ಭಾರತ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವಂತ ರಾಷ್ಟ್ರ. ಭಾರತವು ವಿಭಿನ್ನ ನಂಬಿಕೆಗಳನ್ನು ಅನುಸರಿಸುವ ಮತ್ತು ವಿವಿಧ ಭಾಷೆಗಳನ್ನು ಮಾತನಾಡುವ ಅನೇಕ ಜನರ ನೆಲೆಯಾಗಿರುವುದರಿಂದ, ಪ್ರತಿಯೊಂದು ಪ್ರದೇಶವು ತನ್ನದೇ ಆದ ಭಾಷೆ, ಉಡುಗೆ, ಕಲೆ, ಸಂಸ್ಕೃತಿ, ಆಚರಣೆಗಳಿಗೆ ಪ್ರಸಿದ್ದಿ ಪಡೆದಿವೆ. ಅದರಲ್ಲಿಯು ಕತ್ತಲಿಂದ ಬೆಳಕಿನೆಡೆಗೆ ದಾರಿ ತೋರಿಸುವ ಹಬ್ಬ ಎಂದೇ ಪ್ರತೀತಿ ಪಡೆದಿರುವುದು ದೀಪಾವಳಿ ಹಬ್ಬ.
ದೀಪಾವಳಿಯನ್ನು ವಿವಿಧ ಸಮುದಾಯಗಳು ಅವರದೇ ಅದ ವಿಶಿಷ್ಟ ಆಚರಣೆಗಳೊಂದಿಗೆ ಆಚರಿಸುತ್ತಾರೆ. ದೇವರ ಮೂರ್ತಿ, ವರ್ಣರಂಜಿತ ದೀಪಗಳು ಪಟಾಕಿಗಳು ಎಲ್ಲೆಡೆ ಬೆಳಕನ್ನು ಬೀರುತ್ತದೆ. ಇಷ್ಟೊಂದು ವೈವಿಧ್ಯತೆಯನ್ನು ಹೊಂದಿರುವ ದೀಪಾವಳಿಯನ್ನು ಯಾವ ಯಾವ ಪ್ರದೇಶದಲ್ಲಿ ಯಾವ ರೀತಿಯಲ್ಲಿ ಆಚರಿಸುತ್ತಾರೆ ಎನ್ನುವುದನ್ನು ನೋಡೋಣ.
- ಪಂಜಾಬ್ – ಬಂಡಿ ಚೋರ್ ದಿವಸ್,
ಪಂಜಾಬ್ ಅಲ್ಲಿ ಸಿಖ್ಖರಿಗೆ ಈ ಹಬ್ಬ ಪ್ರಮುಖವಾಗಿದ್ದು, ಆರನೇ ಗುರುನಾನಕರ ಜನಪ್ರಿಯತೆ ಮತ್ತು ಬೆಳವಣಿಗೆ ಹೆಚ್ಚಳದಿಂದ ಭಯಗೊಂಡ ಚಕ್ರವರ್ತಿ ಜಹಾಂಗೀರ್ ಗುರುನಾನಕರನ್ನು ಸೆರೆಮನೆಗೆ ಹಾಕಿದನು. ನಂತರ ದೀಪಾವಳಿಯ ಸಮಯದಲ್ಲಿಯೇ ಗ್ವಾಲಿಯರ್ ಕೋಟೆಯಿಂದ ಅವರನ್ನು ಬಿಡುಗಡೆ ಮಾಡಲಾಗಿದ್ದು ಅವರ ಬಿಡುಗಡೆ ಸ್ಮರಣಾರ್ಥವಾಗಿ ಈ ಹಬ್ಬ ಆಚರಿಸಲಾಗುತ್ತದೆ.
ಬಂಡಿ ಚೋರ್ ದಿವಸ್ ಅನ್ನು ಮನೆ ಮತ್ತು ಗುರುದ್ವಾರಗಳಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಆಚರಿಸಲಾಗುತ್ತದೆ, ಜೊತೆಗೆ ಪಟಾಕಿಗಳನ್ನು ಸಿಡಿಸುವುದು, ಉಡುಗೊರೆಗಳನ್ನು ನೀಡುವುದು ಈ ಹಬ್ಬದ ವಿಶೇಷವಾಗಿದೆ.
- ಪಶ್ಚಿಮ ಬಂಗಾಳ ಮತ್ತು ಇತರ ಪ್ರೆದೇಶದಲ್ಲಿ ಕಾಳಿ ದೇವಿ ಪೂಜೆ
ಭಾರತದ ಹೆಚ್ಚಿನ ಸ್ಥಳಗಳಲ್ಲಿ ದೀಪಾವಳಿಯಂದು ಲಕ್ಷ್ಮಿ ದೇವಿಯನ್ನು ಪೂಜಿಸಿದರೆ, ಪೂರ್ವ ಭಾರತ, ವಿಶೇಷವಾಗಿ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಅಸ್ಸಾಂನಲ್ಲಿ ಕಾಳಿ ದೇವಿಯನ್ನು ಪೂಜಿಸಲಾಗುತ್ತದೆ. ಶ್ಯಾಮ ಪೂಜೆ ಎಂದೂ ಕರೆಯಲ್ಪಡುವ ಕಾಳಿ ಪೂಜೆಯು ಪೂರ್ವ ಭಾರತದಲ್ಲಿ ದುರ್ಗಾ ದೇವಿ ಪೂಜೆ ನಂತರದ ಎರಡನೇ ಅತ್ಯಂತ ಜನಪ್ರಿಯ ಹಬ್ಬವಾಗಿದೆ.
ಆಗಂಬಗೀಶನ ಪೂಜೆಯು ಪಶ್ಚಿಮ ಬಂಗಾಳದಲ್ಲಿ ನಡೆಯುವ ಕಾಳಿ ಪೂಜೆಯ ಒಂದು ರೂಪವಾಗಿದ್ದು, ಪಶ್ಚಿಮ ಬಂಗಾಳದ ಗ್ರಾಮೀಣ ಪ್ರದೇಶಗಳಲ್ಲಿ, ಮುಖ್ಯವಾಗಿ ಹೌರಾ, ಮಿಡ್ನಾಪುರ ಮತ್ತು ಹೂಗ್ಲಿ ಜಿಲ್ಲೆಗಳಲ್ಲಿ ಆಗಂಬಗಿಶ್ ಆಚರಣೆಗಳನ್ನು ನೋಡಬಹುದು.
- ಗುಜರಾತ್ ನಲ್ಲಿ ಪಟಾಕಿಗಳಿಗೆ ಕಿಡಿಯನ್ನು ಹೊತ್ತಿಸಿ ಪರಸ್ಪರರ ಮೇಲೆ ಎರಚುವುದು.
ಗುಜರಾತಿನ ಪಂಚಮಹಲ್ನಲ್ಲಿ ಜನರು ದೀಪಾವಳಿಯ ಸಮಯದಲ್ಲಿ ಪಟಾಕಿಗಳಿಗೆ ಕಿಡಿಯನ್ನು ಹೊತ್ತಿಸಿ ಪರಸ್ಪರರ ಮೇಲೆ ಎರಚುವ ಮೂಲಕ ಸಂಭ್ರಮಿಸುತ್ತಾರೆ. ಪಂಚಮಹಲ್ ನ ವೇಜಲ್ ಪುರ ಗ್ರಾಮದಲ್ಲಿ ಈ ವಿಶಿಷ್ಟವಾದ ದೀಪಾವಳಿ ಆಚರಣೆ ನಡೆಯುತ್ತದೆ ಮತ್ತು ಇದು ಹಳೆಯ ಸಂಪ್ರದಾಯವಾಗಿದೆ. ಕೆಲವು ಗುಜರಾತಿನ ಮನೆಗಳಲ್ಲಿ ಜನರು ತುಪ್ಪದ ದೀಪವನ್ನು ರಾತ್ರಿಯಿಡೀ ಹಚ್ಚಿ ದೀಪದಲ್ಲಿ ಉಳಿದಿರುವ ಮಸಿಯನ್ನು ಮರುದಿನ ಬೆಳಿಗ್ಗೆ ಕಾಜಲ್ ಮಾಡಲು ಬಳಸುತ್ತಾರೆ, ಇದು ತುಂಬಾ ಮಂಗಳಕರ ಮತ್ತು ಸಮೃದ್ಧಿಯನ್ನು ತರುತ್ತದೆ ಎನ್ನುವುದು ಅವರ ನಂಬಿಕೆ..
ಗುಜರಾತ್ ನ ಬರೂಚ್ ಮತ್ತು ನರ್ಮದಾ ಜಿಲ್ಲೆಗಳಲ್ಲಿ ವಾಸಿಸುವ ಬುಡಕಟ್ಟು ನಿವಾಸಿಗಳು ತಮ್ಮ ಆಚರಣೆಗಳ ಭಾಗವಾಗಿ ಗಿಡಮೂಲಿಕೆಗಳ ಮರವನ್ನು ಸುಡುತ್ತಾರೆ. ಈ ಗಿಡಮೂಲಿಕೆ ಮರದಿಂದ ಉತ್ಪತ್ತಿಯಾಗುವ ಹೊಗೆ ಅವರನ್ನು ಆರೋಗ್ಯವಾಗಿರಿಸುತ್ತದೆ ಎಂದು ಅವರು ನಂಬುತ್ತಾರೆ.
- ಮಧ್ಯಪ್ರದೇಶದಲ್ಲಿ ಗೋವರ್ಧನ ಪೂಜೆ
ದೀಪಾವಳಿಯ ಮರುದಿನ ಉಜ್ಜಯಿನಿ ಜಿಲ್ಲೆಯ ಬಿಡವಾಡ ಗ್ರಾಮದಲ್ಲಿ ಗೋವರ್ಧನ ಹಬ್ಬ ನಡೆಯುತ್ತದೆ. ಈ ದಿನ ಗ್ರಾಮಸ್ಥರು ತಮ್ಮ ಹಸು ಮತ್ತು ಕರುಗಳನ್ನು ಹೂವಿನಿಂದ ಅಲಂಕರಿಸಿ, ಅವರು ನೆಲದ ಮೇಲೆ ಮಲಗುತ್ತಾರೆ ನಂತರ ಅಲಂಕಾರಗೊಂಡ ಹಸುಗಳು ಅವರನ್ನು ತುಳಿದುಕೊಂಡು ಹೋಗುತ್ತವೆ. ಈ ಆಚರಣೆಯಲ್ಲಿ ದೇವರು ಭಕ್ತರ ಪ್ರಾರ್ಥನೆಗಳಿಗೆ ಸ್ಪಂದಿಸುವಂತೆ ಮಾಡುತ್ತದೆ ಎನ್ನುವ ನಂಬಿಕೆಯಿದೆ.
- ಹಿಮಾಚಲ ಪ್ರದೇಶದ ಪಥರ್ ಕಾ ಮೇಳ
ಹಿಮಾಚಲ ಪ್ರದೇಶದ ಧಾಮಿಯಲ್ಲಿ ನಡೆಯುವ ಕಲ್ಲು ತೂರಾಟದ ಒಂದು ಹಬ್ಬವಾಗಿದ್ದು ಇಲ್ಲಿ ಎರಡು ಗುಂಪುಗಳು ದೀಪಾವಳಿ ಹಬ್ಬದ ನಂತರ ಭೇಟಿಯಾಗಿ ಪರಸ್ಪರ ಕಲ್ಲು ಎಸೆಯಲು ಪ್ರಾರಂಭಿಸುತ್ತಾರೆ. ಗಾಯಗೊಂಡವರ ರಕ್ತವನ್ನು ಹತ್ತಿರದ ದೇವಸ್ಥಾನದಲ್ಲಿರುವ ಕಾಳಿ ದೇವಿಯ ವಿಗ್ರಹಕ್ಕೆ ತಿಲಕವನ್ನು ಇಡಲು ಬಳಸುತ್ತಾರೆ. ಮೊದಲು ಇಲ್ಲಿ ನರಬಲಿ ನಡೆಯುತಿತ್ತು ಆದರೆ ಸ್ಥಳೀಯ ರಾಜಪ್ರಭುತ್ವದ ರಾಣಿ ಈ ಆಚರಣೆಯನ್ನು ನಿಷೇಧಿಸಿದಾಗ ಮಾನವ ತ್ಯಾಗದ ಬದಲಿಗೆ, ಜನರು ಪರ್ಯಾಯವಾಗಿ ಕಲ್ಲು ತೂರಾಟದ ಆಚರಣೆಯನ್ನು ಪ್ರಾರಂಭಿಸಿದರು ಅದು ಇನ್ನೂ ಮುಂದುವರೆದುಕೊಂಡು ಬಂದಿದೆ.
- ಛತ್ತೀಸ್‌ಗಢದಲ್ಲಿ ಬೆಳೆಗಳ ಮದುವೆ
ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ಬುಡಕಟ್ಟು ಸಮುದಾಯಗಳು ‘ದೀಪಾವಳಿ’ಯನ್ನು “ದಿಯಾರಿ” ಎಂದು ಆಚರಿಸುತ್ತಾರೆ. ಈ ಹಬ್ಬ ಬೆಳೆಗಳ ವಿವಾಹದೊಂದಿಗೆ ಭಗವಾನ್ ನಾರಾಯಣನ ವಿಗ್ರಹದ ಮುಂದೆ ಹೊಲಗಳಲ್ಲಿ ನಡೆಯುತ್ತದೆ. ಇದರ ನಂತರ, ಜನರು ಆಹಾರ ಧಾನ್ಯಗಳನ್ನು ಸಂಗ್ರಹಿಸುತ್ತಾರೆ. ಮೊದಲ ದಿನ, ಬಸ್ತಾರ್‌ನಲ್ಲಿ ಜಾನುವಾರುಗಳನ್ನು ಹೊಂದಿರುವವರಿಗೆ ಮದ್ಯವನ್ನು ನೀಡಲಾಗುತ್ತದೆ. 3 ದಿನಗಳ ದೀಪಾವಳಿ ಹಬ್ಬದ ಸಂದರ್ಭದಲ್ಲಿ, ಬುಡಕಟ್ಟು ಜನಾಂಗದವರು ತಮ್ಮ ಜಾನುವಾರುಗಳನ್ನು ಹೂವುಗಳಿಂದ ಅಲಂಕರಿಸುತ್ತಾರೆ. ಅವರು ಲಕ್ಷ್ಮಿ ದೇವಿಯ ಸಂಕೇತವಾಗಿ ಬೆಳೆಯನ್ನು ಪೂಜಿಸುತ್ತಾರೆ.
- ಒರಿಸ್ಸಾದಲ್ಲಿ ಪೂರ್ವಜರ ಪೂಜೆ
ದೀಪಾವಳಿಯ ಸಮಯದಲ್ಲಿ, ಒರಿಸ್ಸಾದಲ್ಲಿ ಜನರು ಕೌರಿಯಾ ಕಥಿ ಹಬ್ಬವನ್ನು ಆಚರಿಸುತ್ತಾರೆ. ಇದು ಪೂರ್ವಜರನ್ನು ಗೌರವಿಸುವ ಆಚರಣೆಯಾಗಿದೆ. ಸಮಾರಂಭದ ಭಾಗವಾಗಿ, ಅವರು ಬೆಂಕಿಯನ್ನು ಉತ್ಪಾದಿಸಲು ಸೆಣಬಿನ ಬೇರುಗಳನ್ನು ಸುಡುತ್ತಾರೆ. ಇದು ಪೂರ್ವಜರನ್ನು ಕರೆಯುವ ಸಂಕೇತವಾಗಿದೆ. ನಂತರ ಅವರು ತಮ್ಮ ಪೂರ್ವಜರ ಆಶೀರ್ವಾದಕ್ಕಾಗಿ ಪ್ರಾರ್ಥಿಸುತ್ತಾರೆ.
- ಮಹಾರಾಷ್ಟ್ರದಲ್ಲಿ ಯಮ ದೇವರಿಗೆ ದೀಪಗಳನ್ನು ಬೆಳಗಿಸುವುದು
ದೀಪಾವಳಿಯ ಮೊದಲ ದಿನ ಧನ್ತೇರಸ್. ಇದರ ಇನ್ನೊಂದು ಹೆಸರು ಧನತ್ರಯೋದಶಿ. ಸಾಮಾನ್ಯವಾಗಿ, ಈ ದಿನ, ಜನರು ಲಕ್ಷ್ಮಿ ಮತ್ತು ಗಣೇಶನನ್ನು ಪೂಜಿಸುತ್ತಾರೆ ಮತ್ತು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುತ್ತಾರೆ. ಆದರೆ ಮಹಾರಾಷ್ಟ್ರದಲ್ಲಿ, ಮಹಿಳೆಯರು ಕುಟುಂಬದ ಪ್ರತಿಯೊಬ್ಬ ಪುರುಷ ಸದಸ್ಯರ ಹೆಸರಿನಲ್ಲಿ ದೀಪಗಳನ್ನು ಬೆಳಗಿ ಅವರಿಗೆ ದೀರ್ಘಯುಷ್ಯ ಮತ್ತು ಸಮೃದ್ಧ ಜೀವನವನ್ನು ಕರುಣಿಸುವಂತೆ ಪ್ರಾರ್ಥನೆ ಮಾಡುತ್ತಾರೆ. ಜೊತೆಗೆ ಯಮನಿಗೆ ಗೌರವವನ್ನು ಸೂಚಿಸುವ ಸಲುವಾಗಿ ಈ ದಿನ ಅವರು ಹಿಟ್ಟಿನ ದೀಪವನ್ನು ಬೆಳಗಿಸುತ್ತಾರೆ.
- ಗೋವಾದಲ್ಲಿ ನರಕಾಸುರನ ಪ್ರತಿಕೃತಿ ದಹನ
ಗೋವಾದಲ್ಲಿ ಜನರು ದೀಪಾವಳಿಯ ಸಮಯದಲ್ಲಿ ನರಕಾಸುರ ಚತುರ್ದಶಿಯನ್ನು ಆಚರಿಸುತ್ತಾರೆ. ನರಕಾಸುರನು ಗೋವಾವನ್ನು ಆಳುತ್ತಿದ್ದನು ಎಂದು ಪುರಾಣಗಳು ಹೇಳುತ್ತವೆ. ಇಲ್ಲಿನ ಸ್ಥಳೀಯರು ಎಸೆದ ಕಾಗದ, ಹುಲ್ಲು ಇತ್ಯಾದಿಗಳನ್ನು ಬಳಸಿ ನರಕಾಸುರನ ಪ್ರತಿಮೆಗಳನ್ನು ತಯಾರಿಸಿ, ಅದರಲ್ಲಿ ಪಟಾಕಿಗಳನ್ನು ತುಂಬುತ್ತಾರೆ. ಗೋವಾದ ಬೀದಿಗಳಲ್ಲಿ ಪ್ರತಿಕೃತಿಗಳನ್ನು ಮೆರವಣಿಗೆ ಮಾಡಿದ ನಂತರ, ಅವರು ದೀಪಾವಳಿಯ ಹಿಂದಿನ ದಿನದಂದು ಅವುಗಳನ್ನು ಸುಡುತ್ತಾರೆ. ಇದು ಕತ್ತಲೆ ಮತ್ತು ದುಷ್ಟ ಯುಗದ ಅಂತ್ಯವನ್ನು ಸೂಚಿಸುತ್ತದೆ.
- ಕರ್ನಾಟಕದಲ್ಲಿ ಭತ್ತದ ಗದ್ದೆಗಳ ಸುತ್ತಲೂ ಆಹಾರವನ್ನು ನೀಡುವುದು
ನರಕಾಸುರನನ್ನು ಕೊಂದ ನಂತರ ಕೃಷ್ಣನು ತನ್ನ ದೇಹದ ರಕ್ತದ ಕಲೆಗಳನ್ನು ಶುದ್ಧೀಕರಿಸಲು ಎಣ್ಣೆ ಸ್ನಾನ ಮಾಡಿದನೆಂದು ಹೇಳಲಾಗುತ್ತದೆ. ಭಕ್ತರು ತಮ್ಮ ಪಾಪಗಳನ್ನು ತೊಡೆದುಹಾಕಲು ತಮ್ಮ ದೇಹಕ್ಕೆ ತೆಂಗಿನ ಎಣ್ಣೆಯನ್ನು ಹಚ್ಚಿ, ಸ್ನಾನವನ್ನು ಮಾಡುತ್ತಾರೆ. ಕರಾವಳಿ ಕರ್ನಾಟಕದಲ್ಲಿ, ದೀಪಾವಳಿಯು ‘ರಾಜ ಬಲಿ’ಯನ್ನು ಗೌರವಿಸುವ ಸಂದರ್ಭವಾಗಿದೆ. ಈ ಆಚರಣೆಯ ಸಮಯದಲ್ಲಿ ಅವರು ತಮ್ಮ ಗದ್ದೆಗಳ ಸುತ್ತಲೂ ಆಹಾರವನ್ನು ಇಡುವ ಸಂಪ್ರದಾಯವಿದೆ.