ಇದು ಯಾವುದೊ ಲವ್ ಜಿಹಾದ್ ಕತೆ ಅಂದುಕೊಂಡಿರಾ? ಇಲ್ಲ ಈ ಸೀತಾ ಮತ್ತು ಅಕ್ಬರ್ ಮನುಷ್ಯರಲ್ಲ. ಅವು ಸಿಂಹಗಳು. ಸೀತಾ ಹೆಣ್ಣು ಸಿಂಹವಾದರೆ ಅಕ್ಬರ್ ಗಂಡು ಸಿಂಹ. ಆದರೆ ಸಮಸ್ಯೆ ಇರುವುದು ಸಿಂಹಗಳಲ್ಲಿ ಅಲ್ಲ. ಅವುಗಳ ಹೆಸರುಗಳಲ್ಲಿ. ಸಿಲಿಗುರಿಯ ವನ್ಯಧಾಮದಲ್ಲಿ ಈ ಎರಡು ಸಿಂಹಗಳನ್ನು ಜೊತೆಯಲ್ಲಿರುವುದರಿಂದ ಹಿಂದೂಗಳ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗುತ್ತಿದೆ ಎಂದು ಕೇಸ್ ಹಾಕಿರುವುದು ವಿಶ್ವ ಹಿಂದೂ ಪರಿಷದ್ ನ (VHP) ಸ್ಥಳೀಯ ಪದಾಧಿಕಾರಿ.
ಶ್ರೀ ರಾಮನ ಪತ್ನಿ ಸೀತೆಯ ಹೆಸರಿರುವ ಸಿಂಹಿಣಿಯನ್ನು ಮುಸಲ್ಮಾನ ದೊರೆಯ ಹೆಸರಿರುವ ಸಿಂಹದೊಂದಿಗೆ ಜೊತೆಯಾಗಿರಿಸಿರುವುದು ಇವರ ಆಕ್ರೋಶಕ್ಕೆ ಕಾರಣವಾಗಿದೆ. ಅದಲ್ಲದೆ ಈ ಸಿಂಹಿಣಿ ಗಂಡು ಸಿಂಹಕ್ಕಾಗಿ ಹುಡುಕುತ್ತಿದ್ದಿದ್ದು ಸುದ್ದಿಯಾಗಿತ್ತು ಮತ್ತು ಅದು ತಮಾಷೆಯಾಗಿ ಕೂಡ ವರದಿಯಾಗಿತ್ತು. ಈಗ ಆ ಸೀತಾ ಹೆಸರಿನ ಸಿಂಹಿಣಿಯನ್ನು ಮುಸ್ಲಿಂ ಹೆಸರಿನ ಸಿಂಹದೊಂದಿಗೆ ಜೊತೆಯಾಗಿರಿಸಿರುವುದು ಧಾರ್ಮಿಕ ವಾಗಿ ಅಸಹನೀಯ ಎಂದು ದೂರಲಾಗಿದೆ. ಸೀತೆಯ ಹೆಸರು ಸಿಂಹಿಣಿಗೆ ಇಡಬಾರದು ಆ ಹೆಸರನ್ನು ಬದಲಾಯಿಸಬೇಕು ಅದು ದೇವದೂಷಣೆಯಾಗುತ್ತದೆ ಎಂದು ಕೂಡ ದೂರಿನಲ್ಲಿ ಆರೋಪಿಸಲಾಗಿದೆ. ಸಧ್ಯಕ್ಕೆ ವನ್ಯಧಾಮದಿಂದ ಏನೂ ಪ್ರತಿಕ್ರಿಯೆ ಬಂದಿಲ್ಲ.