ಬೆಂಗಳೂರು – ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನ ಗೆಲ್ಲಲು ರಣ ತಂತ್ರ ರೂಪಿಸುತ್ತಿರುವ ಕಾಂಗ್ರೆಸ್ ಇಲ್ಲಿಯವರೆಗೆ ಗೆಲ್ಲಲು ಸಾಧ್ಯವಾಗದ ಕೆಲವು ಕ್ಷೇತ್ರಗಳತ್ತ ವಿಶೇಷ ಗಮನ ಹರಿಸಿದ್ದು,ಅವುಗಳನ್ನು ಕೈವಶ ಮಾಡಿಕೊಳ್ಳಲು ಪ್ರಯತ್ನ ಆರಂಭಿಸಿದೆ.
ಇಂತಹ ಸವಾಲಿನ ಜನ ಕ್ಷೇತ್ರಗಳಲ್ಲೊಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ. ಬಿ.ಕೆ.ಹರಿಪ್ರಸಾದ್, ಎಂ.ಕೃಷ್ಣಪ್ಪ,ಕೃಷ್ಣ ಬೈರೇಗೌಡ, ನಂದನ್ ನಿಲೇಕಣಿ ಅವರಂತಹ ಪ್ರತಿಷ್ಠಿತ ಹಾಗೂ ಪ್ರಭಾವಿಗಳನ್ನು ಈ ಕ್ಷೇತ್ರದಲ್ಲಿ ಕಣಕ್ಕಿಳಿಸಿದ ಕಾಂಗ್ರೆಸ್ ಗೆಲ್ಲಲು ಸಾಧ್ಯವಾಗಿಲ್ಲ.
ಇದಕ್ಕೆ ಬಿಜೆಪಿಯ ಸಾಂಪ್ರದಾಯಿಕ ಮತ ಬ್ಯಾಂಕ್ ಒಂದು ಕಾರಣವಾದರೆ,ಕಾಂಗ್ರೆಸ್ ನಾಯಕರ ನಡುವೆ ಏರ್ಪಡುತ್ತಿದ್ದ ಗುಪ್ತ ಒಳ ಒಪ್ಪಂದ ಮತ್ತೊಂದು ಕಾರಣವಾಗಿತ್ತು.ಈ ಬಾರಿ ಇದಕ್ಕೆಲ್ಲಾ ಕಡಿವಾಣ ಹಾಕಿ,ಈ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಲು ರಣತಂತ್ರ ರೂಪಿಸಿದ್ದಾರೆ.
ಇದರ ಪರಿಣಾಮವಾಗಿ ಈಗಲೇ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡಿ ಕೆಲಸ ಮಾಡಲು ತೀರ್ಮಾನಿಸಿದ್ದು,ಸಾರಿಗೆ ಸಚಿವ ಹಾಗೂ ಕಾಂಗ್ರೆಸ್ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ ಅವರನ್ನು ಕಣಕ್ಕಿಳಿಸಲಿದ್ದಾರೆ.
ಈ ಸಂಬಂಧ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿ,ಈ ತೀರ್ಮಾನ ಕೈಗೊಂಡಿದ್ದು,ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಸೌಮ್ಯಾರೆಡ್ಡಿ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ ಆರ್‌ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಅಧ್ಯಯನ ಪೂರ್ಣಗೊಳಿಸಿರುವ ಸೌಮ್ಯಾ ರೆಡ್ಡಿ, ನ್ಯೂಯಾರ್ಕ್‌ನ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಎಸ್ ಅಧ್ಯಯನ ಪೂರ್ಣಗೊಳಿಸಿದ್ದಾರೆ.
2018 ವಿಧಾನಸಭಾ ಚುನಾವಣೆಯಲ್ಲಿ ಜಯನಗರ ಅಭ್ಯರ್ಥಿಯಾಗಿ ಕಣಕ್ಕಿಳಿದ ಸೌಮ್ಯರೆಡ್ಡಿ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿ,ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.
ಶಾಸಕಿಯಾದ ಬಳಿಕ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಸತತ ಶ್ರಮವಹಿಸಿದ್ದಲ್ಲದೇ ಅಂದಿನ ಬಿಜೆಪಿ ಸರ್ಕಾರದ ವಿರುದ್ಧದ ಹಲವು ಬೃಹತ್ ಹೋರಾಟಗಳಲ್ಲಿ ಸೌಮ್ಯ ರೆಡ್ಡಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು
ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಆಯ್ಕೆ ಬಯಸಿ ಕಣಕ್ಕಿಳಿದಿದ್ದರು.ಕೆಲವೇ ಮತಗಳ ಅಂತರದಿಂದ ಸೋಲು ಕಂಡ ಅವರು ಮತ ಎಣಿಕೆ ಪ್ರಕ್ರಿಯೆ ವಿರುದ್ದ ಕೋರ್ಟ್ ಮೆಟ್ಟಿಲೇರಿದ್ದಾರೆ.ಇದೀಗ ಅವರನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಗುತ್ತಿದೆ.
ಸಾಮಾಜಿಕ ತಾಣಗಳಲ್ಲಿಯೂ ಸದಾ ಸಕ್ರಿಯರಾಗಿರುವ ಸೌಮ್ಯಾ ರೆಡ್ಡಿ ತಮ್ಮ ಕ್ಷೇತ್ರದ ಪ್ರತಿಯೊಂದು ಚಟುವಟಿಕೆಗಳ ಮಾಹಿತಿ ನೀಡುತ್ತಿರುತ್ತಾರೆ. ಪರಿಸರವಾದಿಯಾಗಿರುವ ಸೌಮ್ಯಾರೆಡ್ಡಿ ಅನೇಕ ಪರಿಸರ ಸಂಬಂಧಿತ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಹೀಗಾಗಿ ಸುಶಿಕ್ಷಿತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರ ಈ ಬಾರಿ ಕೈವಶವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಕಾಂಗ್ರೆಸ್ ನಾಯಕರು