ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹಿರಿಯ ನಾಯಕ ಹಾಗೂ ಇಂಧನ ಮಂತ್ರಿ ಕೆಜೆ ಜಾರ್ಜ್ ರಾಜೀನಾಮೆ ಕೊಡಲು ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡಿ ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿತ್ತು.
ಸಚಿವ ಕೆಜೆ ಜಾರ್ಜ್ ರಾಜೀನಾಮೆ ವದಂತಿ ಹರಿದಾಡಿದ ಕೂಡಲೇ ಸ್ವತಃ ಸಚಿವ ಕೆಜೆ ಜಾರ್ಜ್ ಅವರೇ ಸುದ್ದಿ ನಿರಾಕರಿಸಿ ಸ್ಪಷ್ಟನೆ ನೀಡಿದರು.
ರಾಜ್ಯ ಸರ್ಕಾರದ ಪ್ರಭಾವಿ ಸಚಿವರಾಗಿರುವ ಜಾರ್ಜ್ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.ಹೀಗಿದ್ದರೂ ಅವರು ಸಿಎಂ ಕಚೇರಿಯ ನಡೆಯಿಂದ ಅಸಮಾಧಾನಗೊಂಡಿದ್ದಾರೆ ಹೀಗಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿಗಳು ಹರಿದಾಡತೊಡಗಿದವು.
ಇದು ವಿಧಾನಸಭೆ ಕಲಾಪದಲ್ಲೂ ಚರ್ಚೆಗೆ ಗ್ರಾಸವಾಯಿತು.ಸದನದಲ್ಲಿ ಜಾರ್ಜ್ ಅವರು ಕುಳಿತಿರುವಾಗಲೇ ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಈ ವಿಚಾರ ಪ್ರಸ್ತಾಪ ಮಾಡಿದರು.
ಕೆಲವು ಮಾಧ್ಯಮಗಳಲ್ಲಿ ಇಂಧನ ಮಂತ್ರಿ ಕೆಜೆ ಜಾರ್ಜ್ ಅವರು ರಾಜೀನಾಮೆ ಕೊಡಲು ಮುಂದಾಗಿದ್ದಾರೆ, ಎಂಬ ಸುದ್ದಿಗಳು ಪ್ರಕಟವಾಗಿವೆ ಇದು ನಿಜವೇ? ಎಂದು ಪ್ರಶ್ನಿಸಿದರು.
ಸದನದಲ್ಲಿಯೇ ಇದನ್ನು ನಿರಾಕರಿಸಿದ ಜಾರ್ಜ್
ತಾವು ಸುದೀರ್ಘ ಕಾಲ ರಾಜಕೀಯದಲ್ಲಿದ್ದು, ಈ ಕ್ಷಣದವರೆಗೂ ವಿಧಾನಸಭೆಯಲ್ಲಿ ಕಲಾಪದಲ್ಲಿ ಭಾಗವಹಿಸಿದ್ದೇನೆ. ಪ್ರಶ್ನೋತ್ತರದಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ರಾಜೀನಾಮೆ ಕುರಿತು ಅನಗತ್ಯ ವದಂತಿಗಳು ಹಬ್ಬಿವೆ. ಅದೆಲ್ಲ ಸತ್ಯಕ್ಕೆ ದೂರವಾದ ವಿಚಾರಗಳು ಎಂದರು.
ಅನಗತ್ಯವಾಗಿ ಇಂಥ ವದಂತಿಗಳನ್ನು ಹರಡುತ್ತಿದ್ದಾರೆ. ಇದು ಸರಿಯಲ್ಲ. ನಾನು ರಾಜೀನಾಮೆ ನೀಡಿಲ್ಲ ಮುಖ್ಯಮಂತ್ರಿಯವರ ನಾಯಕತ್ವದಲ್ಲಿ ವಿಶ್ವಾಸವಿದ್ದು, ಅವರಿಗೆ ಬೆಂಬಲವಾಗಿದ್ದೇನೆ ಎಂದರು.
ಹಾಗಿದ್ದರೂ ರಾಜೀನಾಮೆ ಸುದ್ದಿಯ ಸುತ್ತ ಸಾಕಷ್ಟು ವಿಚಾರಗಳು ಹರಿದಾಡತೊಡಗಿವೆ.ಕೆಲವು ಮೂಲಗಳ ಪ್ರಕಾರ, ಹಿರಿಯ ಐಎಎಸ್ ಅಧಿಕಾರಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕಚೇರಿಯ ನಡೆಯ ಬಗ್ಗೆ ಜಾರ್ಜ್ ಅಸಮಾಧಾನಗೊಂಡಿದ್ದಾರೆ ಎಂಬ ಮಾಹಿತಿ ಇದೆ.
ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಸಿಎಂ ಸಿದ್ದರಾಮಯ್ಯ ಕರೆದಿದ್ದ ಎರಡು ಬಾರಿ ಸಭೆಗೆ ಗೈರಾಗಿದ್ದರು. ಹಾಗಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಈ ಹಿರಿಯ ಐಎಎಸ್ ಅಧಿಕಾರಿಗೆ ನೋಟಿಸ್ ನೀಡಿದ್ದರು. ಆದರೆ ಸಿಎಂ ಕಚೇರಿಯ ಸೂಚನೆಯ ಮೇರೆಗೆ ನೋಟಿಸ್ ಜಾರಿಗೊಳಿಸಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು ಇದು ಜಾರ್ಜ್ ಅಸಮಾಧಾನಕ್ಕೆ ಕಾರಣವಾಗಿತ್ತು
ನನ್ನ ಗಮನಕ್ಕೆ ತರದೆ ನೋಟಿಸ್ ಕೊಟ್ಟಿದ್ದಕ್ಕೆ ಜಾರ್ಜ್ ಅಸಮಾಧಾನ ತೋಡಿಕೊಂಡಿದ್ದರು ಎಂಬ ಮಾಹಿತಿ ಇದೆ.
ಬಳಿಕ ಸಿಎಂ ಅವರ ಕಾನೂನು ಸಲಹೆಗಾರ ಎಎಸ್ ಪೊನ್ನಣ್ಣ ಅವರು ಜಾರ್ಜ್ ಜೊತೆಗೆ ಮಾತುಕತೆ ನಡೆಸಿ ಸಮಾಧಾನ ಪಡಿಸಿದ್ದರು ಎಂದು ಹೇಳಲಾಗಿದೆ
ಇದಾದ ಬಳಿಕ ಸಿಎಂ ಸಿದ್ದರಾಮಯ್ಯ ಕೂಡಾ ಮಾತುಕತೆ ನಡೆಸಿ ಗೊಂದಲ ಬಗೆಹರಿಸಿದ್ದರು.
ಆದರೆ ಇದು ಇದೀಗ ‘ಜಾರ್ಜ್ ರಾಜೀನಾಮೆಗೆ” ಮುಂದಾಗಿದ್ದಾರೆ ಎಂಬ ಅರ್ಥದಲ್ಲಿ ಸದ್ದು ಮಾಡಿತು.
ಇನ್ನು ಕೆಜೆ ಜಾರ್ಜ್ ರಾಜೀನಾಮೆ ವದಂತಿ ವಿಚಾರವಾಗಿ ಸ್ವತಃ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಕೆಜೆ ಜಾರ್ಜ್ ರಾಜೀನಾಮೆ ಕೊಟ್ಟಿಲ್ಲ.ಅದು ಸುಳ್ಳು ಆರೋಪ. ಈಗಾಗಲೇ ಜಾರ್ಜ್ ಅವರು ಸದನದಲ್ಲೇ ಮಾತಾಡಿದ್ದಾರೆ ಎಂದ ಅವರು, ಜಾರ್ಜ್ ರಾಜೀನಾಮೆ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
Previous Articleಗುತ್ತಿಗೆದಾರರಿಗೆ ಬೈರತಿ ಸುರೇಶ್ ತಿರುಗೇಟು
Next Article ಗಾಂಧೀಜಿಯ ರಾಮ: ಧರ್ಮದ ಗಡಿ ಮೀರಿದ ನೈತಿಕ ಸತ್ಯದ ಸಂಕೇತ!

