‘ಶಿಕ್ಷಣ ಎಂದರೆ ಪುಸ್ತಕದಲ್ಲಿರುವುದನ್ನು ಓದಿ ಹೇಳುವುದಷ್ಟೇ ಅಲ್ಲ. ಶಿಕ್ಷಣ ಎಂದರೆ ಹೆಚ್ಚಿನ ಅಂಕಗಳಿಸುವುದಷ್ಟೇ ಅಲ್ಲ. ಮಕ್ಕಳಲ್ಲಿ ಮಾನವೀಯ ಮೌಲ್ಯಗಳಾದ ಆತ್ಮವಿಶ್ವಾಸ, ಮನೋಬಲ, ಸಮಸ್ಯೆಗಳನ್ನು ನಿಭಾಯಿಸುವುದಕ್ಕಿಂತ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ, ವಿನಯವನ್ನು ಕಲಿಸುವುದಾಗಿದೆ ಎಂದು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಡಾ. ಸುಧಾಮೂರ್ತಿ ಅವರು ತಿಳಿಸಿದ್ದಾರೆ.
ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಯಲ್ಲಿನ ನೂತನ ಮೌಲ್ಯಾಧಾರಿತ ಶಿಕ್ಷಣ ಪ್ರಯೋಗಾಲಯ ಉದ್ಘಾಟಿಸಿದ ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಯಲ್ಲಿ ಆರಂಭಿಸಲಾಗಿರುವ ವಿನೂತನ ಪ್ರಯೋಗಾಲಯ ಶಿಕ್ಷಣದ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ರಾಜ್ಯದ ಎಲ್ಲ ಶಾಲೆಗಳಲ್ಲಿ ಇಂತಹ ಪ್ರಯೋಗಾಲಯಗಳು ಆರಂಭವಾಗಬೇಕು ಎಂದರು.
‘ನನಗೆ ವಿವಿಧ ಕಾರ್ಯಕ್ರಮಕ್ಕೆ ಆಗಮಿಸುವಂತೆ ವರ್ಷಕ್ಕೆ ಸಾವಿರಾರು ಆಹ್ವಾನಗಳು ಬರುತ್ತವೆ. ಆದರೆ ನಾನು ನನಗೆ ವಿಭಿನ್ನ ಎನಿಸುವ ಕಾರ್ಯಕ್ರಮಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತೇನೆ. ಐಶ್ವರ್ಯ ನನ್ನ ಬಳಿ ಬಂದು ಈ ಪ್ರಯೋಗಾಲಯದ ಬಗ್ಗೆ ತಿಳಿಸಿದಾಗ ನನಗೆ ಬಹಳ ಇಷ್ಟವಾಯಿತು. ಮೂಲತಃ ನಾನು ಶಿಕ್ಷಕಿಯಾಗಿದ್ದು, ಶಿಕ್ಷಕರ ಕುಟುಂಬದ ಹಿನ್ನೆಲೆಯಿಂದ ಬಂದಿದ್ದೇನೆ. ನನ್ನ ತಂದೆ ಪ್ರೋಫೆಸರ್ ಆಗಿದ್ದರು. ನನ್ನ ತಾತ ಶಾಲಾ ಶಿಕ್ಷಕರಾಗಿದ್ದರು, ತಾಯಿ ಕೂಡ ಶಾಲಾ ಶಿಕ್ಷಕಿ ಆಗಿದ್ದರು. ನನ್ನ ಸಹೋದರಿಯರು ಮೆಡಿಕಲ್ ಕಾಲೇಜಿನಲ್ಲಿ ಪ್ರೋಫೆಸರ್ ಗಳು. ಹೀಗಾಗಿ ನನ್ನನ್ನು ಹೊಸ ಆಲೋಚನೆಗಳು ಆಕರ್ಷಿಸುತ್ತವೆ ಎಂದು ಹೇಳಿದರು
ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಪೋಷಕರಿಂದ ಒತ್ತಡ ಹೆಚ್ಚುತ್ತಿದೆ. ಪಕ್ಕದ ಮನೆ ಹುಡುಗೆ ಶೇ. 99 ಅಂಕ ಪಡೆದಿದ್ದು, ನೀನು ಅಷ್ಟೇ ಗಳಿಸಬೇಕು ಎನ್ನುತ್ತಾರೆ. ಇದು ಮಕ್ಕಳಿಗೆ ಹೇಳಬಹುದಾದ ಅತ್ಯಂತ ಕೆಟ್ಟ ವಿಧಾನದ ಬೋಧನೆ. ಪಠ್ಯಕ್ರಮ ಜೀವನದ ಭಾಗವೇ ಹೊರತು, ಅದೇ ಇಡೀ ಜೀವನವಲ್ಲ. ನೀವು ಉತ್ತಮ ಹಾಗೂ ಸಂತೋಷದ ಜೀವನ ಸಾಗಿಸಬೇಕಾದರೆ ಪಠ್ಯಕ್ರಮದ ಜತೆಗೆ ಬೇರೆ ವಿಷಯಗಳ ಬಗ್ಗೆಯೂ ಗಮನ ಹರಿಸಬೇಕು. ಅಂಕಗಳೇ ಸರ್ವಸ್ವ ಎಂದು ಭಾವಿಸಬಾರದು. ಮಾಡುವ ಕೆಲಸದಲ್ಲಿ ನಿಪುಣತೆ ಸಾಧಿಸುವುದು ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಧೈರ್ಯ, ಆತ್ಮವಿಶ್ವಾಸ, ಪರಿಸ್ಥಿತಿ ಹೇಗೆ ಎದುರಾಗುತ್ತದೆಯೋ ಅವುಗಳನ್ನು ಹಾಗೆಯೇ ಸ್ವೀಕರಿಸುವ ಮನೋಭಾವ ಹೊಂದುವುದು ಬಹಳ ಮುಖ್ಯ ಎಂದು ಕಿವಿಮಾತು ಹೇಳಿದರು
ಹಲವು ವಿದ್ಯಾರ್ಥಿಗಳು ಶಾಲೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ್ದರೂ ಅವರು ಜೀವನದಲ್ಲಿ ಯಶಸ್ಸು ಸಾಧಿಸದಿರುವ ಸಾಕಷ್ಟು ಉದಾಹರಣೆಗಳಿವೆ. ಮಕ್ಕಳ ತಪ್ಪುಗಳನ್ನು ಮೊದಲು ಮನೆಯಲ್ಲಿ ಅದರಲ್ಲೂ ತಾಯಿ ಸರಿಪಡಿಸಬೇಕು. ನಂತರ ಶಾಲೆಯಲ್ಲಿ ಅವರನ್ನು ಸರಿದಾರಿಯಲ್ಲಿ ಮುನ್ನಡೆಸಬೇಕು. ಹೀಗಾಗಿ ಮಕ್ಕಳು ಎಳೆಯವರಾಗಿದ್ದಾಗಲೇ ಸರಿಯಾದ ದಾರಿಯಲ್ಲಿ ಮುನ್ನಡೆಸಬೇಕು. ಇಂದಿನ ಶಿಕ್ಷಣ ಎಂದರೆ ಪುಸ್ತಕದಲ್ಲಿರುವುದನ್ನು ಓದಿ ಹೇಳುವುದಲ್ಲ. ಏಕೆಂದರೆ ಇಂದಿನ ದಿನಗಳಲ್ಲಿ ಮಕ್ಕಳು ಗೂಗಲ್ ನಲ್ಲೇ ಆ ವಿಚಾರಗಳನ್ನು ಕಲಿಯುತ್ತಾರೆ. ಈಗಿನ ಮಕ್ಕಳು ಬಹಳ ಬುದ್ಧಿವಂತರಿದ್ದು, ಪಾಠ ಮಾಡುವ ಮುನ್ನ ಬೋಧಕರು ಉತ್ತಮ ತಯಾರಿ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಮಕ್ಕಳಲ್ಲಿ ಕಷ್ಟ ಎದುರಿಸುವ ವಿಶ್ವಾಸ ಮೂಡಿಸಬೇಕು. ನಮಗೆ ಕಷ್ಟಗಳು ಹೇಳಿ, ಕೇಳಿ ಬರುವುದಿಲ್ಲ. ಹಣಕಾಸಿನ ಕಷ್ಟಗಳನ್ನು ಹೇಗೋ ಪರಿಹರಿಸಿಕೊಳ್ಳಬಹುದು. ಆದರೆ ಬೇರೆ ಕಷ್ಟಗಳನ್ನು ನಿಭಾಯಿಸಲು ಮನೋಬಲದ ಅಗತ್ಯವಿರುತ್ತದೆ. ಕಷ್ಟಗಳನ್ನು ಎದುರಿಸುವ ಸಾಮರ್ಥ್ಯವನ್ನು ಒಂದೆರಡು ದಿನಗಳಲ್ಲಿ ಕಲಿಸಲು ಆಗುವುದಿಲ್ಲ. ನಿರಂತರ ತರಬೇತಿ ನೀಡಿ ಅವರು ಸಮಸ್ಯೆಗಳನ್ನು ಎದುರಿಸಿ ನಿಲ್ಲುವಂತೆ ಮಾಡಬೇಕು. ಸಮಸ್ಯೆಗಳನ್ನು ನಿಭಾಯಿಸುವುದಕ್ಕಿಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದರು
ನಾನು ಐಶ್ವರ್ಯ ಆವರನ್ನು ಹಿಂದೆಯೂ ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಆಕೆ ಚಿಕ್ಕವಳಾದರೂ ಆಕೆಯಲ್ಲಿ ಆಸಕ್ತಿ, ಬುದ್ಧಿವಂತಿಕೆ ಇದೆ. ಹೊಸ ಆಲೋಚನೆಗಳಿವೆ. ಆಕೆ ಧೈರ್ಯವಂತೆ. ಆಕೆ ಹೀಗೆಯೇ ಆ ಎಲ್ಲ ಗುಣಗಳನ್ನು ಮುಂದುವರಿಸಿಕೊಂಡು ಹೋಗಲಿ, ಉತ್ತಮ ನಾಯಕಿಯಾಗಲಿ ಎಂದು ಆಶೀರ್ವಾದ ಮಾಡುತ್ತೇನೆ ಎಂದು ಹೇಳಿದರು
ಈ ವೇಳೆ ಉಪಸ್ಥಿತರಿದ್ದ ಡಿ.ಕೆ. ಶಿವಕುಮಾರ್ ಮಾತನಾಡಿ ಇಂದು ನನ್ನ ಜೀವನದಲ್ಲಿ ಅತ್ಯಂತ ಮುಖ್ಯವಾದ ದಿನ. ನಿನ್ನೆ ಎಂಬುದು ಇತಿಹಾಸ, ನಾಳೆ ಎಂಬುದು ಭವಿಷ್ಯ. ಆದರೆ ಇಂದು ಎಂಬುದು ಬಹಳ ಮುಖ್ಯ. 23 ವರ್ಷಗಳ ನನ್ನ ಶಿಕ್ಷಣ ಕ್ಷೇತ್ರದ ಅನುಭವದಲ್ಲಿ ಸುಧಾಮೂರ್ತಿ ಅವರ ಮಾತುಗಳು ನಾನು ಕೇಳಿದ ಅತ್ತ್ಯುತ್ತಮ ಭಾಷಣವಾಗಿತ್ತು. ಸೌಂದರ್ಯಕ್ಕಿಂತ ನಮ್ರತೆ ಹೆಚ್ಚು ಮೋಡಿ ಮಾಡುತ್ತದೆ. ಅದೇ ರೀತಿ ಇಂದು ಸುಧಾ ಮೂರ್ತಿ ಅವರ ನಮ್ರತೆ, ಅವರ ಮಾತುಗಳು ಇಂದು ಎಲ್ಲರನ್ನು ಮೋಡಿ ಮಾಡಿದೆ ಎಂದರು
ನೀವು ನಡೆದು ಬಂದ ದಾರಿಯನ್ನು ಮರೆಯಬಾರದು. ನಿಮ್ಮ ಬೆಳವಣಿಗೆಗೆ ಸಹಕಾರಿಯಾದವರನ್ನು ಎಂದಿಗೂ ಮರೆಯಬಾರದು. ಈ ಪ್ರಯೋಗಾಲಯದಲ್ಲಿ ನಾವು ಕಂಡಿದ್ದು ಉಪಕಾರ ಸ್ಮರಣೆ. ನಿಮಗೆ ಯಾರೆಲ್ಲ ಬೆಂಬಲವಾಗಿ ನಿಂತು ಸಹಾಯ ಮಾಡಿರುತ್ತಾರೋ ಅವರಿಗೆ ನೀವು ಚಿರಋಣಿಯಾಗಿರಬೇಕು. ಇದು ನಿಮ್ಮ ಜೀವನದ ಚಿತ್ರಣವನ್ನೇ ಬದಲಿಸಲಿದೆ. ಶಿಕ್ಷಣದ ಮೌಲ್ಯ ನಮ್ಮ ಪರಮ ಆದ್ಯತೆ. ಈ ವಿಚಾರದಲ್ಲಿ ನಮ್ಮ ಶಾಲಾ ಆಡಳಿತ ಮಂಡಳಿ ನಿಮಗೆ ಎಲ್ಲ ರೀತಿಯ ಸಹಕಾರ ನೀಡಲಿದೆ. ನಮ್ಮ ಶಿಕ್ಷಣದ ಗುಣಮಟ್ಟ ಕೇವಲ ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕಿಂತ ಜಾಗತಿಕ ಮಟ್ಟದಲ್ಲಿದೆ. ನಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಮಾಡುತ್ತಿದ್ದೇವೆ ಎಂದು ತಿಳಿಸಿದರು
ಸಂಸ್ಥೆಯ ಮುಖ್ಯಸ್ಥೆ ಐಶ್ವರ್ಯ ಹೆಗ್ಡೆ ಮಾತನಾಡಿ
ಮೂರು ವರ್ಷಗಳ ಹಿಂದೆ ಮೌಲ್ಯಾಧಾರಿತ ಶಿಕ್ಷಣದ ಆಲೋಚನೆ ಆರಂಭವಾಯಿತು. ನಮ್ಮ ಪ್ರಾಂಶುಪಾಲರು ಹಾಗೂ ಶಿಕ್ಷಕರ ತಂಡದ ಪರಿಶ್ರಮದೊಂದಿಗೆ ಈ ಪ್ರಯೋಗಾಲಯ ಜೀವ ತಾಳಿದೆ. ಇಂದು ಈ ಪ್ರಯೋಗಾಲಯದ ಅನುಭವವನ್ನು ನೀವೆಲ್ಲ ನೋಡಿದ್ದೀರಿ.
ಈ ಮಧ್ಯೆ ನಾವು ಆನ್ ಲೈನ್ ಶಿಕ್ಷಣ, ಶಾಲೆಗೆ ಬಾರದೆ ವಿದ್ಯಾರ್ಥಿಗಳ ಕಲಿಕೆ ವ್ಯವಸ್ಥೆಯಿಂದ ಸಹಜ ಸ್ಥಿತಿಗೆ ಮರಳುವುದು ನಮ್ಮ ಈ ಪಯಣಕ್ಕೆ ದೊಡ್ಡ ಸವಾಲಾಗಿತ್ತು. ಈ ಪ್ರಕ್ರಿಯೆ ನಮಗೆ ಕಲಿತಿರುವುದನ್ನು ಮರೆತು, ಕಲಿತು ಹಾಗೂ ಮತ್ತೆ ಕಲಿಯುವುದನ್ನು ಕಲಿಸಿತು. ಇದು ನಮ್ಮನ್ನು ಮತ್ತಷ್ಟು ಬಲಿಷ್ಠ ಮಾಡಿತು. ಆವಿಷ್ಕಾರಿ ಆಲೋಚನೆ ಮೂಲಕ ಈ ಮೌಲ್ಯಾಧಾರಿತ ಶಿಕ್ಷಣದ ಪ್ರಯೋಗಾಲಯಕ್ಕೆ ದಾರಿ ಮಾಡಿಕೊಟ್ಟಿತು. 5 ವರ್ಷಗಳ ಈ ಶಿಕ್ಷಣದ ಪಯಣದಲ್ಲಿ ಮನಸ್ಥಿತಿ ವಿಕಸನ , ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ, ಆತ್ಮವಿಶ್ವಾಸ, ಉಪಕಾರ ಸ್ಮರಣೆ, ಕ್ಷಮಾಶೀಲತೆ ಕಲಿಸಲಾಗುವುದು. ಇವುಗಳನ್ನು ಕಲಿಯುವ ಮೂಲಕವೇ ನಾನು ಇಂದು ಈ ಮಟ್ಟಕ್ಕೆ ಬೆಳೆದು ನಿಂತಿದ್ದೇನೆ ಎಂದು ಹೇಳಿದರು
ನಮ್ಮನ್ನು ನಾವು ವ್ಯಕ್ತಪಡಿಸುವುದು ಕೂಡ ಕಲಿಕೆ ಎಂದು ನನ್ನ ತಂದೆ ಹೇಳಿದ್ದರು. ಇದನ್ನು ನಾನು ಬಲವಾಗಿ ನಂಬುತ್ತೇನೆ. ಈ ಪ್ರಯೋಗಾಲಯದ ಶಿಕ್ಷಣವನ್ನು ಪ್ರತಿ ತರಗತಿಗೂ ಪರಿಚಯಿಸಲು ಮುಂದಾಗಿದ್ದೇವೆ. ಈ ಪ್ರಯೋಗಾಲಯದಲ್ಲಿ ಕಲಿಸಲಾಗುವ ಗುಣಗಳು ಸಮಾಜದಲ್ಲಿ ಎಲ್ಲ ಸವಾಲು ಎದುರಿಸಿ ಮುಂದೆ ಸಾಗಲು ನೆರವಾಗಲಿವೆ. ಕೇವಲ ಉತ್ತಮ ಕೆಲಸ ಸಂಪಾದಿಸಲು ನಾವು ಮಕ್ಕಳಿಗೆ ಶಿಕ್ಷಣ ನೀಡುತ್ತಿಲ್ಲ. ಆದರೆ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯವನ್ನು ಅವರಲ್ಲಿ ಬೆಳೆಸಿ, ಪ್ರಪಂಚಕ್ಕೆ ಪರಿಚಯಿಸಲಾಗುತ್ತದೆ ಎಂದರು.
ದೇಶದಲ್ಲಿ ಮೊದಲ ಬಾರಿಗೆ ಶಾಲೆಗಳಲ್ಲಿ ಇಂತಹ ಪ್ರಯೋಗಾಲಯ ಪರಿಚಯಿಸಲಾಗಿದ್ದು, ಇದರಿಂದ ನಮ್ಮ ವಿದ್ಯಾರ್ಥಿಗಳು ಹೆಚ್ಚಿನ ಅನುಕೂಲ ಪಡೆಯುವ ವಿಶ್ವಾಸವಿದೆ. ಇಂತಹ ಮಹತ್ವಕಾಂಕ್ಷಿ ಪ್ರಯೋಗಾಲಯವನ್ನು ಶಿಕ್ಷಕಿ, ಕತೆಗಾರ್ತಿ, ಪರೋಪಕಾರಿ ಇದೆಲ್ಲಕ್ಕಿಂತ ಮುಖ್ಯವಾಗಿ ಅತ್ಯಂತ ವಿನಮ್ರ ವ್ಯಕ್ತಿ ಡಾ. ಸುಧಾಮೂರ್ತಿ ಅವರಿಂದ ಉದ್ಘಾಟನೆ ಮಾಡಿಸಬೇಕು ಎಂಬುದು ನನ್ನ ಕನಸಾಗಿತ್ತು. ಅದು ಈಡೇರಿದೆ. ಬಹಳ ಖುಷಿ ಕೊಟ್ಟಿದೆ ಎಂದು ಸಂಭ್ರಮಿಸಿದರು.
Previous Articleವರ್ಗಾವಣೆ – ತನಿಖೆಗೆ ಆದೇಶ
Next Article ಕಾಂಗ್ರೆಸ್ ಟಿಕೆಟ್ ಬೇಕಾದ್ರೆ ಹೀಗೆ ಮಾಡಿ