ದಕ್ಷಿಣ ಕನ್ನಡ,ಜೂ.10-ಭಟ್ಕಳದ ಪ್ರಸಿದ್ಧ ಪ್ರವಾಸಿ ತಾಣ ಮುರುಡೇಶ್ವರ ಬಳಿಯ ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ನೀರು ಪಾಲಾಗಿದ್ದು, ಮೂವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ..
ಸುಶಾಂತ್ ಎಂ.ಎಸ್. (23) ಮೃತ ದುರ್ದೈವಿ. ಅಬ್ರಾರ್ ಶೇಖ್ (21) ನೀರಿನಲ್ಲಿ ನಾಪತ್ತೆಯಾದ ಯುವಕನಾಗಿದ್ದು ಆತನ ಪತ್ತೆಗೆ ಶೋಧ ನಡೆಸಲಾಗಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರದಿಂದ 12 ಯುವಕರ ತಂಡ ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಬಂದಿದ್ದು, ಸಮುದ್ರ ಸ್ನಾನಕ್ಕೆಂದು ತೆರಳಿರುವಾಗ ಇದ್ದಕ್ಕಿದ್ದಂತೆ ದೊಡ್ಡ ಅಲೆಯೊಂದು ಮೂವರನ್ನು ಸೆಳೆದುಕೊಂಡಿದೆ. ಈ ಸಂದರ್ಭದಲ್ಲಿ ಸ್ಥಳೀಯರು ಇಬ್ಬರನ್ನು ರಕ್ಷಣೆ ಮಾಡಿದ್ದು, ಅಬ್ರಾರ್ ಶೇಖ್ ನೀರು ಪಾಲಾಗಿದ್ದಾನೆ.
ಇನ್ನೊಂದು ತಂಡ ಶಿವಮೊಗ್ಗ ಜಿಲ್ಲೆಯ ಆಗುಂಬೆಯಿಂದ ಪ್ರವಾಸಕ್ಕೆ ಬಂದಿದ್ದು, ಇವರಲ್ಲಿ ಒಂದೇ ಕುಟುಂಬದ ಮೂವರು ಸಮುದ್ರದಲ್ಲಿ ಈಜಾಡುತ್ತಿದ್ದ ವೇಳೆ, ಸುಶಾಂತ್ ಮತ್ತು ಆತನ ಚಿಕ್ಕಪ್ಪ ಅಲೆಯ ರಭಸಕ್ಕೆ ಮುಳುಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ಓರ್ವನನ್ನು ರಕ್ಷಿಸಲು ಸಾಧ್ಯವಾಗಿದೆ. ಈ ವೇಳೆ ಸುಶಾಂತ್ ಮುಳುಗಿ ಸಾವನ್ನಪ್ಪಿದ್ದು, ಶವ ಪತ್ತೆಯಾಗಿದೆ. ಅಬ್ರಾರ್ ಅವರಿಗಾಗಿ ಶೋಧಕಾರ್ಯ ಮುಂದುವರೆದಿದೆ. ಅಬ್ರಾರ್ ಅವರ ಕುಟುಂಬಸ್ಥರು ಮುರುಡೇಶ್ವರ ತಲುಪಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸ್‌ಪೆಕ್ಟರ್ ಮಹಾಬಲೇಶ್ವರ ನಾಯ್ಕ, ಪಿ.ಎಸ್.ಐ ಪರಮಾನಂದ ಕೋಣ್ಣುರ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತದೆ.
Previous Articleಪೊಲೀಸರೊಂದಿಗೆ ಬಿಜೆಪಿ ಶಾಸಕರ ಪುತ್ರಿ ಅನುಚಿತ ವರ್ತನೆ
Next Article ಬೆಂಗಳೂರಲ್ಲಿ ಮತ್ತೆ ಮಹಿಳೆ ಮೇಲೆ ಆ್ಯಸಿಡ್ ದಾಳಿ