ಮೈಸೂರು, ಏ.-20 : ಹುಬ್ಬಳ್ಳಿಯಲ್ಲಿ ನಡೆದ ಯುವತಿ ನೇಹಾ ಹತ್ಯೆ ಪ್ರಕರಣ ತುಂಬಾ ಆಘಾತಕಾರಿಯಾದ ಘಟನೆ ಆದರೆ ಇದನ್ನು ಪ್ರತಿಪಕ್ಷಗಳು ರಾಜಕೀಯಕ್ಕೆ ಬಳಸುತ್ತಿರುವುದು ಬೇಸರದ ಸಂಗತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಪ್ರಕರಣವನ್ನು ಬಲವಾಗಿ ಖಂಡಿಸುತ್ತೇನೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕೊಲೆಗಾರನನ್ನು ಕೂಡಲೇ ಬಂಧಿಸಲಾಗಿದೆ.ಆದರೆ ಪ್ರತಿಪಕ್ಷಗಳು ಇದನ್ನು ಲವ್ ಜಿಹಾದ್ ಎಂದು ವ್ಯಾಖ್ಯಾನ ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಸರ್ಕಾರ ತನಿಖೆಯನ್ನು ಗಂಭೀರವಾಗಿ ಕೈಗೊಂಡಿದ್ದು. ಕೊಲೆಗಾರನಿಗೆ ಉಗ್ರ ಶಿಕ್ಷೆ ನೀಡಲು ಪ್ರಯತ್ನ ಮಾಡಲಾಗುವುದು ಎಂದರು.
ರಾಜಕೀಯಕ್ಕಾಗಿ ಒಬ್ಬರ ಸಾವನ್ನು ಬಳಸಿಕೊಳ್ಳುವುದು ದುರ್ದೈವ, ಎಲ್ಲಾ ಕಾಲದಲ್ಲಿಯೂ ಕೊಲೆಗಳಾಗಿವೆ. ಹಾಗೆಂದು ಕಾನೂನು ಸುವ್ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದಲ್ಲ. ಕರ್ನಾಟಕದಲ್ಲಿ ಇರುವಷ್ಟು ಶಾಂತಿ ಸುವ್ಯವಸ್ಥೆ ಬೇರೆ ರಾಜ್ಯಗಳಲ್ಲಿಲ್ಲ. ನಾವು ಯಾವುದೇ ಕೃತ್ಯ ನಡೆದರೂ, ಅದನ್ನು ತೀವ್ರವಾಗಿ ಖಂಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ರಾಜಕೀಯಕ್ಕಾಗಿ ಒಬ್ಬರ ಸಾವನ್ನು ಬಳಸಿಕೊಳ್ಳುವುದು ದುರ್ದೈವ. ಖಂಡನೀಯ ಎಂದರು.
ರಾಜ್ಯದಲ್ಲಿ ಚುನಾವಣಾ ವಾತಾವರಣ ಉತ್ತಮವಾಗಿದ್ದು ದೇಶದಲ್ಲಿ ಅಥವಾ ಕರ್ನಾಟಕದಲ್ಲಿ ಮೋದಿ ಅಲೆ ಇಲ್ಲ. ಬಿಜೆಪಿ ಅಭ್ಯರ್ಥಿಗಳು ಮೋದಿ ಹೆಸರಿನಲ್ಲಿ ಮತ ಯಾಚಿಸುತ್ತಿದ್ದಾರೆ. ಮೋದಿಯವರ ಮೇಲೆ ಅವಲಂಬನೆಯಾಗಿದ್ದು, ಜನ ಮೋದಿ ಸರ್ಕಾರದ ವಿರುದ್ಧವಾಗಿದ್ದಾರೆ.ದೇಶದಲ್ಲಿ ಇಂಡಿಯಾ ಪರವಾದ ವಾತಾವರಣವಿದೆ ಎಂದರು.
ಕಾಂಗ್ರೆಸ್ ನ ಚೊಂಬು ಜಾಹೀರಾತನ್ನು ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿರುವುದರ ಚಿನ್ಹೆ ಎಂದು ಬಿಜೆಪಿ ಮಾತನಾಡಿರುವ ಬಗ್ಗೆ ಮಾತನಾಡಿ ನಿನ್ನೆ ಕೊಟ್ಟಿರುವ ಜಾಹೀರಾತು ಈ ದೇಶದ ಜನರಿಗೆ ಬಿಜೆಪಿ ಸರ್ಕಾರ ಖಾಲಿ ಚಂಬು ಕೊಟ್ಟಿದೆ ಎಂದು ತಿಳಿಸಲು ನೀಡಿದೆ. ದೇಶದ ಜನರಿಗೆ 15 ಲಕ್ಷ ಕೊಟ್ಟರೇ? 2 ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ದುಪ್ಪಟ್ಟು , ಅಚ್ಚೇ ದಿನ್ ಬಂದಿದೆಯೇ? ಅದಕ್ಕೆ ಚಂಬು ಕೊಟ್ಟಿದ್ದಾರೆ ಎಂದು ಜಾಹೀರಾತು ನೀಡಿದೆ ಎಂದರು.
ಮೋದಿ ಕೊಟ್ಟಿರುವ ಆಶ್ವಾಸನೆಗಳನ್ನು ಒಂದನ್ನೂ ಈಡೇರಿಸಿಲ್ಲ.ದೇಶದ ಜನರಿಗೆ ಖಾಲಿ ಚಂಬು ನೀಡಿದ್ದಾರೆ ಎಂದು ಜಾಹೀರಾತು ನೀಡಿದ್ದೇವೆ. ಅವರು ಏನಾದರೂ ಹೇಳಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೊಕ್ಕಸ ಖಾಲಿಯಾಗಿಲ್ಲ. ಎಲ್ಲಾ ಗ್ಯಾರಂಟಿ ಗಳನ್ನು ಜಾರಿ ಮಾಡಿ ಅಭಿವೃದ್ಧಿ ಕೆಲಸವನ್ನೂ ಮಾಡಿದ್ದೇವೆ ಎಂದರು.