ಬೆಂಗಳೂರು, ನ.27- ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದ ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣ ರಾಜ್ಯದ ಹಲವೆಡೆ ತನ್ನ ಕಬಂಧ ಬಾಹುಗಳನ್ನು ಚಾಚಿದೆ ಎಂಬ ವರದಿಗಳ ಬೆನ್ನಲ್ಲೇ ಇವುಗಳ ತಡೆಗೆ ಕಾರ್ಯಪಡೆ ರಚನೆಗೆ ನಿರ್ಧರಿಸಲಾಗಿದೆ.
ಭ್ರೂಣ ಹತ್ಯೆ ಮತ್ತು ಪತ್ತೆ ಪ್ರಕರಣ ಭಾರೀ ಸಂಚಲನ ಮೂಡಿಸಿರುವ ಬೆನ್ನಲ್ಲೇ ಎಚ್ಚೆತ್ತಿರುವ ಆರೋಗ್ಯ ಇಲಾಖೆ ನರ್ಸಿಂಗ್ ಹೋಂ, ಖಾಸಗಿ ಆಸ್ಪತ್ರೆ ಕ್ಲಿನಿಕ್ ಗಳ ಮೇಲೆ ಹದ್ದಿನ ಕಣ್ಣಿಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.
ಇದಕ್ಕಾಗಿ ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಭ್ರೂಣ ಪತ್ತೆ ಹಾಗೂ ಹತ್ಯೆಯಂತಹ ಅಕ್ರಮ ತಡೆಗಟ್ಟಲು ಟಾಸ್ಕ್ ಪೋರ್ಸ್ ಪಡೆಯನ್ನು ನಿಯೋಜಿಸಲು ನಿರ್ದೇಶನ ನೀಡಿದೆ.ಈ ಕಾರ್ಯ ಪಡೆ ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆ, ಕ್ಲಿನಿಕ್,ಪ್ರಯೋಗಾಲಯಗಳ ಮೇಲೆ ನಿಗಾ ಇಡಬೇಕು. ನಿಯಮಿತವಾಗಿ ಇವುಗಳನ್ನು ಪರಿಶೀಲನೆ ಮಾಡಬೇಕು ಇದಕ್ಕೆ ಅಗತ್ಯವಾದ ಪೊಲೀಸ್ ನೆರವು ಪಡೆಯಲು ಸಲಹೆ ಮಾಡಲಾಗಿದೆ.
ಕಳೆದ ಎರಡು ವರ್ಷದಲ್ಲಿ ಸುಮಾರು 9೦೦ ಹೆಣ್ಣು ಭ್ರೂಣ ಹತ್ಯೆ ಮಾಡಿದ ಗ್ಯಾಂಗನ್ನು ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ರಾಜ್ಯದಲ್ಲಿ ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸಿದೆ.