ಬೆಂಗಳೂರು,
ಚಿರತೆ ಹುಲಿ ಸೇರಿದಂತೆ ಇತರೆ ವನ್ಯಮೃಗಗಳ ದಾಳಿ ಭೀತಿಯಿಂದ ಬಂಡಿಪುರ ಮತ್ತು ನಾಗರಹೊಳೆ ಅಭಯಾರಣ್ಯದಲ್ಲಿ ಸ್ಥಗಿತಗೊಳಿಸಿರುವ ಸಫಾರಿಯನ್ನು ಹಂತ ಹಂತವಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರ ಸಿದ್ಧತೆ ಆರಂಭಿಸಿದೆ.
ಸಫಾರಿ ಸ್ಥಗಿತದಿಂದ ಆ ಪ್ರದೇಶದಲ್ಲಿ ಪ್ರವಾಸೋದ್ಯಮ ಮತ್ತು ವಾಣಿಜ್ಯ ಚಟುವಟಿಕೆಗಳು ಕುಂಠಿತಗೊಂಡಿದೆ ಇದನ್ನೇ ಅವಲಂಬಿಸಿದ್ದ ಹಲವಾರು ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತಮ್ಮ ನಿಲುವಿನಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದೆ.
ಸಫಾರಿ ಪುನರಾರಂಭಕ್ಕೂ ಮುನ್ನ ಸಫಾರಿ ವಾಹನಗಳ ಕಿರಿಕಿರಿಯಿಂದ ವನ್ಯಜೀವಿಗಳು ಕಾಡಿನಿಂದ ನಾಡಿಗೆ ಬರುತ್ತಿವೆಯೇ, ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿ ವಾಹನಗಳ ಧಾರಣಾ ಸಾಮರ್ಥ್ಯವೆಷ್ಟು ಎಂಬ ಬಗ್ಗೆ ಅಧ್ಯಯನ ಮಾಡಲು ತಜ್ಞರ ಸಮಿತಿ ರಚಿಸಲು ನಿರ್ಧರಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕರ್ನಾಟಕ ವನ್ಯಜೀವಿ ಮಂಡಳಿಯ 20ನೇ ಸಭೆಯಲ್ಲಿ ಈ ಕುರಿತಂತೆ ಸುದೀರ್ಘ ಚರ್ಚೆ ನಡೆದಿದ್ದು ಅಂತಿಮವಾಗಿ ತಜ್ಞರ ಸಮಿತಿ ರಚನೆಗೆ ತೀರ್ಮಾನಿಸಲಾಗಿದೆ.
ಸಫಾರಿ ವಾಹನದ ಕಿರಿಕಿರಿಯಿಂದ, ವಾಹನಗಳ ಬೆಳಕಿನಿಂದ ವನ್ಯಜೀವಿಗಳು ಹೊರಬರುತ್ತವೆ ಎಂಬುದು ಸ್ಥಳೀಯರು ಮತ್ತು ರೈತರ ಆರೋಪವಾಗಿದೆ. ಈ ಬಗ್ಗೆ ಅಧ್ಯಯನ ನಡೆಸುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಸಭೆಯಲ್ಲಿ ಮಾತನಾಡಿದ ಅರಣ್ಯ ಮಂತ್ರಿ ಈಶ್ವರ ಖಂಡ್ರೆ,1972ರಲ್ಲಿ ಬಂಡೀಪುರದಲ್ಲಿ ಕೇವಲ 12 ಹುಲಿ ಇತ್ತು. ಇಂದು ಸುಮಾರು 175-200 ಹುಲಿಗಳಿವೆ. ಒಂದು ಹುಲಿ ಸ್ವಚ್ಛಂದವಾಗಿ ಜೀವಿಸಲು 10 ಚದರ ಕಿಲೋ ಮೀಟರ್ ಪ್ರದೇಶ ಬೇಕು ಎಂದು ತಜ್ಞರು ಹೇಳುತ್ತಾರೆ. ಆದರೆ 900 ಚದರ ಕಿಲೋ ಮೀಟರ್ ಕಾಡಿನಲ್ಲಿ 2 ಪಟ್ಟು ಹುಲಿಗಳಿವೆ ಇದು ಸಹ ಹುಲಿಗಳು ಕಾಡಿನಿಂದ ನಾಡಿನತ್ತ ಬರಲು ಕಾರಣವಾಗಿದೆ ಎಂದು ತಿಳಿಸಿದರು.
ವನ ಮತ್ತು ವನ್ಯಜೀವಿ ವಿಭಾಗದ ರಾಯಭಾರಿ ಅನಿಲ್ ಕುಂಬ್ಳೆ ಮಾತನಾಡಿ ವನ್ಯಜೀವಿಗಳು ಕಾಡಿನಿಂದ ಹೊರಗೆ ಬರುವುದಕ್ಕೂ ಸಫಾರಿಗೂ ಸಂಬಂಧವಿಲ್ಲ, ಸಫಾರಿಗೆ ಕೇವಲ ಶೇ.8ರಷ್ಟು ಅರಣ್ಯ ಪ್ರದೇಶವೂ ಬಳಕೆ ಆಗುವುದಿಲ್ಲ, ಸ್ಥಳೀಯರ ಜೀವನೋಪಾಯವೂ ಇದರಲ್ಲಿ ಅಡಗಿದೆ. ಹೀಗಾಗಿ ಪುನರ್ ಪರಿಶೀಲಿಸಬೇಕು ಎಂದು ಸಲಹೆ ಮಾಡಿದರು.
ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ಸಫಾರಿ ಸ್ಥಗಿತಗೊಳಿಸಿರುವುದರಿಂದ ಸ್ಥಳೀಯರ ಜೀವನೋಪಾಯಕ್ಕೂ ತೊಂದರೆ ಆಗಿದೆ, ಪ್ರವಾಸೋದ್ಯಮಕ್ಕೂ ಪೆಟ್ಟು ಬಿದ್ದಿದೆ ಎಂದು ತಿಳಿಸಿದರು.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ. ರೇ ಹಂತಹಂತವಾಗಿ ಸಫಾರಿ ಆರಂಭಿಸುವುದು ಸೂಕ್ತ ಎಂದು ತಿಳಿಸಿದರು. ಸಭೆಯಲ್ಲಿ ಇದೇ ಅಭಿಪ್ರಾಯ ವ್ಯಕ್ತವಾಯಿತು. ಎಲ್ಲರ ಅಭಿಪ್ರಾಯ ಆಲಿಸಿದ ಮುಖ್ಯಮಂತ್ರಿಗಳು ಹಂತ ಹಂತವಾಗಿ ಸಫಾರಿ ಆರಂಭಿಸಲು ಮತ್ತು ಧಾರಣಾ ಶಕ್ತಿ ಮತ್ತು ಹುಲಿಗಳು ನಾಡಿಗೆ ಬರುವುದು ಏಕೆ ಎಂಬ ಬಗ್ಗೆ ಅಧ್ಯಯನ ಮಾಡಿ ವರದಿ ಸಲ್ಲಿಸಲು ತಜ್ಞರ ಸಮಿತಿಯನ್ನು ರಚಿಸುವಂತೆ ಸೂಚಿಸಿದರು.
Previous Articleಅಮಲಿನಲ್ಲಿ ಆಗಿದ್ದಕ್ಕೆ ಅಂದರ್!
Next Article ಐಪಿಎಲ್‌ಗೂ ತಟ್ಟಿದ ಬಾಂಗ್ಲಾ ಸಂಘರ್ಷದ ಕಿಚ್ಚು
