ಬೆಂಗಳೂರು,ನ.20- ಕೋಲಾರ ತಾಲ್ಲೂಕು ಕೆಂದಟ್ಟಿ ಗ್ರಾಮದ ಕೆರೆ ಬಳಿಯಿಂದ ಸಾಫ್ಟ್‌ವೇರ್ ಇಂಜಿನಿಯರ್ ರೊಬ್ಬರು ಅನುಮಾನಾಸ್ಪದವಾಗಿ ನಾಪತ್ತೆಯಾಗಿ ಅವರ ಮೂರು ವರ್ಷದ ಮಗು ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ದುರ್ಘಟನೆ ನಡೆದಿದೆ.
ಇತ್ತ ನಾಪತ್ತೆಯಾದ ಸಾಫ್ಟ್‌ವೇರ್ ಇಂಜಿನಿಯರ್ ತಮಿಳುನಾಡಿನಲ್ಲಿರುವ ಸುಳಿವು ಲಭ್ಯವಾಗಿದ್ದು ಪ್ರಕರಣ ಜಾಡು ಹಿಡಿದಿರುವ ಪೊಲೀಸರು ಹುಡುಕಾಟ ಚುರುಕುಗೊಳಿಸಿದ್ದಾರೆ.
ಮಗುವಿನ ಶವ ಕೆರೆಯಲ್ಲಿ ಸಿಕ್ಕ ನಂತರ ದಡದಲ್ಲಿ ಕಾರು ಕೂಡ ಪತ್ತೆಯಾಗಿತ್ತು. ಹೀಗಾಗಿ ಮಗುವಿನ ತಂದೆ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿ ಕೆರೆಯಲ್ಲಿ ಎರಡು ದಿನಗಳ ತೀವ್ರ ಶೋಧ ನಡೆಸಲಾಗಿತ್ತು.
ಕಳೆದ ನ. 15 ರ ರಾತ್ರಿ ಕೋಲಾರ ತಾಲ್ಲೂಕು ಕೆಂದಟ್ಟಿ ಗ್ರಾಮದ ಕೆರೆಯಲ್ಲಿ ಮೂರು ವರ್ಷದ ಪುಟ್ಟ ಮಗುವಿನ ಶವವೊಂದು ಪತ್ತೆಯಾಗಿತ್ತು, ಜೊತೆಗೆ ಅದಕ್ಕೆ ಪೂರಕ ಎಂಬಂತೆ ಕೆರೆಯ ದಡದಲ್ಲಿ ಒಂದು ನೀಲಿ ಬಣ್ಣದ ಐ20 ಕಾರ್ ಕೂಡಾ ಪತ್ತೆಯಾಗಿತ್ತು. ಈ ವಿಷಯ ತಿಳಿದು ಸ್ಥಳಕ್ಕೆ ಬೇಟಿ ನೀಡಿದ್ದ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದರು.
ಮಗು ಗುರುತು ಪತ್ತೆ:
ಕೆರೆ ದಡದಲ್ಲಿ ಪತ್ತೆಯಾದ ಕಾರು ಹಾಗೂ ಮೃತ ಮಗುಯಾರದ್ದು ಎಂದು ವಿಚಾರಣೆ ಮಾಡಿದಾಗ ಪತ್ತೆಯಾಗಿದ್ದ ಮಗು ಗುಜರಾತ್ ಮೂಲದ ಚಾಕ್ಲೆಟ್ ಬಾಗಲೂರಿನ ರಾಗಾ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ ರಾಹುಲ್ ಹಾಗೂ ಭವ್ಯ ದಂಪತಿಯ ಮೂರು ವರ್ಷದ ಮಗು ಜಿಯಾ ಎನ್ನುವುದು ಪತ್ತೆಯಾಗಿತ್ತು. ಇನ್ನು ಸ್ಥಳಕ್ಕೆ ಬಂದಿದ್ದ ರಾಹುಲ್ ಪತ್ನಿ ಭವ್ಯ ಪೊಲೀಸರಿಗೆ ನವೆಂಬರ್ 15ರ ಬೆಳಿಗ್ಗೆಯಿಂದ ತನ್ನ ಪತಿ ಹಾಗೂ ಮಗು ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದರು.
ನ. 15 ರಂದು ಮಗುವನ್ನು ಶಾಲೆಗೆ ಬಿಟ್ಟು ಬರುವುದಾಗಿ ಹೇಳಿ ಮಗುವಿನೊಂದಿಗೆ ಹೊರಟಿದ್ದ ರಾಹುಲ್ ಮದ್ಯಾಹ್ನ ಸುಮಾರಿಗೆ ರಾಹುಲ್ ಪೋನ್ ಸ್ವಿಚ್ ಆಫ್ ಆಗಿತ್ತು. ಈ ಬಗ್ಗೆ ಭವ್ಯ ಬಾಗಲೂರು ಪೊಲೀಸರಿಗೆ ದೂರು ಸಹ ನೀಡಿದ್ದರು.
ಕೆರೆ ಬಳಿ ಕಾರು ಪತ್ತೆ:
ಆದರೆ ಅದೇ ದಿನ ಸಂಜೆ ವೇಳೆ ನಾಪತ್ತೆ ಯಾಗಿದ್ದ ಭವ್ಯ ಪತಿ ರಾಹುಲ್ ಕಾರು ಮತ್ತು ಮಗುವಿನ ಶವ ಕೋಲಾರ ತಾಲ್ಲೂಕು ರಾಷ್ಟ್ರೀಯ ಹೆದ್ದಾರಿ-75ರ ಕೆಂದಟ್ಟಿ ಗ್ರಾಮದ ಕೆರೆಯ ಬಳಿ ಪತ್ತೆಯಾಗಿತ್ತು.
ಪತ್ತೆಯಾದ ಕಾರಿನಲ್ಲಿ ರಾಹುಲ್ ಮೊಬೈಲ್, ಪರ್ಸ್, ಮಗುವಿನ ಸ್ಕೂಲ್ ಬ್ಯಾಗ್ ಸೇರಿದಂತೆ ಎಲ್ಲವೂ ಕಾರಿನಲ್ಲಿತ್ತು. ಎಲ್ಲರೂ ಕೂಡಾ ರಾಹುಲ್ ಮಗುವನ್ನು ಕೊಂದು ತಾನು ಕೂಡಾ ಕೆರೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿ, ಸತತವಾಗಿ ಎರಡು ದಿನಗಳ ಕಾಲ ರಾಹುಲ್ ಶವಕ್ಕಾಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಲ್ಲಿ ಹುಡುಕಾಟ ನಡೆಸಿದ್ದರು. ಆದರೆ ಆದರೆ ಶವ ಪತ್ತೆಯಾಗಿರಲಿಲ್ಲ.
ಆತ್ಮಹತ್ಯೆ ಶಂಕೆ:
ಇನ್ನು ಪೊಲೀಸರ ತನಿಖೆ ವೇಳೆಯಲ್ಲಿ ರಾಹುಲ್ ತನ್ನ ಮಗುವನ್ನು ಕೊಂದು ತಾನು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿತ್ತು. ಅದಕ್ಕೆ ಕಾರಣ ಏನು ಎಂದು ನೋಡಿದಾಗ, ರಾಹುಲ್ ಹಾಗೂ ಭವ್ಯ ಮದುವೆಯಾಗಿ ಆರು ವರ್ಷವಾಗಿತ್ತು. ಎರಡು ವರ್ಷಗಳ ಹಿಂದಷ್ಟೇ ರಾಗಾ ಅಪಾರ್ಟ್ಮೆಂಟ್ನಲ್ಲಿ ಬಂದು ನೆಲೆಸಿದ್ದರು. ಸಾಪ್ಟ್ವೇರ್ ಕಂಪನಿಯ ಉದ್ಯೋಗಿಯಾಗಿದ್ದ ರಾಹುಲ್ ಕಳೆದ ಆರು ತಿಂಗಳಿಂದ ಕೆಲಸ ಇರಲಿಲ್ಲ ಸಾಲದ ಸುಳಿಗೆ ಸಿಲುಕಿದ್ದರು ಎನ್ನುವುದು ತಿಳಿದು ಬಂದಿದೆ
ಅಲ್ಲದೆ, ಕಳೆದ ಒಂದು ವಾರದ ಹಿಂದಷ್ಟೇ ರಾಹುಲ್ ತನ್ನನ್ನು ದುಷ್ಕರ್ಮಿಗಳು ಬೆದರಿಸಿ ಚಿನ್ನದ ಒಡವೆಗಳನ್ನು ಕಸಿದುಕೊಂಡು ಹೋಗಿದ್ದಾರೆಂದು ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅಡವಿಟ್ಟು ಸುಳ್ಳು ದೂರು:
ದೂರು ನೀಡಿದ ನಂತರ ರಾಹುಲ್ ಪದೇ ಪದೇ ಪೊಲೀಸ್ ಠಾಣೆಗೆ ತೆರಳಿ ತಮ್ಮ ದೂರಿನ ಪರಿಶೀಲನೆ ನಡೆಸುವಂತೆ ಒತ್ತಾಯ ಮಾಡಿದ್ದರು. ಪರಿಶೀಲನೆ ನಡೆಸಿದ ಪೊಲೀಸರಿಗೆ ರಾಹುಲ್ ತಾನೇ ತನ್ನ ಒಡವೆಗಳನ್ನು ಅಡವಿಟ್ಟು ಸುಳ್ಳು ದೂರು ನೀಡಿರುವುದು ತಿಳಿದು ಬಂದ ಹಿನ್ನೆಲೆಯಲ್ಲಿ ಠಾಣೆಗೆ ಬರುವಂತೆ ನ.15ರಂದು ಪೊಲೀಸರು ರಾಹುಲ್ಗೆ ತಿಳಿಸಿದ್ದಾರೆ.
ಅಂದು ಪೊಲೀಸ್ ಠಾಣೆಗೆ ಹೋಗಬೇಕಿದ್ದ ರಾಹುಲ್ ಮಗುವನ್ನು ಶಾಲೆಗೆ ಬಿಟ್ಟು ಬರಲು ಹೋದವನು ನಾಪತ್ತೆಯಾಗಿದ್ದರು. ಸಾಲ ಮತ್ತು ಪೊಲೀಸರಿಗೆ ಭಯಪಟ್ಟು ಮಗುವನ್ನು ಕೊಂದು ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಎಲ್ಲರೂ ಭಾವಿಸಿದ್ದರು.
ಆದರೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು ನಾಪತ್ತೆಯಾಗಿದ್ದ ರಾಹುಲ್ ತನ್ನ ಪತ್ನಿ ಭವ್ಯ ತಂದೆಗೆ ಪೋನ್ ಕರೆ ಮಾಡಿ ತಾನು ತಮಿಳುನಾಡಿನ ವೆಲ್ಲೂರಿನಲ್ಲಿದ್ದು, ತನ್ನನ್ನು ಹಾಗೂ ತನ್ನ ಮಗಳನ್ನು ಯಾರೋ ಅಪಹರಿಸಿ ಮಾಡಿ ತನ್ನ ಮಗಳನ್ನು ಕೊಂದು ತನ್ನನ್ನು ತಮಿಳುನಾಡಿಗೆ ಕೆರೆದುಕೊಂಡು ಬಂದು ಬಿಟ್ಟಿರುವುದಾಗಿ ಮಾಹಿತಿ ನೀಡಿದ್ದಾರೆ.
ಮಾವನಿಗೆ ರಾಹುಲ್ ಕರೆ:
ರಾಹುಲ್ ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂಬ ಶಂಕೆ ಇದ್ದು ಆತ ತಮಿಳುನಾಡಿನಲ್ಲಿರುವ ಮಾಹಿತಿ ಗೊತ್ತಾಗಿದೆ. ರಾಹುಲ್ ತನ್ನ ಮಾವನಿಗೆ ಕರೆ ಮಾಡಿ ಮಗುವನ್ನು ಕೊಂದಿರುವ ಹಾಗೂ ತನ್ನನ್ನು ಅಪಹರಣ ಮಾಡಿ ತಮಿಳುನಾಡಿಗೆ ತಂದು ಬಿಟ್ಟಿದ್ದಾರೆ ಎಂದಿದ್ದಾರೆ.
ವಾಪಸ್ ಬರುವಂತೆ ಮಾವ ಸೂಚಿಸಿದಾಗ ಎರಡು ದಿನದ ನಂತರ ಬರುವುದಾಗಿ ರಾಹುಲ್ ಹೇಳಿದ್ದಾರೆ.ಈ ಸಂಬಂಧಿಸಿದಂತೆ ತನಿಖೆಯನ್ನು ತೀವ್ರಗೊಳಿಸಿ ರಾಹುಲ್ನನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿ ಸತ್ಯಾಸತ್ಯತೆ ಪತ್ತೆಹಚ್ಚಲಾಗುವುದು ಎಂದು ಕೋಲಾರ ಎಸ್ ಪಿ ಡಿ.ದೇವರಾಜ್ ತಿಳಿಸಿದ್ದಾರೆ.
ಬಾಗಲೂರು ಪೊಲೀಸರು ಹಾಗೂ ಕೋಲಾರ ಗ್ರಾಮಾಂತರ ಪೊಲೀಸರು ತಮಿಳುನಾಡಿನಲ್ಲಿ ರಾಹುಲ್ಗಾಗಿ ಹುಡುಕಾಟ ಶುರುಮಾಡಿದ್ದು ರಾಹುಲ್ ಸಿಕ್ಕ ನಂತರವಷ್ಟೇ ಪ್ರಕರಣದ ಅಸಲಿಯತ್ತು ಬಯಲಾಗಲಿದೆ. ರಾಹುಲ್ ನಿಜವಾಗಲೂ ಕಿಡ್ನಾಪ್ ಆಗಿದ್ದಾರಾ? ರಾಹುಲ್ ಹೇಳುತ್ತಿರುವ ಮಾತಿನಲ್ಲಿರುವ ಅಸಲಿಯತ್ತೇನು? ಎಂಬಿತ್ಯಾದಿ ವಿಚಾರಗಳು ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.