ಬೆಳಗಾವಿ, ಸೆ.5- ಮಹಿಳೆಯೊಬ್ಬರ ಜೊತೆ ಮಾತನಾಡಿದ ಆಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ನೊಂದ ಬೈಲಹೊಂಗಲ ತಾಲೂಕಿನ ನೆಗಿನಹಾಳದ ಗುರು ಮಡಿವಾಳೇಶ್ವರ ಮಠದ ಸ್ವಾಮೀಜಿಗಳು ಶಂಕಾಸ್ಪದವಾಗಿ ಸಾವಿಗೆ ಶರಣಾಗಿದ್ದಾರೆ.
ಮುರುಘಾ ಮಠದ ಸ್ವಾಮೀಜಿಗಳ ಮೇಲೆ ಇರುವ ಆರೋಪದ ಬೆನ್ನಲ್ಲೇ ಇಬ್ಬರು ಮಹಿಳೆಯರು ಮಾತನಾಡಿರುವ ಆಡಿಯೋ ರಿಲೀಸ್ ಆಗಿರುವುದೇ ಈ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.
ಮುರಘಾ ಶ್ರೀಗಳ ಲೈಂಗಿಕ ಪ್ರಕರಣ ಕುರಿತು ಇಬ್ಬರು ಮಹಿಳೆಯರು ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗುತ್ತಿದ್ದು, ಅದರ ಬೆನ್ನಲ್ಲೇ ನೇಗಿನಹಾಳದ ಬಸವಸಿದ್ದಲಿಂಗ ಸ್ವಾಮೀಜಿ ಮನ ನೊಂದು ನೇಣಿಗೆ ಶರಣಾಗಿದ್ದಾರೆ.
ಕೆಲವು ಸ್ವಾಮೀಜಿಗಳ ಲೈಂಗಿಕ ಹಗರಣದ ಕುರಿತು ಓರ್ವ ಮಹಿಳೆ ಆಡಿಯೊದಲ್ಲಿ ಹೆಸರು ಸಹಿತ ಪ್ರಸ್ತಾಪ ಮಾಡಿದ್ದಾರೆ. ಆಡಿಯೊದಲ್ಲಿ ಇಬ್ಬರು ಮಹಿಳೆಯರು ಮಾತನಾಡಿದ್ದಾರೆ. ಅವರ ಪೈಕಿ ಓರ್ವ ಮಹಿಳೆ ಕೆಲವೊಂದು ಪ್ರಶ್ನೆಗಳನ್ನು ಇನ್ನೊಂದು ಮಹಿಳೆಗೆ ಕೇಳಿದ್ದಾರೆ. ಬೆಳಗಾವಿಯ ಮಠದಲ್ಲಿಯೇ ಅನೇಕ ವರ್ಷಗಳಿಂದ ತಾವು ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿರುವ ಇನ್ನೊಂದು ಮಹಿಳೆ ಮಠಗಳಲ್ಲಿ ನಡೆಯುತ್ತಿದೆ ಎನ್ನಲಾದ ಲೈಂಗಿಕ ದೌರ್ಜನ್ಯಗಳ ಕುರಿತು ವಿವರಣೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕೆಲವೊಂದು ಮಠಗಳು ಹಾಗೂ ಕೆಲವು ಸ್ವಾಮೀಜಿಗಳ ಹೆಸರನ್ನೂ ಆಕೆ ಆಡಿಯೋದಲ್ಲಿ ಹೇಳಿದ್ದಾರೆ. ಆ ಆಡಿಯೊದಲ್ಲಿ ನೇಗಿನಹಾಳ ಸ್ವಾಮೀಜಿ ಹೆಸರು ಕೂಡ ಇದೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿ ಮನನೊಂದುಕೊಂಡು ಇಂಥದ್ದೊಂದು ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ವೈರಲ್ ಆಡಿಯೋ ಕುರಿತು ಸೂಕ್ತ ತನಿಖೆ ನಡೆಸುವಂತೆ, ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೈಲಹೊಂಗಲ ಡಿವೈಎಸ್ಪಿ ಅವರಿಗೆ ಮಠದ ಆಡಳಿತ ಮಂಡಳಿ ದೂರು ನೀಡಿದೆ. ಲಿಂಗಾಯತ ಧರ್ಮದ ಮಠಾಧೀಶರನ್ನ ಗುರಿಯಾಗಿಸಿಕೊಂಡು ಪಟ್ಟಭದ್ರ ಹಿತಾಸಕ್ತಿಗಳು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ.
ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು ಮಠಾಧೀಶರ ಚಾರಿತ್ರ್ಯಕ್ಕೆ ಧಕ್ಕೆ ಆಗುವ ರೀತಿಯಲ್ಲಿ ಲಿಂಗಾಯತ ಧರ್ಮದವರಿಗೆ ಮುಜುಗರ ಮಾಡಿ ಧಾರ್ಮಿಕ ಭಾವನೆಗಳಿಗೆ ದಕ್ಕೆ ಉಂಟು ಮಾಡುತ್ತಿದ್ದಾರೆ. ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಹೇಳಲಾಗಿದೆ.
ಘಟನಾ ಸ್ಥಳಕ್ಕೆ ಬೈಲಹೊಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.