ಬೆಂಗಳೂರು, ಸೆ.7 – ಬಿಟ್ಟು ಹೋಗಿರುವ ಪ್ರಿಯತಮೆ ಜೊತೆ ಮದುವೆ ಮಾಡಿಸಿ ಎಂದು ಪಾಗಲ್ ಪ್ರೇಮಿಯೊಬ್ಬ ನಗರ ಪೊಲೀಸರ ದುಂಬಾಲು ಬಿದ್ದಿದ್ದಾನೆ.
ಖಾಸಗಿ ಕಂಪನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿರುವ ಮಣಿಕಂಠ ತಿಲಕ್ ನಗರ (Tilak Nagar) ಪೊಲೀಸ್ ಠಾಣೆಗೆ ಪ್ರತಿನಿತ್ಯ ಹೋಗಿ ತನ್ನ ಪ್ರಿಯತಮೆ ಜೊತೆ ಮದುವೆ ಮಾಡಿಸಿ ಎಂದು ಪೊಲೀಸರಿಗೆ ದುಂಬಾಲು ಬೀಳುತ್ತಿದ್ದಾನೆ.
ಪ್ರೀತಿ ಪ್ರೇಮ ಎನ್ನುತ್ತಾ ಕಾಲ ಕಳೆದೆವು, ಮದುವೆ ಅಂದ ತಕ್ಷಣ ಜಾತಿ ನೆಪ ಹೇಳಿ ಬಿಟ್ಟು ಹೋಗಿದ್ದಾಳೆ. ಅವಳ ಜೊತೆಯೇ ಮದುವೆ ಮಾಡಿಸಿ ಎಂದು ಪ್ರೇಮಿ ಮಣಿಕಂಠ ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾನೆ.
ಉದ್ಯೋಗ ಅರಸಿ ಬಂದು ಎರಡು ವರ್ಷದ ಹಿಂದೆ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ಪ್ರೀತಿ ಬೆಳೆಸಿಕೊಂಡಿದ್ದು ಪ್ರೀತಿ ಶುರು ಮಾಡಿದ್ದೇ ಯುವತಿಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದೆ,ಬೆಳಿಗ್ಗೆ ತಿಂಡಿಯಿಂದ ಹಿಡಿದು, ಮಧ್ಯಾಹ್ನದ ಊಟ ರಾತ್ರಿ ಊಟಕ್ಕೂ ನಾನೇ ಹಣ ಕೊಡುತ್ತಿದ್ದೆ. ಎರಡು ವರ್ಷ ಲಕ್ಷಾಂತರ ರೂ ಹಣ ಕೊಟ್ಟರೂ ಜಾತಿ ಅಡ್ಡತಂದು ನನ್ನನ್ನು ಪ್ರಿಯತಮೆ ಬಿಟ್ಟು ದೂರವಾಗಿದ್ದಾಳೆ ಎಂದು ಗೋಳಾಡುತ್ತಿದ್ದಾನೆ.
ಇದರಿಂದ ಮನನೊಂದ ಮಣಿಕಂಠ, ಯುವತಿಗೆ ಕೊಟ್ಟ ಹಣದ ಪೋನ್ ಪೇ ಹಿಸ್ಟರಿ ಜೆರಾಕ್ಸ್ ಪ್ರತಿ, ಯುವತಿ ಜೊತೆ ಮಾಡಿದ ಮೆಸೇಜ್ ಚಾಟಿಂಗ್ ಮಾಡಿರುವುದನ್ನು ಝರಾಕ್ಸ್ ಮಾಡಿಸಿ ಅದನ್ನು ಹಿಡಿದು ದಿನ ಪ್ರತಿ ಠಾಣೆಗೆ ಅಲೆದಾಡುತ್ತಿದ್ದಾನೆ.
ಅಲ್ಲದೇ ದುಡ್ಡು ಹೋದರೂ ಪರವಾಗಿಲ್ಲ ನನಗೆ ನನ್ನ ಪ್ರೀತಿ ಬೇಕು ಎಂದು ಹಠ ಹಿಡಿದಿದ್ದು, ಯುವತಿ ಮನೆಯವರ ಜೊತೆ ಮಾತನಾಡಿ ಮದುವೆ ಮಾಡಿಸಿ ಎಂದು ಪೊಲೀಸರಿಗೆ ಅಂಗಲಾಚಿ ಬೇಡಿಕೊಂಡಿದ್ದಾನೆ.
ಕೊನೆಗೆ ವಿಧಿ ಇಲ್ಲದೇ ತಿಲಕ್ ನಗರ ಪೊಲೀಸರು, ಮಣಿಕಂಠನ ದೂರನ್ನು ಸ್ವೀಕರಿಸಿ ಯುವತಿ ಮನೆಯವರನ್ನು ಸಂಪರ್ಕ ಮಾಡಿ ಯುವಕ ಪ್ರೀತಿ ಬಗ್ಗೆ ಹೇಳಿದ್ದಾರೆ. ಅಲ್ಲದೇ ಯುವತಿ ಅಭಿಪ್ರಾಯವನ್ನು ಪಡೆದುಕೊಂಡಿದ್ದಾರೆ. ಆ ವೇಳೆ ಯುವತಿಗೆ ಮದುವೆಯಾಗಲು ಇಷ್ಟವಿಲ್ಲದಿದರೂ ಮಣಿಕಂಠ ಆಕೆ ಹಿಂದೆ ಬಿದ್ದಿರುವುದು ಗೊತ್ತಾಗಿದೆ. ಹೀಗಾಗಿ ಪೊಲೀಸರು ಅಂತಿಮವಾಗಿ ತನಿಖೆ ಮುಕ್ತಾಯಗೊಳಿಸಿದ್ದಾರೆ. ಅಲ್ಲದೇ ಈ ಪ್ರಕರಣವು ಅಸಂಜ್ಞೆಯ ಅಪರಾಧವಾಗಿರುವುದರಿಂದ ಸಂಬಂಧ ಪಟ್ಟ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳುವಂತೆ ತಿಲಕ್ ನಗರ ಪೊಲೀಸ್ ಇನ್ಸ್ಪೆಕ್ಟರ್ ಹಿಂಬರಹ ಬರೆದುಕೊಟ್ಟಿದ್ದಾರೆ