ಬೆಂಗಳೂರು,
ಕಚೇರಿಯಲ್ಲಿ ಸಮವಸ್ತ್ರದಲ್ಲಿರುವಾಗಲೇ ಮಹಿಳೆಯೊಬ್ಬರ ಜೊತೆ ಸರಸ ಸಲ್ಲಾಪದಲ್ಲಿ ತೊಡಗಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬೆನ್ನಲ್ಲೇ ಹಿರಿಯ ಪೊಲೀಸ್ ಅಧಿಕಾರಿ ಹಾಗೂ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಕೆ.ರಾಮಚಂದ್ರ ರಾವ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಕಚೇರಿಯಲ್ಲಿ ಸಮವಸ್ತ್ರದಲ್ಲಿರುವಾಗಲೇ ರಾಮಚಂದ್ರ ರಾವ್ ಅವರು ಮಹಿಳೆಯೊಬ್ಬರ ಜೊತೆ ಸರಸ ಸಲ್ಲಾಪದಲ್ಲಿ ತೊಡಗಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಸರ್ಕಾರಕ್ಕೆ ಭಾರಿ ಮುಜುಗರ ಉಂಟು ಮಾಡಿತ್ತು.
ವಿದ್ಯಮಾನಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.ಸಿಟ್ಟಿಗೆದ್ದ ಅವರು ರಾವ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸ್ಪಷ್ಟ ಸೂಚನೆ ನೀಡಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಮಂತ್ರಿ ಡಾ.ಜಿ. ಪರಮೇಶ್ವರ್ ಇಂತಹ ಘಟನೆಗಳು ಯಾರಿಗೂ ಗೌರವ ತರೋದಿಲ್ಲ. ಹಾಗಾಗಿ ಎಷ್ಟೇ ದೊಡ್ಡವರಿದ್ದರೂ ಮುಲಾಜಿಲ್ಲದೇ ಕ್ರಮ ಜರುಗಿಸಲಾಗಿದೆ ಎಂದು ಹೇಳಿದರು.
ಸಿಎಂಗೆ ವಿಷಯ ತಿಳಿಸುತ್ತಿದ್ದಂತೆ ತಕ್ಷಣ ಅವರನ್ನ ಅಮಾನತು ಮಾಡಿ ತನಿಖೆ ಮಾಡಲು ಹೇಳಿದರು. ಆದರೆ ರಾಮಚಂದ್ರ ರಾವ್ ಈ ಘಟನೆ ಸುಳ್ಳು ಎಂದು ಹೇಳಿದ್ದಾರೆ. ಹೀಗಾಗಿ ಅದನ್ನ ಪರಿಶೀಲಿಸಲಾಗುವುದು ಆದರೆ,ಇಂತಹ ಘಟನೆಗಳು ಯಾರಿಗೂ ಗೌರವ ತರೋದಿಲ್ಲ ಎಂದು ಹೇಳಿ ಈಗ ಸೇವೆಯಿಂದ ಅಮಾನತು ಮಾಡಲಾಗಿದೆ ಮುಂದೆ ತನಿಖೆ ಆಗುತ್ತದೆ. ಅದರ ಬೇರೆ ಬೇರೆ ಆಯಾಮಗಳು ಏನಿದೆ ಅದರ ಮೇಲೆ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ತಕ್ಷಣಕ್ಕೆ ಕ್ರಮ ತಗೊಂಡಿದ್ದೇವೆ, ತನಿಖೆ ಆದ ಮೇಲೆ ಏನು ಬೇಕಾದರೂ ಆಗಬಹುದು. ಅವರು ಸೇವೆಯಿಂದ ಡಿಸ್‌ಮಿಸ್ ಕೂಡ ಆಗಬಹುದು. ತಕ್ಷಣಕ್ಕೆ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಅಮಾನತು ಮಾಡಿದ್ದೇವೆ. ಯಾವುದೇ ಮುಲಾಜಿ ಇಲ್ಲದೇ ಸೀನಿಯರ್ ಆಫೀಸರ್ ಅನ್ನೋದನ್ನೂ ನೋಡದೆ ಕ್ರಮ ತೆಗೆದುಕೊಂಡಿದ್ದೇವೆ. ತನಿಖೆಯಲ್ಲಿ ಏನು ಬರುತ್ತೆ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

