ಎಬ್ಬಿಸಲು ನೋಡಿ ಜನರ ಗಮನ ಬೇರೆಡೆ ಸೆಳೆಯಲು ನೋಡುತ್ತೀರಿ.
ಬೆಂಗಳೂರಿನಲ್ಲಿ ರಸ್ತೆಗಳು ಗುಂಡಿ ಬಿದ್ದು ಎಷ್ಟು ಜನರನ್ನು ಕೊಂದಿದ್ದೀರಿ ಎಂಬ ಲೆಕ್ಕವನ್ನು ಜನರಿಗೆ ಕೊಡಿ. ಹೆಚ್ಚೂ ಕಡಿಮೆ ರಾಜ್ಯದ ಹೈಕೋರ್ಟು ವಾರದಲ್ಲಿ ಎರಡು ದಿನ ಗುಂಡಿ ಮುಚ್ಚಿ ಎಂದು ತಾಕೀತು ಮಾಡುತ್ತಿದೆ. ಗುಂಡಿ ಮುಚ್ಚಿದ ಮಾರನೆ ದಿನವೆ ಮತ್ತೆ ಗುಂಡಿ ಬೀಳುತ್ತಿವೆ.
ಆ ಗುಂಡಿಗೆ ಬಿದ್ದು ಯಾರದೊ ಮನೆಯ ಮಗ ಮರಣ ಹೊಂದುತ್ತಾನೆ. ಯಾರದೋ ಮನೆಯ ದೀಪ ಆರಿ ಹೋಗುತ್ತದೆ. ನಿಮಗೆ ಏನಾದರೂ ಮನುಷ್ಯತ್ವ ಇದ್ದರೆ ಇಂಥವೆಲ್ಲ ಕಣ್ಣಿಗೆ ಕಾಣುತ್ತದೆ.
ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ನೀರಾವರಿ ಪಿಡಬ್ಲ್ಯೂಡಿ, ಸಾರಿಗೆ, ಸಬ್ ರಿಜಿಸ್ಟ್ರಾರ್, ಅರಣ್ಯ ಇಲಾಖೆ, ಹೀಗೆ ಎಲ್ಲ ಕಡೆಯೂ ಲಂಚ ರಾಕ್ಷಸ ಕುಣಿಯುತ್ತಿದ್ದಾನೆ. ಹೀಗಿದ್ದಾಗ ಸಾಮಾನ್ಯ ಜನರು ಯಾರ ಬಳಿಗೆ ಹೋಗಬೇಕು? ವಿರೋಧ ಪಕ್ಷದ ನಾಯಕರ ಬಳಿಯೂ ಬರಲು ಸಾಧ್ಯವಾಗದಿದ್ದರೆ ಜನ ಹತಾಶರಾಗಿ ಕೈಗೆ ಕಲ್ಲು, ದೊಣ್ಣೆಗಳನ್ನು ತೆಗೆದುಕೊಂಡು ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಾರೆ ಎಂಬುದು ನೆನಪಿರಲಿ ಎಂದು ಎಚ್ಚರಿಸಿದ್ದಾರೆ.
Previous Articleಮುರುಘಾ ಶರಣರನ್ನು ಯಾಕೆ ಬಂಧಿಸಿಲ್ಲ?!
Next Article ಬಗೆಹರಿದ ಸಿಇಟಿ ಬಿಕ್ಕಟ್ಟು: ವಿದ್ಯಾರ್ಥಿಗಳು ನಿರಾಳ