ಬೆಂಗಳೂರು, ಮಾ.19- ಯಾರು ಮಹಾರಾಜ,ಈಗ ರಾಜ, ಮಹಾರಾಜ ಯಾರೂ ಇಲ್ಲ. ಸಂವಿಧಾನ ಜಾರಿಯಾದ ದಿನದಿಂದ ದೇಶದಲ್ಲಿ ರಾಜ, ಮಹಾರಾಜ ಎಂಬ ಪರಿಕಲ್ಪನೆ ಇಲ್ಲ ಎಂದು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.
ಮೈಸೂರು (Mysore) ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ತಮಗೆ ಟಿಕೆಟ್ ನಿರಾಕರಿಸಿ,ರಾಜ ವಂಶಸ್ಥ ಯದುವೀರ್ ಅವರಿಗೆ ಟಿಕೆಟ್ ನೀಡಿರುವ ಕ್ರಮದ ಬಗ್ಗೆ ಅಸಮಾಧಾನಗೊಂಡಿರುವ ಅವರು ಯದುವೀರ್ ಸ್ಪರ್ಧೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಸಮರ್ಥಿಸಿದ್ದಾರೆ.
ರಾಜ, ಮಹಾರಾಜ ಕುರಿತು ಮುಖ್ಯಮಂತ್ರಿಗಳ ಹೇಳಿಕೆಯಲ್ಲಿ ಹುಳುಕು ಹುಡುಕುವುದು ತಪ್ಪು..
ಯದುವೀರ್ ಒಡೆಯರ್ ಮೈಸೂರು ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಷ್ಟೇ ಎಂದು ತಿಳಿಸಿದರು.
ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದರಲ್ಲಿ ಏನು ತಪ್ಪಿಲ್ಲ. ಈಗ ದೇಶದಲ್ಲಿ ರಾಜಾಡಳಿತ ಇಲ್ಲ. ಖಾಸಗಿ ದರ್ಬಾರ್ ವೇಳೆ ಮಾತ್ರ ರಾಜರು ಅಲ್ಲಿಗೆ ಸೀಮಿತವಾಗಿ ಮಾತ್ರ ಇರುತ್ತಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಸೈದ್ಧಾಂತಿಕವಾಗಿ ವಿರೋಧಿಸುತ್ತೇನೆ. ಆದರೆ ಯದುವೀರ್ ಬಗ್ಗೆ ನೀಡಿರುವ ಹೇಳಿಕೆ ವಿಚಾರದಲ್ಲಿ ಸಹಮತ ಇದೆ ಎಂದು ತಿಳಿಸಿದರು ದೇಶದ ಸಂವಿಧಾನದಲ್ಲಿ ರಾಜ, ರಾಣಿ ಪಟ್ಟಕ್ಕೆ ಹೆಚ್ಚು ಮಹತ್ವ ಇಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಪ್ರಜೆಗಳು.ಯದುವೀರ್ ಈಗ ಚುನಾವಣೆಗೆ ಸ್ಪರ್ಧಿಸಿದ್ದು,ಅವರು ಮೈಸೂರು ಕ್ಷೇತ್ರದ ಅಭ್ಯರ್ಥಿ ಎಂದು ಹೇಳಿದರು.