ಬೆಂಗಳೂರು,ಮೇ.20- ನಗರದಲ್ಲಿ ಖಾಲಿಯಿರುವ ನಿವೇಶನಗಳನ್ನು ಗುರುತಿಸಿ ಮಾಲೀಕರ ಹೆಸರಿನಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ ಬೇರೆಯವರಿಗೆ ಮಾರಾಟ ಮಾಡಿ ಲಕ್ಷಾಂತರ ರೂ ಹಣ ಸಂಪಾದನೆ ಮಾಡಿದ್ದ ಮೂವರು ಮಹಿಳೆಯರು ಸೇರಿ ಐವರು ಗ್ಯಾಂಗ್ ನ್ನು ಬಂಧಿಸುವಲ್ಲಿ ವಿದ್ಯಾರಣ್ಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರ್ ಟಿನಗರದ ಎಲ್ ಆರ್ ಬಂಡೆಯ ಫೈಜ್ ಸುಲ್ತಾನಾ(33)ಸಹಕಾರ ನಗರದ ಶಾಂತಿವನದ ಕಬೀರ್ ಅಲಿಯಾಸ್ ಬಾಬು (35)ಕಲ್ಪನಾ, ಯೋಗೇಶ್ ಹಾಗು ಪೂಜಾ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ. ಅನೂಪ್ ಶೆಟ್ಟಿ ತಿಳಿಸಿದ್ದಾರೆ.
ಬಂಧಿತರಿಂದ 2.87 ಲಕ್ಷ ನಗದು,102 ಗ್ರಾಂ ಚಿನ್ನಾಭರಣ, ಟಾಟಾ ಸಫಾರಿ ಕಾರು, ನಕಲಿ ಆಧಾರ್, ಮತದಾರರ ಗುರುತಿನ ಪತ್ರ, ಪ್ಯಾನ್ ಕಾರ್ಡ್ ,ಬ್ಯಾಂಕ್ ಪಾಸ್ ಬುಕ್ ಗಳ ನಕಲು, ಹಾಗು ನೊಂದಾಯಿತ ಕಾಗದ ಪತ್ರಗಳ ನಕಲನ್ನು ಜಪ್ತಿ ಮಾಡಿ ಹೆಚ್ಚಿನ
ತನಿಖೆಯನ್ನು ಕೈಗೊಳ್ಳಲಾಗಿದೆ ಎಂದರು.
ನರಸೀಪುರ ಗ್ರಾಮದ ನಿವಾಸಿ ಸುವರ್ಣಮ್ಮ ಅವರಿಗೆ 1988ರಲ್ಲಿ ಎಚ್ಎಂಟಿ ಲೇಔಟ್ನಲ್ಲಿ ನಿವೇಶನ ಹಂಚಿಕೆಯಾಗಿತ್ತು. ಅವರ ಹೆಸರಿನಲ್ಲಿ ಕ್ರಯಪತ್ರ ಮಾಡಿಸಿಕೊಂಡಿದ್ದರು. ಕೆಲ ತಿಂಗಳ ಬಳಿಕ ನಿವೇಶನದ ಬಳಿ ತೆರಳಿದ್ದಾಗ ತನ್ನ ಹೆಸರಿನ ಮೂಲಕವೇ ನಿವೇಶನ ಮಾರಾಟ ಮಾಡಿ ವಂಚಿಸಿರುವುದು ಎಂದು ಗೊತ್ತಾಗಿದೆ. ಕೂಡಲೇ ಸುವರ್ಣಮ್ಮ ಅವರು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ತನಿಖೆ ಕೈಗೊಂಡಿದ್ದರು.
ಖಚಿತವಾದ ಮಾಹಿತಿ ಆಧರಿಸಿ ಬಂಧಿಸಿದ ಆರೋಪಿ ಕಬೀರ್ ಅಲಿ ಆರ್.ಟಿ. ನಗರ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ. ನಗರದಲ್ಲಿ ಖಾಲಿಯಿರುವ ನಿವೇಶನಗಳನ್ನು ಗುರುತಿಸಿಕೊಂಡು ಅಕ್ಕಪಕ್ಕದವರನ್ನು ವಿಚಾರಿಸಿ ನಿವೇಶನದ ಮಾಲೀಕರ ಹೆಸರು ಹಾಗು ವಿವರ ಪಡೆದುಕೊಳ್ಳುತ್ತಿದ್ದ. ಅದೇ ರೀತಿ ಸುವರ್ಣಮ್ಮಗೆ ಸೇರಿದ ಸುಮಾರು 65 ಲಕ್ಷ ಮೌಲ್ಯದ ನಿವೇಶನದ ಕಾಗದಪತ್ರಗಳನ್ನು ನಕಲಿಯಾಗಿ ಸೃಷ್ಟಿಸಿಕೊಂಡಿದ್ದ.
ಸುವರ್ಣಮ್ಮ ‘ನಕಲಿ’ ಮಗಳಾದ ಆರೋಪಿ ಕಲ್ಪನಾಗೆ ದಾನ ಮಾಡಿರುವುದಾಗಿ, ನಂತರ ‘ನಕಲಿ’ ಪತಿ ಮತ್ತೊಬ್ಬ ಆರೋಪಿ ಯೋಗೇಶ್ ನಿವೇಶನ ಹಸ್ತಾಂತರಿಸಿದ್ದ. ಬಳಿಕ ಪ್ರಮುಖ ಆರೋಪಿ ಪೈಜ್ ಸುಲ್ತಾನ ಹೆಸರಿನಲ್ಲಿ ಅಗ್ರಿಮೆಂಟ್ ಮಾಡಿಸಿಕೊಂಡು ಕೆಲ ದಿನಗಳ ಬಳಿಕ ರದ್ದು ಮಾಡಿಸಿ ಆರೋಪಿ ಯೊಗೇಶ್ ಮುಖಾಂತರ ವೆಂಕಟಸ್ವಾಮಿ ಅವರಿಗೆ 65 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಬಂದ ಹಣದಲ್ಲಿ ಸಹಚರರಿಗೆ ಕಮಿಷನ್ ನೀಡಿ ಉಳಿದ ಹಣವನ್ನು ಕಬೀರ್ ಹಾಗು ಫೈಜ್ ಸುಲ್ತಾನ ಮೋಜು ಮಸ್ತಿ ಮಾಡಿರುವುದು ಪತ್ತೆಯಾಗಿದೆ.
ಪದವೀಧರೆ ಸುಲ್ತಾನ:
ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಪೈಜ್ ಸುಲ್ತಾನ ಪದವೀಧರೆಯಾಗಿದ್ದಾಳೆ. ವಿವಾಹಿತೆಯಾಗಿರುವ ಈಕೆ ವೈಯಕ್ತಿಕ ಕಾರಣಕ್ಕಾಗಿ ಪತಿಯನ್ನು ತೊರೆದಿದ್ದಳು. ಪರಿಚಿತನಾಗಿದ್ದ ಕಬೀರ್ ಜೊತೆ ಸೇರಿಕೊಂಡು ವಂಚನೆ ಮಾರ್ಗ ಕಂಡುಕೊಂಡಿದ್ದಳು. ಸುಶಿಕ್ಷಿತೆಯಾಗಿರುವ ಈಕೆ ಗ್ರಾಹಕರೊಂದಿಗೆ ಹೇಗೆ ಮಾತನಾಡಬೇಕೆಂದು ಅರಿತಿದ್ದಳು. ಪೊಲೀಸರಿಗೆ ಅನುಮಾನ ಬಾರದಿರಲು ನಕಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮಾಡಿಸಿಕೊಂಡಿದ್ದರು. ಹಣ ಬ್ಯಾಂಕಿನಲ್ಲಿ ಜಮೆಯಾಗುತ್ತಿದ್ದಂತೆ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದಳು ಎಂದು ತಿಳಿಸಿದರು.
ಎರಡು ಪ್ರಕರಣ ಪತ್ತೆ:
ಪ್ರಮುಖ ಆರೋಪಿಯಾಗಿರುವ ಪೈಜ್ ಸುಲ್ತಾನ ಮತ್ತೊಬ್ಬ ಆರೋಪಿ ಕಬೀರ್ ಅಲಿ ಸೇರಿ ಇದೇ ರೀತಿಯಾಗಿ ಸಂಜಯನಗರದ
ನಿವೇಶನವೊಂದಕ್ಕೆ ನಕಲು ದಾಖಲಾತಿಗಳನ್ನು ಸೃಷ್ಟಿಸಿ ಅಕ್ರಮವೆಸಗಿರುವುದು ವಿಚಾರಣೆಯಲ್ಲಿ ಪತ್ತೆಯಾಗಿದೆ.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ ಕಲಂ 447, 427, 465, 468, 471, 420, 120(ಬಿ), 34 ಅನ್ವಯ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ. ಆರೋಪಿಗಳ ಬಂಧನದಿಂದ ಎರಡು ಪ್ರಕರಣ ಪತ್ತೆಯಾಗಿವೆ.
Previous Articleವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿ ಬಂಧನ
Next Article ಕವಿವಿ ತರಗತಿಗಳಿಗೂ ರಜೆ ಘೋಷಣೆ