ಬೆಂಗಳೂರು: ಮಾತಿನಲ್ಲೇ ಅರಮನೆ ತೋರಿಸುವ, ಸಾಮಾಜಿಕ ಜವಾಬ್ದಾರಿಯ ಬಗ್ಗೆ ಗಂಟೆಗಟ್ಟಲೆ ಮಾತನಾಡುವ ಸಂಸದ ತೇಜಸ್ವಿ ಸೂರ್ಯ ಸೋಷಿಯಲ್ ಮೀಡಿಯಾಗಳ ನಿಯಮಗಳನ್ನೂ ಉಲ್ಲಂಘಿಸಿದ್ದಾರೆಯೇ?
ಭಾರತೀಯ ಜನತಾಪಕ್ಷ ಯುವ ಮೋರ್ಚಾದ (ಬಿಜೆವೈಎಂ) ಪಶ್ಚಿಮ ಬಂಗಾಳ ಕಾರ್ಯಕರ್ತನೊಬ್ಬ ನೇಣಿಗೆ ಶರಣಾಗಿರುವ ಫೋಟೋವನ್ನು ಯಥಾವತ್ ಆಗಿ ಅಂದರೆ ಫೋಟೋವನ್ನು ಬ್ಲರ್ ಮಾಡದೆ ಮೂಲ ಫೋಟೋವನ್ನೇ ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿರುವ ತೇಜಸ್ವಿ ಸೂರ್ಯ ಸಾಮಾಜಿಕ ಜವಾಬ್ದಾರಿಯನ್ನೇ ಮರೆತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕಳೆದ ಮೇ 6ರಂದು ತೇಜಸ್ವಿ ಸೂರ್ಯ ಹಾಕಿರುವ ಈ ಪೋಸ್ಟ್‌ಗೆ 28 ಸಾವಿರ ಮಂದಿ ಲೈಕ್ ಮಾಡಿದ್ದಾರೆ. 1,400 ಜನ ಕಮೆಂಟ್ ಮಾಡಿದ್ದಾರೆ. ಈ ಪೋಸ್ಟ್‌ನ್ನು 3,700 ಜನ ಶೇರ್ ಮಾಡಿದ್ದಾರೆ. ಈ ಪೋಸ್ಟ್‌ನ್ನು 8.9 ಮಿಲಿಯನ್ ಜನ ನೋಡಿದ್ದಾರೆ. ಇಷ್ಟೆಲ್ಲ ಆದರೂ ಫೇಸ್‌ಬುಕ್ ಮಾತ್ರ ಈ ಬಗ್ಗೆ ಈವರೆಗೂ ಕ್ರಮ ಕೈಗೊಂಡಿಲ್ಲ. ಸಾಮಾನ್ಯ ಬಳಕೆದಾರರು ಇಂತಹ ಫೋಟೋ ಹಾಕಿದರೆ ತಕ್ಷಣ ರಿಮೂವ್ ಮಾಡುವ ಫೇಸ್‌ಬುಕ್ ತೇಜಸ್ವಿ ಸೂರ್ಯ ಅವರ ಬೇಜವಾಬ್ದಾರಿಯುತ ಪೋಸ್ಟ್ ರಿಮೂವ್ ಮಾಡದೆ ಸುಮಾರು 54 ದಿನಗಳಿಂದ ಹಾಗೆಯೇ ಉಳಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ತೇಜಸ್ವಿ ಸೂರ್ಯ ಅವರು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿಯವರ ಆಡಳಿತ ಟೀಕಿಸುವ ಭರದಲ್ಲಿ ಇಂತಹ ಪ್ರಮಾದ ಮಾಡಿದ್ದಾರೆ. ‘ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಆಡಳಿತಕ್ಕೆ ರಾಜಕೀಯ ಕೊಲೆಗಳೇ ಸಮಾನವಾಗಿವೆ. ನಮ್ಮ ಪಕ್ಷದ ಪಶ್ಚಿಮ ಬಂಗಾಳದ ಕಾರ್ಯಕರ್ತ ಅರ್ಜುನ್ ಚೌರಾಸಿಯಾ ಅವರ ಹತ್ಯೆಯು ಸಿಎಂ ಮಮತಾ ಅವರು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಹೇಗೆ ಸಂಪೂರ್ಣ ವಿಫಲರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. BJYM ನ್ಯಾಯಕ್ಕಾಗಿ ಧ್ವನಿ ಎತ್ತುವುದನ್ನು ಮತ್ತು ಹೋರಾಟವನ್ನು ಮುಂದುವರಿಸುತ್ತದೆ’ ಎಂದು ವಿವಾದಿತ ಫೋಟೋದೊಂದಿಗೆ ಬರೆದುಕೊಂಡಿದ್ದಾರೆ.
ಈ ಬೇಜವಾಬ್ದಾರಿಯುತ ಪೋಸ್ಟ್ ಅಳಿಸದೆ ಫೇಸ್‌ಬುಕ್ ಕೂಡ ಬೇಜವಾಬ್ದಾರಿ ಮೆರೆದಿರುವುದು ವಿಚಿತ್ರವೆನಿಸುತ್ತದೆ. ಅಷ್ಟೇ ಅಲ್ಲ, ಸಾಮಾನ್ಯರಿಗೊಂದು ನ್ಯಾಯ, ಜನಪ್ರತಿನಿಧಿಗಳಿಗೊಂದು ನ್ಯಾಯ ಎಂಬಂತೆ ಫೇಸ್‌ಬುಕ್ ವರ್ತಿಸಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ.