ಬೆಂಗಳೂರು: ಪ್ರಧಾನಿ ಮೋದಿ ಭದ್ರತೆಗೆ ನಿಯೋಜನೆಗೊಂಡಿದ್ದ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆ ಪಿಎಸ್‌ಐ ಸುದರ್ಶನ್ ಶೆಟ್ಟಿ (51) ಅವರು ಸಾವಿಗೀಡಾಗಿದ್ದಾರೆ.
ಈ ಸಂಬಂಧ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹನುಮಂತನಗರ ಠಾಣೆ ಪಿಎಸ್‌ಐ ಆಗಿದ್ದ ಸುದರ್ಶನ್ ಅವರನ್ನು ಕೆಲ ತಿಂಗಳ ಹಿಂದಷ್ಟೇ ನಿಯೋಜನೆ ಮೇರೆಗೆ ಸೈಬರ್ ಕ್ರೈಂ ಠಾಣೆಗೆ ವರ್ಗಾಯಿಸಲಾಗಿತ್ತು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ಭದ್ರತೆಗಾಗಿ ಸುದರ್ಶನ್ ಅವರನ್ನು ನಿಯೋಜಿಸಲಾಗಿತ್ತು. ತಮಗೆ ಹುಷಾರಿಲ್ಲವೆಂದು ಹೇಳಿ ಕರ್ತವ್ಯಕ್ಕೆ ಗೈರಾಗಿದ್ದ ಅವರು, ಯಶವಂತಪುರದಲ್ಲಿರುವ ಮನೆಯಲ್ಲಿ ಉಳಿದುಕೊಂಡಿದ್ದರು.
ಅಪ್ಪಂದಿರ ದಿನದ ಹಿನ್ನೆಲೆಯಲ್ಲಿ ಸುದರ್ಶನ್ ಅವರಿಗೆ ಮಗ ಶುಭಾಶಯ ತಿಳಿಸಿದ್ದ. ಮಗನ ಜೊತೆ ಕಾಲ ಕಳೆದಿದ್ದ ಸುದರ್ಶನ್ ಬಳಿಕ ಕೊಠಡಿಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ಮಲಗಲು ಹೋಗಿರಬಹುದೆಂದು ಮಗ ಸುಮ್ಮನಾಗಿದ್ದ. ಆದರೆ ತುಂಬಾ ಹೊತ್ತಾದರೂ ಹೊರ ಬಾರದಿದ್ದಾಗ ಮಗ ತಂದೆಯನ್ನು ಕರೆಯಲು ಹೋಗಿದ್ದು, ಆಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

