ಬಾಲಿವುಡ್ ನಟ ಸಲ್ಮಾನ್ ಖಾನ್ ನಂತರ, ಈಗ ನಟಿ ಸ್ವರಾ ಭಾಸ್ಕರ್ ಅವರಿಗೆ ಜೀವ ಬೆದರಿಕೆ ಪತ್ರ ಬಂದಿದೆ. ನಟಿಯ ನಿವಾಸಕ್ಕೆ ಸ್ಪೀಡ್ ಪೋಸ್ಟ್ ಮೂಲಕ ಅನಾಮಧೇಯ ಪತ್ರ ಬಂದಿದ್ದು ಜೀವ ಬೆದರಿಕೆ ಪತ್ರ ಬಂದ ಕುರಿತು ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಪಿಟಿಐ ವರದಿಗಳು ತಿಳಿಸಿದೆ.
ಪತ್ರವನ್ನು ಸ್ವೀಕರಿಸಿದ ನಂತರ, ಸ್ವರಾ ಭಾಸ್ಕರ್ ವರ್ಸೋವಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರು ಮತ್ತು ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ನಾವು ಅಪರಿಚಿತ ವ್ಯಕ್ತಿಗಳ ವಿರುದ್ಧ ನಾನ್-ಕಾಗ್ನಿಸೇಬಲ್ ಕ್ರೈಂ ಪ್ರಕರಣ ದಾಖಲಿಸಿದ್ದೇವೆ ಎಂದು ಅವರು ಹೇಳಿದರು.
ಹಿಂದಿಯಲ್ಲಿ ಕೈಬರಹದ ಪತ್ರ ಇದಾಗಿದೆ. ಪತ್ರದಲ್ಲಿ ಸ್ವರಾ ಅವರ ಜೀವಕ್ಕೆ ನೇರವಾಗಿ ಬೆದರಿಕೆ ಹಾಕಲಾಗಿದೆ ಮತ್ತು ಸಾವರ್ಕರ್ ಅವರನ್ನು ಅವಮಾನಿಸುವುದರ ವಿರುದ್ಧ ಎಚ್ಚರಿಸುವ ಸಂದೇಶದಿಂದ ತುಂಬಿತ್ತು. ಕೊನೆಯಲ್ಲಿ ‘ಇಸ್ ದೇಶ್ ಕೆ ನೌಜವಾನ್’ ಎಂದು ಪತ್ರಕ್ಕೆ ಸಹಿ ಹಾಕಲಾಗಿದೆ. ವೀರ ಸಾವರ್ಕರ್ ಅವರ ಅವಮಾನವನ್ನು ದೇಶದ ಯುವಕರು ಸಹಿಸುವುದಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.