ಬೆಂಗಳೂರು, ಜು.13-ಕುಡಿತ ಮೋಜಿಗಾಗಿ ನಕಲೀ ಕೀ ಬಳಸಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಖತರ್ನಾಕ್ ಸೆಕ್ಯುರಿಟಿ ಗಾರ್ಡ್ ನೊಬ್ಬನನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿ 12.5 ಲಕ್ಷ ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಂಪೇಗೌಡ ಲೇಔಟ್ ನ ಶ್ರೀನಿವಾಸ್ (39)ಬಂಧಿತ ಆರೋಪಿಯಾಗಿದ್ದು ಆತನಿಂದ 12.5 ಲಕ್ಷ ಮೌಲ್ಯದ ವಿವಿಧ ಕಂಪನಿಯ 25 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಡಿಸಿಪಿ ವಿನಾಯಕ ಪಾಟೀಲ್ ತಿಳಿಸಿದ್ದಾರೆ.
ಕಳೆದ ಜೂ. 22 ರಂದು ಬೆಳಗ್ಗೆ 8 ಗಂಟೆ ರ ವೇಳೆ ರಾಜಾಜಿನಗರ ಮೆಟ್ರೋ ನಿಲ್ದಾಣದ ರಸ್ತೆ ಬದಿಯಲ್ಲಿ ವ್ಯಕ್ತಿಯೊಬ್ಬರು ನಿಲ್ಲಿಸಿದ ಹೋಂಡಾ ಶೈನ್ ಬೈಕ್ ಕಳವು ಮಾಡಿದ
ಪ್ರಕರಣ ಗಂಭೀರವಾಗಿ ಪರಿಗಣಿಸಿ ರಚಿಸಲಾಗಿದ್ದ ಇನ್ಸ್‌ಪೆಕ್ಟರ್ ಕಾಂತರಾಜು ಅವರ ನೇತೃತ್ವದ ವಿಶೇಷ ತಂಡ ಕೃತ್ಯ ನಡೆದ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾದಲ್ಲಿನ ದೃಶ್ಯಾವಳಿಗಳಿಂದ ಮುಖ ಚಹರೆಗಳನ್ನು ಪಡೆದು ಆರೋಪಿಯನ್ನು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಯು ಗಾರ್ಮೆಂಟ್ಸ್ ವೊಂದರಲ್ಲಿ ಸೆಕ್ಯೂರಿಟಿಯಾಗಿ ಕೆಲಸ ಮಾಡಿಕೊಂಡಿದ್ದು, ಅದರಲ್ಲಿ ಬರುವ ಸಂಬಳ ಮನೆ ನಿಭಾಯಿಸಲು ಕುಡಿತ ಮೋಜು ಮಾಡಲು ನಕಲಿ ಕೀ ಬಳಸಿ ಬೈಕ್ ಕಳವು ಮಾಡಿ ಮಾರಾಟ ಮಾಡುತ್ತಿರುವುದನ್ನು ವಿಚಾರಣೆ ಬಾಯ್ಬಿಟ್ಟಿದ್ದಾನೆ.
ರಾಜಾಜಿನಗರ ಮೇಟ್ರೊ ನಿಲ್ದಾಣದ ಅಕ್ಕಪಕ್ಕ ಮತ್ತು ಅಕ್ಕಮಹಾದೇವಿ ಪಾರ್ಕ್ ಸುತ್ತಮುತ್ತ ಸಾರ್ವಜನಿಕರು ತಮ್ಮ ದ್ವಿಚಕ್ರವಾಹನವನ್ನು ನಿಲ್ಲಿಸಿ ಕೆಲಸಕ್ಕೆ ಹೋಗುವುದನ್ನು ಗಮನಿಸಿಕೊಂಡು ನಕಲಿ ಕೀಗಳನ್ನು ಬಳಸಿ ಕಳ್ಳತನ ಮಾಡುತ್ತಿದ್ದಾಗಿ ತಿಳಿದು ಬಂದಿದೆ.
ಆರೋಪಿಯು 2019 ನೇ ಸಾಲಿನಿಂದ ದ್ವಿಚಕ್ರವಾಹನ ಕಳವು ಮಾಡುವ ಕೃತ್ಯದಲ್ಲಿ ತೊಡಗಿರುತ್ತಾವುದಾಗಿ ತಿಳಿಸಿದ್ದು ಇದೇ ಮೊದಲ ಬಾರಿಗೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಆರೋಪಿಯು ಕಳವು ಮಾಡಿದ ದ್ವಿಚಕ್ರವಾಹನಗಳನ್ನು ಕೋಲಾರದ ಮತ್ತು ಆಂಧ್ರಪ್ರದೇಶದ ತನ್ನ ಸ್ನೇಹಿತರುಗಳಿಗೆ ತಾನು ಬೆಂಗಳೂರಿನಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್‍ಗಳ ವ್ಯಾಪಾರ ಮಾಡುತ್ತಿದ್ದೇನೆಂದು ಹೇಳಿ ಬೈಕ್‍ಗಳ ದಾಖಲಾತಿಗಳನ್ನು ನಂತರ ತಂದು ಕೊಡುವುದಾಗಿ ತಿಳಿಸಿ ಕಡಿಮೆ ಬೆಲೆಗೆ ಮಾರಾಟ ಮಾಡಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ.
ಆರೋಪಿಯ ಬಂಧನದಿಂದ 25 ದ್ವಿಚಕ್ರವಾಹನ ಕಳವು ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ ಮಹಾಲಕ್ಷ್ಮೀಲೇಔಟ್-21 ದ್ವಿಚಕ್ರವಾಹನ ಕಳವು ಪ್ರಕರಣ ಪತ್ತೆಯಾಗಿರುತ್ತದೆ ಉಳಿದ 4-ದ್ವಿಚಕ್ರವಾಹನಗಳ ವಾರಸುದಾರರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದರು.