ಬೆಂಗಳೂರು,ಜ.30- ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸಲು ಕಾಂಗ್ರೆಸ್‍ನಲ್ಲಿ ಭಾರಿ ಪೈಪೋಟಿ ಉಂಟಾಗಿದೆ
ಒಕ್ಕಲಿಗ,ಅಲ್ಪಸಂಖ್ಯಾತ ಮತ್ತು ಪರಿಶಿಷ್ಟ ಜಾತಿಯ ಖೋಟಾದಲ್ಲಿ ಸ್ಥಾನ ಪಡೆಯಲು ಹಲವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದುಂಬಾಲು ಬಿದ್ದಿದ್ದಾರೆ.
ಈ ನಡುವೆ ಎಐಸಿಸಿ ಮಾಜಿ ಅಧ್ಯಕ್ಷೆ, ಹಿರಿಯ ನಾಯಕಿ ಸೋನಿಯಾಗಾಂಧಿ ಅವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸುವ ಕುರಿತಂತೆ ಚರ್ಚೆಗಳು ಆರಂಭವಾಗಿವೆ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ವಿಷಯವಾಗಿ ವಿಶೇಷ ಆಸಕ್ತಿವಹಿಸಿದ್ದಾರೆ ಎನ್ನಲಾಗಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ಸುರ್ಜೇವಾಲ ಅವರ ಮೂಲಕ ಶಿವಕುಮಾರ್ ಅವರು ಸೋನಿಯಾ ಗಾಂಧಿ ಅವರನ್ನು ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಮನವಿ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ. ಆದರೆ ಸೋನಿಯಾ ಗಾಂಧಿ ಅವರು ಈ ವಿಷಯವಾಗಿ ಇನ್ನು ತಮ್ಮ ನಿರ್ಧಾರ ಪ್ರಕಟಿಸಿಲ್ಲ ಎಂದು ಗೊತ್ತಾಗಿದೆ.
ಅನಾರೋಗ್ಯ ಸೇರಿದಂತೆ ಹಲವು ಕಾರಣಗಳಿಂದಾಗಿ ಸೋನಿಯಾಗಾಂಧಿ ಅವರು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಉತ್ತರಪ್ರದೇಶದ ರಾಯಬರೇಲಿಯಲ್ಲಿ ಸ್ಪರ್ಧೆ ಮಾಡುವ ಸಾಧ್ಯತೆ ಕಡಿಮೆ. ಇಲ್ಲಿಂದ ಅವರ ಪುತ್ರಿ ಪ್ರಿಯಾಂಕ ಗಾಂಧಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರನ್ನು ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಲು ಚರ್ಚೆ ನಡೆದಿದೆ.
ಇನ್ನು ಸದ್ಯ ನಿವೃತ್ತಿಯಾಗುತ್ತಿರುವ ನಾಸೀರ್ ಹುಸೇನ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೂಲಕ ಮರು ಆಯ್ಕೆಗೆ ಪಟ್ಟು ಹಿಡಿದಿದ್ದಾರೆ ಇವರ ಜೊತೆಯಲ್ಲಿ ಎಲ್ ಹನುಮಂತಯ್ಯ ಮತ್ತು ಜೆ.ಸಿ. ಚಂದ್ರಶೇಖರ್ ಮರು ಆಯ್ಕೆ ಬಯಸಿದ್ದಾರೆ ಮತ್ತೊಂದೆಡೆಯಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಪುಷ್ಪ ಅಮರನಾಥ್ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಯೋಜನಾ ಆಯೋಗದ ಉಪಾಧ್ಯಕ್ಷ ರಾಜೀವ್ ಗೌಡ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಹಿರಿಯ ನಾಯಕ ಬಿಎಲ್ ಶಂಕರ್ ಸೇರಿದಂತೆ ಹಲವರು ಲಾಬಿ ನಡೆಸಿದ್ದಾರೆ.
ಬಿಜೆಪಿಯಲ್ಲೂ ಲಾಭಿ:
ಬಿಜೆಪಿಯಲ್ಲೂ ಕೂಡಾ ಬಿರುಸಿನ ಚಟುವಟಿಕೆಗಳು ನಡೆದಿವೆ.ರಾಜ್ಯಸಭೆಯಿಂದ ನಿವೃತ್ತಿಯಾಗುತ್ತಿರುವ
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರಿಗೆ ಕೇರಳದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಬಿಜೆಪಿಯ ವರಿಷ್ಠರು ಸಲಹೆ ನೀಡಿದ್ದಾರೆ.
ಈ ವಿಷಯವಾಗಿ ತಮ್ಮ ನಿಲುವು ತಿಳಿಸಲು ರಾಜೀವ್ ಚಂದ್ರಶೇಖರ್ ಅವರು ಕಾಲಾವಕಾಶ ಕೇಳಿದ್ದಾರೆ.ರಾಜೀವ್ ಚಂದ್ರಶೇಖರ ಅವರ ಬದಲಿಗೆ ಮಾಜಿ ಸಚಿವ ವಿ.ಸೋಮಣ್ಣ ಉದ್ಯಮಿ ಪ್ರಕಾಶ್ ಶೆಟ್ಟಿ ಪೈಪೋಟಿ ನಡೆಸಿದ್ದಾರೆ.