ಬೆಂಗಳೂರು, ಫೆ.22- ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯ ಅಖಾಡಕ್ಕೆ ಭರ್ಜರಿ ರಂಗು ಬಂದಿದೆ.
ಬಿಜೆಪಿಯ ಹೆಚ್ಚುವರಿ ಮತಗಳ ಖಚಿತತೆಯೊಂದಿಗೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಜೆಡಿಎಸ್ ಇದೀಗ ಆಡಳಿತರೂಢ ಕಾಂಗ್ರೆಸ್ಸಿನ ಅತೃಪ್ತ ಶಾಸಕರ ಮತಗಳಿಸಲು ಪ್ರಯತ್ನ ನಡೆಸಿದೆ.
ತೆರೆಮರೆಯಲ್ಲಿ ನಡೆಯುತ್ತಿರುವ ಈ ಪ್ರಯತ್ನಗಳಿಂದಾಗಿ ಶಾಸಕರ ಕುದುರೆ ವ್ಯಾಪಾರದ ಭೀತಿ ಆರಂಭವಾಗಿದ್ದು ಇದೀಗ ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ರೆಸಾರ್ಟ್ ರಾಜಕಾರಣ ಆರಂಭವಾಗಲಿದೆ.
ತಮ್ಮ ಮತಗಳನ್ನು ಹಿಡಿದಿಟ್ಟುಕೊಳ್ಳಬೇಕು ಎಂಬ ದೃಷ್ಟಿಯಿಂದ ಮೂರು ಪಕ್ಷಗಳು ತಮ್ಮ ಶಾಸಕರೊಂದಿಗೆ ರೆಸಾರ್ಟ್ ಗೆ ತೆರಳಲು ಸಿದ್ಧತೆ ಆರಂಭಿಸಿದ್ದಾರೆ.
ಸೋಮವಾರ ಸಂಜೆ ಕಾಂಗ್ರೆಸ್ ಶಾಸಕರ ಸಭೆ ನಡೆಯಲಿದ್ದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಲ್ಲಾ ಶಾಸಕರೊಂದಿಗೆ ಬೆಂಗಳೂರು ಹೊರವಲಯದಲ್ಲಿರುವ ರೆಸಾರ್ಟಿಗೆ ತೆರಳಲಿದ್ದಾರೆ. ಕಾಂಗ್ರೆಸ್ ಪಕ್ಷದ ಮೂವರು ಅಭ್ಯರ್ಥಿಗಳೊಂದಿಗೆ ಎಲ್ಲ ಶಾಸಕರು ರೆಸಾರ್ಟ್ ನಲ್ಲಿಯೇ ಉಳಿಯಲಿದ್ದು ಅಲ್ಲಿಯೇ ಮುಂಬರುವ ಲೋಕಸಭಾ ಚುನಾವಣೆಯ ಕಾರ್ಯತಂತ್ರದ ಕುರಿತಂತೆ ಸಭೆ ನಡೆಸಲಿದ್ದಾರೆ.
ಮರು ದಿನ ಎಲ್ಲ ಶಾಸಕರು ವಿಧಾನಸೌಧದಲ್ಲಿ ತೆರೆಯಲಾಗಿರುವ ರಾಜ್ಯಸಭಾ ಚುನಾವಣೆಯ ಮತಗಟ್ಟೆಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಒಟ್ಟಾಗಿ ಆಗಮಿಸಲಿದ್ದಾರೆ ಈ ಮೂಲಕ ತಮ್ಮ ಪಕ್ಷದ ಶಾಸಕರ ಮತ ಸೆಳೆಯಲು ಜೆಡಿಎಸ್ ನಡೆಸುವ ತಂತ್ರಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂತಹ ಪ್ರತಿ ತಂತ್ರ ರೂಪಿಸಿದ್ದಾರೆ.
ಮತ್ತೊಂದೆಡೆ ಕಣಕ್ಕಿಳಿದಿರುವ ಕಾಂಗ್ರೆಸ್ಸಿನ ಮೂವರು ಅಭ್ಯರ್ಥಿಗಳು ನಿರಾಯಾಸವಾಗಿ ಆಯ್ಕೆಯಾಗಬೇಕು ಎಂದು ತಂತ್ರ ಹೆಣದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷೇತರ ಶಾಸಕರಾದ ಲತಾ ಮಲ್ಲಿಕಾರ್ಜುನ ಜನಾರ್ಧನ ರೆಡ್ಡಿ ಮತ್ತು ಪುಟ್ಟಸ್ವಾಮಿಗೌಡ ಅವರೊಂದಿಗೆ ಮಾತುಕತೆ ನಡೆಸಿದ್ದು ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ.
ಮತ್ತೊಂದೆಡೆ ತನ್ನ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಐದು ಮತಗಳ ಕೊರತೆ ಎದುರಿಸುತ್ತಿರುವ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ಮೂವರು ಪಕ್ಷೇತರ ಶಾಸಕರು ಮತ್ತು ಕಾಂಗ್ರೆಸ್ಸಿನ ಗಣೇಶ್ ಹುಕ್ಕೇರಿ, ಯು.ಬಿ. ಬಣಕಾರ್ ಎಂ ಕೃಷ್ಣಪ್ಪ ಮತ್ತು ಪ್ರಿಯಕೃಷ್ಣ ಅವರನ್ನು ಸಂಪರ್ಕಿಸಿ ತಮ್ಮ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಮತ ಹಾಕುವಂತೆ ಮನವಿ ಮಾಡಿದ್ದಾರೆ ಎಂದು ಗೊತ್ತಾಗಿದೆ.
ಆದರೆ ಕುಮಾರಸ್ವಾಮಿ ಅವರ ಮನವಿಯನ್ನು ಸ್ಪಷ್ಟವಾಗಿ ತಿರಸ್ಕರಿಸಿರುವ ಗಣೇಶ್ ಹುಕ್ಕೇರಿ ಯು.ಬಿ. ಬಣಕಾರ್ ಪ್ರಿಯಕೃಷ್ಣ ಮತ್ತು ಎಂ ಕೃಷ್ಣಪ್ಪ ಅವರು ತಾವು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದು ಯಾವುದೇ ಕಾರಣಕ್ಕೂ ವಿಪ್ ಉಲ್ಲಂಘಿಸುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿರುವುದಾಗಿ ಗೊತ್ತಾಗಿದೆ.
ಅದೇ ರೀತಿ ಲತಾ ಮಲ್ಲಿಕಾರ್ಜುನ ಅವರು ತಾವು ಪಕ್ಷೇತರರಾದರೂ ಕೂಡ ಕಾಂಗ್ರೆಸ್ ಸಹ ಸದಸ್ಯರಾಗಿದ್ದು ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುತ್ತೇನೆ ಎಂದು ತಿಳಿಸಿದರೆ ಪುಟ್ಟಸ್ವಾಮಿ ಗೌಡ ತಾವು ಕಾಂಗ್ರೆಸ್ಗೆ ಮತ ಹಾಕುತ್ತೇನೆ ಎಂದು ಹೇಳಿದ್ದಾರೆ ಆದರೆ ಜನಾರ್ಧನ ರೆಡ್ಡಿ ಅವರು ಮತದಾನಕ್ಕೆ ಸ್ವಲ್ಪ ಕಾಲ ಮೊದಲು ತಮ್ಮ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮತ್ತೊಂದು ಕಡೆ ಬಿಜೆಪಿ ಕೂಡ ತನ್ನ ಎಲ್ಲಾ ಶಾಸಕರನ್ನು ಒಟ್ಟಾಗಿಟ್ಟುಕೊಳ್ಳುವ ದೃಷ್ಟಿಯಿಂದ ರೆಸಾರ್ಟ್ ಯಾತ್ರೆ ಕೈಗೊಳ್ಳಲು ಚಿಂತನೆ ನಡೆಸಿದ್ದು ಜೆಡಿಎಸ್ ಶಾಸಕರು ಕೂಡ ಇವರನ್ನು ಸೇರಿಕೊಳ್ಳುವ ಸಾಧ್ಯತೆ ಇದೆ.
224 ಸದಸ್ಯ ಬಲದ ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಲು ಒಬ್ಬ ಅಭ್ಯರ್ಥಿಗೆ 45 ಮತಗಳ ಅಗತ್ಯವಿದೆ ಮೂರು ಪಕ್ಷಗಳು ಹೊಂದಿರುವ ಸಂಖ್ಯಾಬಲದ ಆಧಾರದಲ್ಲಿ ಕಾಂಗ್ರೆಸ್ ನಿಂದ ಮೂವರು ಮತ್ತು ಬಿಜೆಪಿಯಿಂದ ಒಬ್ಬರು ಸುಲಭವಾಗಿ ಆಯ್ಕೆಯಾಗಬಹುದಾಗಿದೆ ತನ್ನ ಅಭ್ಯರ್ಥಿ ಆಯ್ಕೆ ಮಾಡಿಕೊಳ್ಳಲು ಅಗತ್ಯ ಸಂಖ್ಯಾಬಲದ ಕೊರತೆ ಇದ್ದರೂ ಆಡಳಿತ ಪಕ್ಷದಲ್ಲಿನ ಅಸಮಾಧಾನದ ಲಾಭ ಪಡೆಯುವ ಲೆಕ್ಕಾಚಾರದೊಂದಿಗೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.