ಸೈಬರ್ ವಂಚಕರ ಜೊತೆ ಸಂಪರ್ಕ ಇದೆ ಎಂಬ ಕಾರಣದಿಂದ ಬೆಂಗಳೂರು ಪೊಲೀಸರು ದೇಶದ ಗಡಿ ಕಾಯುವ ಯೋಧನ ಬ್ಯಾಂಕ್ ಖಾತೆ ಫ್ರೀಜ್ ಮಾಡಿದ್ದಾರೆ. ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ಯೋಧ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಪರದಾಡುವಂತಾಗಿದೆ.
ಈಗ ಯೋಧ ಫ್ರೀಜ್ ಆಗಿರುವ ತಮ್ಮ ಬ್ಯಾಂಕ್, ಅಕೌಂಟ್ ಅನ್ನು ಅನ್ಫ್ರೀಜ್ ಮಾಡುವಂತೆ ಯೋಧ ಸುರೇಂದ್ರ ಚೌದರಿ ಅವರು ತಮ್ಮ ಎಕ್ಸ್ ಖಾತೆಯ ಮೂಲಕ ಬೆಂಗಳೂರು ನಗರ ಪೊಲೀಸರಿಗೆ ಮನವಿ ಮಾಡಿದ್ದಾರೆ. ಬ್ಯಾಂಕ್ ಖಾತೆ ಅನ್ಫ್ರೀಜ್ ಮಾಡಲು ಸೂಕ್ತ ದಾಖಲೆಗಳನ್ನು ತರುವಂತೆ ಉತ್ತರ ವಿಭಾಗದ ಸೆನ್ ಪೊಲೀಸರು ಮೆಸೇಜ್ ಮಾಡಿದ್ದಾರೆ.
ತಾವು ಜಮ್ಮು ಕಾಶ್ಮೀರದ ರಿಮೋಟ್ ಕಂಟ್ರೋಲ್ ಏರಿಯಾದಲ್ಲಿ ಕೆಲಸ ಮಾಡುತ್ತಿದ್ದೇನೆ.ಆದರೆ ಇದಕ್ಕಾಗಿ ಕೆಲಸ ಬಿಟ್ಟು ಆ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಖುದ್ದಾಗಿ ಬರಲು ಆಗುತ್ತಿಲ್ಲ, ವಾಸ್ತವ ಪರಿಸ್ಥಿತಿ ಅರ್ಥ ಮಾಡಿಕೊಂಡು ದಯವಿಟ್ಟು ಅಕೌಂಟ್ ಅನ್ಫ್ರೀಜ್ ಮಾಡಿ ಎಂದು ಕೋರಿದ್ದಾರೆ.
ನನ್ನ ಅಕೌಂಟ್ ಫ್ರೀಜ್ ಮಾಡಿರುವುದರಿಂದ ನನಗೆ ತೀವ್ರ ಸ್ವರೂಪದ ಆರ್ಥಿಕ ಸಂಕಷ್ಟ ಎದುರಾಗಿದೆ. ನನ್ನ ಸಂಬಳವನ್ನೇ ನಂಬಿಕೊಂಡು ನನ್ನ ಕುಟುಂಬ ಜೀವನ ಮಾಡುತ್ತಿದೆ. ಪ್ರತಿ ತಿಂಗಳು ಸಂಬಳ ಆಗುತ್ತಿದ್ದಂತೆ ಮನೆಗೆ ಹಣ ಕಳುಹಿಸಬೇಕು. ಹಲವು ಇಎಂಐಗಳು ತುಂಬಬೇಕಿದೆ, ಬ್ಯಾಂಕ್ ಖಾತೆ ನಿರ್ವಹಣೆ ಸಾಧ್ಯವಿಲ್ಲ ಈಗ ಏನು ಮಾಡುವುದಕ್ಕೆ ಆಗುತ್ತಿಲ್ಲ. ಒಂದು ಕಡೆ ಇಎಂಐ ಕಟ್ಟಿಲ್ಲ ಎಂದು ಬ್ಯಾಂಕ್ನಿಂದ ಕರೆಗಳು ಬರುತ್ತಿವೆ. ಈ ಕಡೆ ನಾನು ಯಾವುದೇ ಸೈಬರ್ ವಂಚಕರ ಜೊತೆ ಸಂಪರ್ಕ ಇಲ್ಲ. ಆದರೂ ನನ್ನ ಅಕೌಂಟ್ ಫ್ರೀಜ್ ಮಾಡಲಾಗಿದೆ, ದಯವಿಟ್ಟು ಅನ್ ಪ್ರೀಜ್ ಮಾಡಿ ಎಂದು ಬರೆದುಕೊಂಡಿದ್ದಾರೆ.
ಟ್ವೀಟ್ನ್ನು ಪರಿಗಣನೆಗೆ ತೆಗೆದುಕೊಂಡಿರುವ ಬೆಂಗಳೂರು ಪೊಲೀಸರು ಪ್ರಕರಣದ ಬಗ್ಗೆ ಪರಿಶೀಲನೆ ನಡೆಸುವ ಭರವಸೆ ನೀಡಿದ್ದಾರೆ.

