ಬೆಂಗಳೂರು,ಆ.27 – ಆಂಧ್ರ ಪ್ರದೇಶದಿಂದ ವಿಮಾನದಲ್ಲಿ ಬಂದು ಖರೀದಿ ನೆಪದಲ್ಲಿ ದುಬಾರಿ ಬೆಲೆಯ ಸೀರೆ ಕಳ್ಳತನ (Saree Stealers) ಮಾಡಿ ಮರಳುತ್ತಿದ್ದ ಖತರ್ನಾಕ್ ಮಹಿಳೆಯರ ಗ್ಯಾಂಗ್‍ನ್ನು ಅಶೋಕ್ ನಗರ ಪೊಲೀಸರು ಬಂಧಿಸಿದ್ದಾರೆ.
ಗುಂಟೂರು ಮೂಲದ ರಮಣ, ರತ್ನಾಲು, ಚುಕ್ಕಮ್ಮ ಬಂಧಿತ ಆರೋಪಿಗಳಾಗಿದ್ದು,ಅವರಿಂದ 14 ಲಕ್ಷ ಮೌಲ್ಯದ ಸೀರೆಗಳನ್ನು ಜಪ್ತಿ ಮಾಡಲಾಗಿದೆ.
ಗುಂಟೂರಿನಿಂದ ವಿಮಾನದಲ್ಲಿ ಬೆಂಗಳೂರಿಗೆ ಬಂದು ನಗರದಲ್ಲಿ ಸ್ಕಾರ್ಪಿಯೋ ಕಾರಿನಲ್ಲಿ ಸುತ್ತುತ್ತಿದ್ದ ಆರೋಪಿಗಳು ಸೀರೆ ಕೊಂಡುಕೊಳ್ಳುವ ನೆಪದಲ್ಲಿ ಬಟ್ಟೆ ಅಂಗಡಿಗಳಿಗೆ ತೆರಳಿ ಅಂಗಡಿಯವರಿಗೆ ಯಾಮಾರಿಸಿ ದುಬಾರಿ ಬೆಲೆಯ ಸೀರೆಗಳನ್ನು ಕದ್ದು ಪರಾರಿಯಾಗುತ್ತಿದ್ದರು.
ಕಳ್ಳಿಯರು ಶ್ರೀಮಂತರಂತೆ ಬಿಂಬಿಸಲು ಮೈತುಂಬಾ ಚಿನ್ನಾಭರಣಗಳನ್ನು ಹಾಕಿಕೊಂಡು ಅಂಗಡಿಗೆ ತೆರಳುತ್ತಿದ್ದರು. ಅಲ್ಲಿ ಲಕ್ಷಗಟ್ಟಲೆ ಬೆಲೆ ಬಾಳುವ ಸೀರೆ ತೋರಿಸುವಂತೆ ಕೇಳುತ್ತಿದ್ದರು. ಬಳಿಕ ಹತ್ತಾರು ಸೀರೆ ನೋಡಿ ಬೇರೆ ಸೀರೆ ತೋರಿಸಿ ಎಂದು ಹೇಳಿ, ಅಂಗಡಿಯವರು ಒಳಗಿಂದ ತರಲು ತೆರಳಿದಾಗ ಬಂಡಲ್‍ನ್ನೇ ಉಟ್ಟ ಸೀರೆಯಲ್ಲಿ ಮುಚ್ಚಿಟ್ಟುಕೊಂಡು ಪರಾರಿಯಾಗುತ್ತಿದ್ದರು.
ಆರೋಪಿಗಳು ಪರಾರಿಯಾಗುವಾಗ ಸೆಕ್ಯೂರಿಟಿ ಒಬ್ಬರಿಗೆ ಮಹಿಳೆಯ ಕಾಲಿನ ಬಳಿ ಸೀರೆ ಇರುವುದು ಕಾಣಿಸಿತ್ತು. ಬಳಿಕ ಅನುಮಾನಗೊಂಡು ಅವರು ಮಾಲೀಕರಿಗೆ ತಿಳಿಸಿದ್ದರು. ಈ ವೇಳೆ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಬಳಿಕ ಮಾಲೀಕರು ಸಿಸಿಟಿವಿ ವೀಡಿಯೋ ಸಮೇತ ತೆರಳಿ ಅಶೋಕ ನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದಾಗ ನಗರದ ಹಲವೆಡೆ ಗ್ಯಾಂಗ್ ಕಳ್ಳತನ ಎಸಗಿರುವುದು ಬೆಳಕಿಗೆ ಬಂದಿದೆ.
ಬಂಧಿತರು ಇಲ್ಲಿಯವರೆಗೆ 50ರಿಂದ 60 ಲಕ್ಷ ಮೌಲ್ಯದ ಸೀರೆಗಳನ್ನು ಕಳವು ಮಾಡಿರುವುದು ಪತ್ತೆಯಾಗಿದ್ದು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.
LATEST KANNADA NEWS | KANNADA NEWS UPDATES