ಚೀನಾಕ್ಕೆ ಹತ್ತಿರವಾಗುತ್ತಿರುವ ಮಾಲ್ಡೀವ್ಸ್ ದೇಶದ ನಡೆಯ ಬಗ್ಗೆ ಭಾರತ ವಿಚಲಿತಗೊಂಡಿರುವ ಸುದ್ದಿ ಹಳೆಯದಾಗುತ್ತಿದ್ದಂತೆಯೆ ಭಾರತದ ಲಕ್ಷದ್ವೀಪಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಅಲ್ಲಿನ ಸಮುದ್ರದ ದಡದಲ್ಲಿ ವಿಹರಿಸುತ್ತಾ ಸಮುದ್ರದ ವಿಶೇಷಗಳನ್ನು ಅವಲೋಕಿಸುತ್ತಾ ಜನರಲ್ಲಿ ಲಕ್ಷದ್ವೀಪದ ಬಗ್ಗೆ ಮೂಡಿಸಿದ ಕುತೂಹಲದ ಕಾರಣದಿಂದಾಗಿ ಭಾರತೀಯರು ಲಕ್ಷದ್ವೀಪವನ್ನು ಮಾಲ್ಡೀವ್ಸ್ ಗೆ ಬದಲಾಗಿ ವಿಹಾರ ತಾಣವನ್ನಾಗಿ ಆರಿಸಲು ಹೊರಟುಬಿಟ್ಟರು. ಇದನ್ನು ಭಾರತ ಮಾಲ್ಡೀವ್ಸ್ ಗೆ ಸೆಡ್ಡು ಹೊಡೆದಿದ್ದೆಂದೇ ಭಾರತೀಯ ಮಾಧ್ಯಮಗಳಲ್ಲಿ ಬಿಂಬಿಸಲಾಯಿತು. ಇದೆಲ್ಲದರಿಂದ ಇರಿಸುಮುರಿಸುಗೊಂಡ ಮಾಲ್ಡೀವ್ಸ್ ನ ಕೆಲವು ಮಂತ್ರಿಗಳು ಮೋದಿಯವರನ್ನು ಮತ್ತು ಭಾರತೀಯರನ್ನು ತೆಗಳುವ ಕಾರ್ಯಕ್ಕೆ ಮುಂದಾದರು.
ಅದರಲ್ಲೂ ಪ್ರಮುಖವಾಗಿ ಮಾಲ್ಡೀವ್ಸ್ ನ ಕಿರಿಯ ಮಂತ್ರಿಗಳಾದ ಹಸನ್ ಜಿಹಾನ್, ಮರಿಯಮ್ ಶಿಯೂನ ಮತ್ತು ಮಲ್ಷಾ ಅವರು ಮೋದಿ ಮತ್ತು ಭಾರತವನ್ನು ಅತ್ಯಂತ ಕೀಳಾಗಿ ಟೀಕಿಸಲು ಆರಂಭಿಸಿದರು. ಮರಿಯಮ್ ಅವರು ಮೋದಿಯವರನ್ನು ಮೂರ್ಖ ಮತ್ತು ಇಸ್ರೇಲ್ ದೇಶದ ಬಂಟ ಎಂದು ಕರೆದು ಮೂದಲಿಸಿದರು. ಉಳಿದವರು ಭಾರತ ಮತ್ತು ಭಾರತೀಯರ ಬಗ್ಗೆ ಕಟುವಾಗಿ ನಿಂದನೆ ಮಾಡಿ ಪೋಸ್ಟ್ ಹಾಕಿದರು. ಅದನ್ನೆಲ್ಲ ಗಮನಿಸಿದ ಭಾರತೀಯರು ಮಾಲ್ಡೀವ್ಸ್ ಅನ್ನು ಬಾಯ್ಕಾಟ್ ಮಾಡಬೇಕು, ಭಾರತೀಯರು ಅಲ್ಲಿ ಹೋಗಬಾರದು ಎಂದು ಕರೆ ಕೊಟ್ಟು ಪ್ರತಿಭಟಿಸುವುದಕ್ಕೆ ಮುಂದಾದರು. ಮಾಲ್ಡೀವ್ಸ್ ನ ವಿಪಕ್ಷ ನಾಯಕರೂ ಕೂಡ ಆ ಮಂತ್ರಿಗಳ ಈ ಹೀನ ನಡತೆಯನ್ನು ಟೀಕಿಸಿ ಆ ರೀತಿಯ ನಿಂದನೆ ಸರಿಯಲ್ಲ ಎಂದು ಹೇಳಿದ್ದಾರೆ. ಈಗ ಆ ಮೂವರು ಮಂತ್ರಿಗಳನ್ನು ಆ ದೇಶದ ಮಂತ್ರಿಮಂಡಲದಿಂದ ಅಮಾನತು ಮಾಡಲಾಗಿದೆ. ಈಗಾಗಲೇ ಮಾಲ್ಡೀವ್ಸ್ ದೇಶದ ಅಧ್ಯಕ್ಷ ಮುಇಝು ಅವರು ಭಾರತದ ರಕ್ಷಣಾ ಪಡೆ ದೇಶ ಬಿಟ್ಟು ಹೋಗಬೇಕು ಎನ್ನುವ ಬೇಡಿಕೆಯನ್ನು ಇಟ್ಟಿದ್ದಾರೆ. ಇದೆಲ್ಲದರ ಹಿಂದೆ ಚೀನಾ ದೇಶದ ಕೈವಾಡ ಇದೆಯೆಂದೂ ಹೇಳಲಾಗುತ್ತಿದೆ.