ಬೆಂಗಳೂರು,
ಹೊಸವರ್ಷವನ್ನು ಸ್ವಾಗತಿಸುವ ಸಂಭ್ರಮಾಚರಣೆ ವೇಳೆ ಮದ್ಯದ ಅಮಲಿನಲ್ಲಿದ್ದ ಯುವಕರು ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧ ಮುಂಭಾಗದಲ್ಲೇ ಅನುಚಿತವಾಗಿ ವರ್ತಿಸಿದ್ದಾರೆ.ಇಲ್ಲಿ ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ.ಅಷ್ಟೇ ಅಲ್ಲ ಯುವತಿಯರ ರಕ್ಷಣೆಗೆ ಬಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.ಪ್ರಕರಣದ ಸಂಬಂಧ ಅನ್ಶ್ ಮೆಹ್ತಾ ಹಾಗೂ ಪರ್ವ್ ರಾಠಿ ಎಂಬ ಇಬ್ಬರು ಯುವಕರನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.ಜನವರಿ 1ರ ಮುಂಜಾನೆ ಸುಮಾರು 1.40ರ ಸುಮಾರಿಗೆ ಈ ಘಟನೆ ನಡೆದಿದೆ.ಹೊಸ ವರ್ಷ ಸ್ವಾಗತಾಚರಣೆ ಹೆಸರಲ್ಲಿ ಕಂಠ ಪೂರ್ತಿ ಕುಡಿದ ಯುವಕರು, ರಸ್ತೆ ಪಕ್ಕ ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಯರ ಬಳಿ ಅವಹೇಳನಕಾರಿಯಾಗಿ ವರ್ತನೆ ತೋರಿದ್ದಾರೆ. ಇದರಿಂದ ಆತಂಕಗೊಂಡ ಯುವತಿಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೊಲೀಸ್ ಕಾನ್ಸ್‌ಟೇಬಲ್ ರವಿ ಸ್ಥಳಕ್ಕೆ ಧಾವಿಸಿ ಯುವಕರನ್ನು ಪ್ರಶ್ನಿಸಿದ್ದರು. ಈ ಯುವಕರು ಪೊಲೀಸರೊಂದಿಗೆ ಕಿರಿಕ್ ನಡೆಸಿ, ಅವರನ್ನು ತಳ್ಳಾಡಿ, ರಿಫ್ಲೆಕ್ಟರ್ ಜಾಕೆಟ್ ಹರಿದು ಪುಂಡಾಟ ನಡೆಸಿದ್ದಾರೆ. ಅಲ್ಲದೆ ಪೊಲೀಸರ ಮೇಲೆ ಹಲ್ಲೆಗೂ ಮುಂದಾದಿದ್ದಾರೆ ಎಂದು ತಿಳಿದುಬಂದಿದೆ.ಪರಿಸ್ಥಿತಿಯನ್ನು ನಿಯಂತ್ರಿಸಿದ ಪೊಲೀಸರು, ಇಬ್ಬರು ಆರೋಪಿಗಳಾದ ಅನ್ಶ್ ಮೆಹ್ತಾ ಹಾಗೂ ಪರ್ವ್ ರಾಠಿಯನ್ನು ಬಂಧಿಸಿ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ಮುಂದುವರಿದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ಮತ್ತು ಕರ್ತವ್ಯದಲ್ಲಿರುವ ಪೊಲೀಸರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
