ಬೆಂಗಳೂರು,ಫೆ.15-
ಆಸ್ತಿ ವಿಚಾರಕ್ಕೆ ಮಗನೇ ಸುಪಾರಿ ನೀಡಿ ತಂದೆಯನ್ನು ಕೊಲೆ ಮಾಡಿಸಿರುವ ಆರೋಪ ಕೇಳಿಬಂದಿದೆ. ನಾರಾಯಣಸ್ವಾಮಿ (70) ಕೊಲೆಯಾದ ತಂದೆಯಾಗಿದ್ದು ಅವರ ಪುತ್ರ ಮಣಿಕಂಠ (37) ಸುಪಾರಿ ನೀಡಿ ಕೊಲೆ ಮಾಡಿಸಿರುವ ಸಂಬಂಧ ಮಾರತ್ ಹಳ್ಳಿ ಪೊಲೀಸ್ ಠಾಣೆ (Marathahalli Police Station) ಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಕಂಠ ಈ ಹಿಂದೆ ತನ್ನ ಮೊದಲ ಪತ್ನಿಯನ್ನು ಕೊಲೆ ಮಾಡಿ, ಜೈಲು ಸೇರಿ, ಜಾಮೀನು ಪಡೆದು ಹೊರಬಂದು ಎರಡನೇ ವಿವಾಹವಾಗಿದ್ದು, ದಂಪತಿಗೆ ಓರ್ವ ಮಗಳಿದ್ದಾಳೆ. ಎರಡನೇ ಮದುವೆ ಬಳಿಕವೂ ಬೇರೊಬ್ಬ ಮಹಿಳೆ ಜೊತೆಗೆ ಮಣಿಕಂಠ ಅಕ್ರಮ ಸಂಬಂಧ ಹೊಂದಿದ್ದು, ವಿಚಾರ ಗೊತ್ತಾಗಿ ಎರಡನೇ ಪತ್ನಿ ಪತಿಯಿಂದ ದೂರವಿದ್ದಳು. ವಿಚ್ಛೇದನ ವಿಚಾರವಾಗಿಯೂ ಮಾತುಕತೆ ನಡೆಯುತ್ತಿತ್ತು. ಆದರೆ ವಿಚ್ಛೇದನ ಕೊಡುವುದು ಬೇಡ ಎಂದು ಮಾವ ನಾರಾಯಣಸ್ವಾಮಿ ಕೇಳಿಕೊಂಡಿದ್ದರಾದರೂ ಇದಕ್ಕೆ ಸೊಸೆ ಒಪ್ಪಲಿಲ್ಲ.
ಇದರಿಂದ ವಿಚ್ಛೇದನದ ಬಳಿಕ ಸೊಸೆ ಹಾಗೂ ಮೊಮ್ಮಗಳ ಜೀವನ ನಿರ್ವಹಣೆ ಕಷ್ಟ ಆಗಲಿದೆ ಎಂದು ನಿವೇಶನವೊಂದನ್ನು ಅವರಿಬ್ಬರ ಹೆಸರಿಗೆ ನೊಂದಣಿ ಮಾಡಿಕೊಡಲು ಮಾವ ನಾರಾಯಣಸ್ವಾಮಿ ಮುಂದಾಗಿದ್ದರು. ಆದರೆ ಇದು ಮಣಿಕಂಠನಿಗೆ ಇಷ್ಟವಿರಲಿಲ್ಲ. ಹೀಗಾಗಿ ತಂದೆ ಕೊಲೆಗೆ ಮಗ ಮಣಿಕಂಠ ಸುಪಾರಿ ನೀಡಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ.
ಸುಪಾರಿ ಪಡೆದವರು ಮಾರತ್ ಹಳ್ಳಿ ಬಳಿಯ ಪಣತ್ತೂರಿನ ಕಾವೇರಪ್ಪ ಲೇಔಟ್ನಲ್ಲಿ ನಾರಾಯಣಸ್ವಾಮಿಯನ್ನು ಕೊಂದು ಪರಾರಿಯಾಗಿದ್ದಾರೆ. ಮಾರತ್ ಹಳ್ಳಿ ಪೊಲೀಸರು ಮಣಿಕಂಠನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆ ಆರೋಪಿಗಳಿಗಾಗಿ ಮಾರತ್ತಹಳ್ಳಿ ಪೊಲೀಸರಿಂದ ಹುಡುಕಾಟ ನಡೆಸಿದ್ದಾರೆ.
ಎರಡನೇ ಪತ್ನಿ ಕೊಲೆ ಯತ್ನ:
ಮೂರ್ನಾಲ್ಕು ತಿಂಗಳ ಹಿಂದೆ ಆರೋಪಿ ಮಣಿಕಂಠ ಎರಡನೇ ಪತ್ನಿಗೂ ಚಾಕು ಇರಿದು ಕೊಲೆ ಮಾಡಲು ಯತ್ನಿಸಿದ್ದು ಪತಿ ಪತ್ನಿ ಗಲಾಟೆಯಾಗಿದ್ದರಿಂದ ಪೊಲೀಸರು ಕೇಸ್ ದಾಖಲಿಸಿಕೊಳ್ಳದೆ ಸಂಧಾನ ಮಾಡಿ ಕಳುಹಿಸಿದ್ದರು ಎಂದು ತಿಳಿದುಬಂದಿದೆ.

