ಬೆಂಗಳೂರು, ಫೆ.20- ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆ ಅಖಾಡಕ್ಕೆ ಭರ್ಜರಿ ರಂಗು ಬಂದಿದೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಜೆಡಿಎಸ್ ನ ಕುಪೇಂದ್ರ ರೆಡ್ಡಿ ಅವರ ಗೆಲುವಿಗೆ ಪಣತೊಟ್ಟಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ,ಅಗತ್ಯ ಇರುವ ಮತಗಳಿಗಾಗಿ ಬೇಟೆ ಆರಂಭಿಸಿದ್ದಾರೆ.
ಇದರ ನಡುವೆ ಪಕ್ಷೇತರ ಶಾಸಕರನ್ನು ಬದರಿಸಲಾಗುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಅವರು ಈ ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳಲು ಕೋರಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದ್ದಾರೆ.
ಪಕ್ಷೇತರ ಶಾಸಕರನ್ನು ಸಂಪರ್ಕಿಸಿರುವ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರ ಬೆಂಬಲಿಗರು ಮತ್ತು ಸಂಬಂಧಿಕರು ಭಾರಿ ಪ್ರಮಾಣದ ಹಣದ ಆಮಿಷ ಒಡ್ಡಿದ್ದಾರೆ ಹಣಕ್ಕೆ ಒಪ್ಪದೇ ಹೋದಲ್ಲಿ ಅವರ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ರವಿಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ಜೆಡಿಎಸ್ ನ ಮಾಜಿ ಸಚಿವರು ಹಾಗೂ ಕೆಲವು ಹಿರಿಯ ಮುಖಂಡರು ಪಕ್ಷೇತರ ಶಾಸಕರಿಗೆ ಹಾಕಿರುವ ಬೆದರಿಕೆಯ ಬಗ್ಗೆ ಕರೆಯ ವಿವರಗಳನ್ನು ದಾಖಲಿಸಿಕೊಂಡಿದ್ದು ಅವುಗಳ ವಿವರವನ್ನು ಪೊಲೀಸ್ ಮಹಾನಿರ್ದೇಶಕರಿಗೆ ನೀಡುವುದಾಗಿ ಹೇಳಿದರು.
ನಮ್ಮ ಸಂಸ್ಕೃತಿ ಅಲ್ಲ.
ಈ ಮಧ್ಯೆ,ಧಮ್ಕಿ ಹಾಕುವ, ಸೆಟ್ಲಮೆಂಟ್ ಮಾಡುವ ಸಂಸ್ಕøತಿ ನಮ್ಮದಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಮ್ಕಿ ಹಾಕಿ ಸಿಕ್ಕ ಸಿಕ್ಕ ಜಾಗದಲ್ಲಿ ಬೇಲಿ ಹಾಕುವುದು ನಮ್ಮ ಜಾಯಮಾನವಲ್ಲ. ನಾನು ಯಾರಿಗೂ ಧಮ್ಕಿ ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯಸಭೆ ಚುನಾವಣೆಯಲ್ಲಿ ಆತ್ಮಸಾಕ್ಷಿಯ ಮತ ಹಾಕುವಂತೆ ಕೇಳುವುದಾಗಿ ಹೇಳಿದ್ದೇವೆ. ಜೆಡಿಎಸ್‍ಗೆ 2 ಮತ ಬರಲಿದೆ ಎಂದು ಹೇಳಿರುವುದು ತಪ್ಪಲ್ಲವೇ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದರು. ಆನೆಯಿಂದ ಮೃತಪಟ್ಟ ಕೇರಳದ ವ್ಯಕ್ತಿಗೆ 15 ಲಕ್ಷ ರೂ. ಪರಿಹಾರ ನೀಡುತ್ತಾರೆ. ನಮ್ಮ ರೈತರಿಗೆ 2 ಸಾವಿರ ರೂ. ಬರ ಪರಿಹಾರ ಕೊಡುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರೀಯ ನಾಯಕರು. ಅವರ ಸಲಹೆ ಮೇರೆಗೆ 15 ಲಕ್ಷ ರೂ. ಪರಿಹಾರ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರದಿಂದ ಪರಿಹಾರವೇ ಬಂದಿಲ್ಲ ಎಂದು ಹೇಳುತ್ತಾರೆ. ಕನ್ನಡಿಗರಿಗೆ ಅನ್ಯಾಯವಾಗಿದೆ ಎನ್ನುತ್ತಾರೆ. ಸಾವಿರ ಸಾರಿ ಸುಳ್ಳು ಹೇಳಿ ನಿಜ ಮಾಡಲು ಹೊರಟಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.