ಬೆಂಗಳೂರು Sep 1: ಚಿಕ್ಕ ಮಗಳೂರು ಮೂಲದ ಜಯರಾಂ ರಮೇಶ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕರಾಗಿರುವ ಇವರು ಸ್ವಪಕ್ಷೀಯರಿಂದಲೇ ಮುಜುಗರಕ್ಕೊಳಗಾದ ಘಟನೆ ನಡೆದಿದೆ
ರಾಹುಲ್ ಗಾಂಧಿಯವರ ಮಹತ್ವಾಕಾಂಕ್ಷೆಯ ಭಾರತ್ ಐಕ್ಯತಾ ಯಾತ್ರೆ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಆಯೋಜಿಸಿದ್ದ ಸಭೆಯಲ್ಲಿ ಜೈರಾಮ್ ರಮೇಶ್ ಅವರ ಭಾಷಣಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು ಇದರಿಂದ ಜಯರಾಂ ರಮೇಶ್ ಮುಜಗರಕ್ಕೊಳಗಾದರು.
ಸಭೆಯನ್ನುದ್ದೇಶಿಸಿ ಇಂಗ್ಲಿಷ್ನಲ್ಲಿ ಭಾಷಣ ಮಾಡುತ್ತಿದ್ದ ಜೈರಾಮ್ ರಮೇಶ್‌ಗೆ ಕನ್ನಡದಲ್ಲಿ ಮಾತಾಡುವಂತೆ ಕಾರ್ಯಕರ್ತರು ಕೂಗಿದರು.ಆ ಕಾರ್ಯಕರ್ತರನ್ನು ಉಳಿದ ನಾಯಕರು ಸಮಾಧಾನ ಮಾಡಿದರು.
ಮುಜುಗರದಿಂದಲೇ ಇದಕ್ಕೆ ಪ್ರತಿಕ್ರಿಯಿಸಿದ ಅವರು ತಾಂತ್ರಿಕ ಅಂಶಗಳನ್ನು ಇಂಗ್ಲಿಷ್ನಲ್ಲಿ ಹೇಳುತ್ತೇನೆ. ನಂತರ ಕನ್ನಡದಲ್ಲಿ ಭಾಷಣ ಮುಂದುವರಿಸುತ್ತೇನೆಂದು ಹೇಳಿ ಜಯರಾಂ ರಮೇಶ್ ಮಾತು ಮುಂದುವರಿಸಿದರು.
ಪಕ್ಷ ಬಿಟ್ಟು ಹೋಗುವವರು ಹೋಗಲಿ. ಕೆಲವರು ಡಿಪಾರ್ಚರ್ ಲಾಂಜ್ನಲ್ಲಿ ನಿಂತಿದ್ದಾರೆ. ಹೇಳಿಕೆಗಳನ್ನೂ ಕೊಡುತ್ತಿದ್ದಾರೆ. ಹೋಗುವವರು ಹೋಗಲಿ, ಮಾತನ್ನಾಡುವವರು ಮಾತನಾಡಲಿ. ಯಾವುದೇ ಕಾರಣಕ್ಕೂ ಭಾರತ್ ಜೋಡೋ ಯಾತ್ರೆ ನಿಲ್ಲುವುದಿಲ್ಲ ಎನ್ನುತ್ತಾ ಗುಲಾಂ ನಬಿ ಆಜಾದ್ರ ನಡೆಗೆ ಟಾಂಗ್ ಕೊಟ್ಟರು.
ಇದು ಮನ್ ಕಿಬಾತ್ ಅಲ್ಲ. ಇದು ಜನತಾ ಕಿ ಚಿಂತನ್ ಯಾತ್ರೆ. ಭಾರತ್ ಜೊಡೋದಲ್ಲಿ ಯಾವುದೇ ಭಾಷಣ ಇಲ್ಲ. ಇದೊಂದು ಸೈಲೆಂಟ್ ಪಾದಯಾತ್ರೆ. ಪ್ರಧಾನಿಯವರ ವಿರುದ್ಧ ಘೋಷಣೆ ಕೂಗುವುದಲ್ಲ, ಜನರ ಸಮಸ್ಯೆಗಳನ್ನ ಅರಿಯುವ ಕಾರ್ಯಕ್ರಮ. ಪಾದಯಾತ್ರೆ ವೇಳೆ ಆಶಾ ಕಾರ್ಯಕರ್ತೆಯರು, ನರೇಗಾ ಕೂಲಿ ಕಾರ್ಮಿಕರನ್ನ ಭೇಟಿ ಮಾಡಿ ಅವರ ಸಮಸ್ಯೆಗಳನ್ನ ಆಲಿಸುತ್ತೇವೆ ಎಂದು ಜೈರಾಮ್ ರಮೇಶ್ ಹೇಳಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ರಾಹುಲ್ ಗಾಂಧಿಯವರ ಪಾದಯಾತ್ರೆ 21 ದಿನ ರಾಜ್ಯದಲ್ಲಿ ಹಾದು ಹೋಗಲಿದೆ. ಎಲ್ಲ ಶಾಸಕರು, ಸಂಸದರು, ಕಾರ್ಯಕರ್ತರು ಪಾಲ್ಗೊಳ್ಳಬೇಕು. ದೇಶದ ಹಿತದೃಷ್ಟಿಯಿಂದ ಈ ಪಾದಯಾತ್ರೆ ಅನಿವಾರ್ಯ. ಇದು ನಮ್ಮ ಯಾತ್ರೆ, ಯಶಸ್ವಿಗೊಳಿಸೋಣ ಎಂದು ಕರೆ ನೀಡಿದರು.
ಸೆ.8, 9, 10 ರಂದು 224 ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ಮಾಡಬೇಕು. ಯಾವ ಕ್ಷೇತ್ರದಿಂದ ಎಷ್ಟೆಷ್ಟು ಜನರನ್ನ ಕಳೆದುಕೊಂಡು ಬರಬೇಕೆಂದು ಅಂದು ತೀರ್ಮಾನ ಮಾಡಬೇಕು. ಯಾರ್ಯಾರು 21 ದಿನ ನಡೆಯುತ್ತೀರಾ ಪಟ್ಟಿ ಕೊಡಬೇಕು. ಇದಕ್ಕಾಗಿ ನೋಂದಣಿ ಮಾಡಬೇಕು. ರಾಹುಲ್ ಗಾಂಧಿಯವರ ಹಿಂದೆ ನೀವು ನಡೆಯಬೇಕು. ಸೆಲ್ಫಿಗೋಸ್ಕರ ಯಾರೂ ಬರಬೇಡಿ, ಇತಿಹಾಸ ಸೃಷ್ಟಿಸಲು ಬರಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.