ಬೆಂಗಳೂರು,ನ.6-ಕರ್ನಾಟಕದ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ವ್ಯಾಪಕ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಬಗ್ಗೆ ಕೇಂದ್ರ ತನಿಖಾ ಸಂಸ್ಥೆಗಳಿಂದ ತನಿಖೆ ಮಾಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಆಗಿದ್ದರೆ ಐಬಿ, ರಾ, ಸಿಬಿಐ, ಇಡಿ ಇದೆಯಲ್ಲ ಅದರಿಂದ ತನಿಖೆ ಮಾಡಿಸಲಿ. ಪ್ರಧಾನಿಯವರು ದಾಖಲೆ ಇಲ್ಲದೆ ರಾಜಕೀಯ ಕಾರಣಕ್ಕಾಗಿ ಲಘುವಾಗಿ ಮಾತನಾಡಿದ್ದಾರೆ. ದಾಖಲೆಗಳನ್ನು ಮುಂದಿಡಲಿ ಎಂದು ಹೇಳಿದರು.
ಮೋದಿ ಹೇಳಿಕೆಗಳು ಸುಳ್ಳಿನ ಕಂತೆ. ಕಳೆದ ಚುನಾವಣೆಯಲ್ಲಿ 48 ಬಾರಿ ರಾಜ್ಯಕ್ಕೆ ಬಂದು ಹೋದರೂ ಸೋತಿದ್ದಾರೆ. ಅದರಿಂದ ಹತಾಶರಾಗಿದ್ದಾರೆ. ಆದ್ದರಿಂದ ಇಲ್ಲಿ ವಿರೋಧಪಕ್ಷದ ನಾಯಕನ್ನೂ ನೇಮಕ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು. ಮಧ್ಯಪ್ರದೇಶ ಚುನಾವಣೆ ಪ್ರಚಾರದ ವೇಳೆ ಮೋದಿ ಅವರು ಕರ್ನಾಟಕ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದರು.
ಹಿಂದಿನ ಸರ್ಕಾರ ಶೇ 40 ರಷ್ಟು ಸರ್ಕಾರ ಎಂದು ಹೇಳಲಾಗುತ್ತಿತ್ತು. ಆಗಯಾರ ಸರ್ಕಾರ ಇತ್ತು? ನಾವು ಆ ಬಗ್ಗೆ ತನಿಖೆ ನಡೆಸಿದ್ದೇವೆ. ಮೋದಿ ಅವರ ಆಡಳಿತದಲ್ಲಿ ದೇಶ ದಿವಾಳಿ ಆಗಿದೆ. ರಾಜ್ಯಕ್ಕೆ ಕೊಡಬೇಕಾದ ಹಣ ಕೊಡುತ್ತಿಲ್ಲ. ಮಲತಾಯಿ ಧೋರಣೆ ತೋರಿಸುತ್ತಿದ್ದಾರೆ. ಬರಗಾಲ ಪರಿಹಾರದ ಹಣವನ್ನೂ ಕೊಡುತ್ತಿಲ್ಲ ಎಂದು ಸಿದ್ದರಾಮಯ್ಯ ಹರಿಹಾಯ್ದರು.