
ನೀವೂ ನೋಡಿರಬಹುದು ಅನೇಕ ಸುಶಿಕ್ಷಿತ ಪೋಷಕರ ಮನೆಗಳಲ್ಲಿ ಮಕ್ಕಳೊಂದಿಗೆ ಇಂಗ್ಲಿಷ್ನಲ್ಲಿ ಮಾತನಾಡುತ್ತಾರೆ. ಆ ಇಂಗ್ಲಿಷ್ ಉತ್ತಮ ಗುಣಮಟ್ಟದ್ದೋ ಇಲ್ಲವೋ ಗೊತ್ತಿಲ್ಲ ಆದರೆ ಬಹುತೇಕ ಸಂವಹನ ಇಂಗ್ಲಿಷ್ ಭಾಷೆಯಲ್ಲಿಯೇ ಇರುತ್ತದೆ. ತಂದೆ ತಾಯಿ ಬೇರೆ ಬೇರೆ ಭಾಷೆಯವರಾಗಿದ್ದರೆ ಬೆಸೆಯುವ ಭಾಷೆ ಇಂಗ್ಲಿಷ್ ಎಂಬ ಭ್ರಮೆ ಒಂದಿತ್ತು, ಆದರೆ ಈಗೀಗ ತಂದೆ ತಾಯಿ ಒಂದೇ ಭಾಷೆ ಮಾತನಾಡುವವರಾಗಿದ್ದು ಅದೊಂದು ಅಪ್ಪಟ ಸಾಂಪ್ರದಾಯಿಕ ಮನೆಯಾಗಿದ್ದರೂ ಆ ಮನೆಯಲ್ಲಿ ಮಕ್ಕಳೊಂದಿಗೆ ಇಂಗ್ಲಿಷ್ನಲ್ಲಿಯೇ ಮಾತನಾಡುತ್ತಾರೆ. ಅದೂ, ವಿಪರ್ಯಾಸವೇನೆಂದರೆ ಆ ಮನೆಗಳಲ್ಲಿ ಅಜ್ಜ ಅಜ್ಜಿ ಮುಂತಾದವರು ಇಂಗ್ಲಿಷ್ ಗೊತ್ತಿಲ್ಲದಿದ್ದರೂ ಕಷ್ಟಪಟ್ಟು ಇಂಗ್ಲಿಷ್ ಭಾಷೆಯಲ್ಲಿಯೇ ಮಕ್ಕಳೊಂದಿಗೆ ಮಾತನಾಡುತ್ತಾರೆ, ಮತ್ತು ಕೆಲವೊಮ್ಮೆ ಅವರೂ ಹೇಳುತ್ತಾರೆ ‘ಮಕ್ಕಳೊಂದಿಗೆ ಇಂಗ್ಲಿಷ್ ಮಾತನಾಡುತ್ತಾ ನಮ್ಮ ಇಂಗ್ಲಿಷ್ ಕೂಡ ಸ್ವಲ್ಪ ಉತ್ತಮವಾಗಲಿ’ ಎಂದು.
ಮಗುವಿನ ಮಾತೃ ಭಾಷೆ ಯಾವುದು ಎನ್ನುವುದರ ಬಾಗೆ ಬಹಳಷ್ಟು ಜಿಜ್ಞಾಸೆ ಇದೆ. ತಾಯಿ ಮಾತಾಡುವ ಭಾಷೆ ಮಾತೃ ಭಾಷೆಯೇ ಇಲ್ಲ ಮನೆಯಲ್ಲಿ ಮಾತಾಡುವ ಭಾಷೆ ಮಾತೃ ಭಾಷೆಯೇ ಇಲ್ಲ ಮೂಲಭೂತ ಭಾವನೆಗಳು ವ್ಯಕ್ತವಾಗುವ, ಅನುಭೂತಿಗೆ ಅನುವು ಮಾಡಿಕೊಡುವ ಭಾಷೆ ಮಾತೃಭಾಷೆಯೇ ಎಂಬೆಲ್ಲಾ ಚರ್ಚೆಗಳು. ಆದರೆ ಈಗ ಮನೆಯಲ್ಲಿ ಹೆಚ್ಚಾಗಿ ಮಾತನಾಡಲ್ಪಡುವ ಭಾಷೆ ಮಾತೃಭಾಷೆ ಎಂದು ಅನೇಕರು ನಿರ್ಧರಿಸಿದ್ದಾರೆ. ಒಂದೆರಡು ಪೀಳಿಗೆಯವರು ಇಂಗ್ಲಿಷ್ ಮಾತಾಡಿದ ಮನೆಗಳಲ್ಲಿ ತಂದೆ ತಾಯಿ ಬೇರೆ ಬೇರೆ ಭಾಷಿಕರಾಗಿದ್ದಲ್ಲಿ ಸಂಕೋಚವಿಲ್ಲದೆ ಮಕ್ಕಳ ಮಾತೃ ಭಾಷೆ ಇಂಗ್ಲಿಷ್ ಎಂದು ಅರ್ಜಿಗಳಲ್ಲಿ ನಮೂದಿಸುವ ಮಟ್ಟಕ್ಕೂ ಅನೇಕ ಪೋಷಕರು ಹೋಗುತ್ತಿದ್ದಾರೆ.
ಒಬ್ಬ ವ್ಯಕ್ತಿ ಹುಟ್ಟಿನದಿಂದ ಯಾವ ಭಾಷಾ ವಾತಾವರಣದಲ್ಲಿ ಬೆಳೆದಿರುತ್ತಾನೋ ಅದನ್ನು ಆತನ mother tongue ಅಥವಾ ಮಾತೃ ಭಾಷೆ ಎಂದು ಸಾಮಾನ್ಯವಾಗಿ ಕರೆಯುತ್ತಾರೆ. ಅದನ್ನು ತಾಯಿ ಭಾಷೆ ಎನ್ನುವುದಕ್ಕಿಂತ ಹೆಚ್ಚಾಗಿ ಬೇರೆ ಭಾಷೆಗಳಿಗೆ ತಳಹದಿಯಾಗಿಗುರುವುದರಿಂದ ಅದನ್ನು ಅರ್ಥಗಳ ಸೃಜಕ ಭಾಷೆ ಎಂದು ತಿಳಿಯಬಹುದು. ತನ್ನ ಮೂಲ ಭಾಷೆಯ ಮೂಲಕ ಒಬ್ಬ ವ್ಯಕ್ತಿ ಬೇರೆ ಭಾಷೆಗಳನ್ನು ತಿಳಿದುಕೊಳ್ಳುತ್ತಾನೆ ಮತ್ತು ಕಲಿಯುತ್ತಾನೆ. ಇನ್ನೊಂದು ಭಾಷೆಯ ಪದವನ್ನು ತನ್ನ ಭಾಷೆಯ ಪದಕ್ಕೆ ಹೋಲಿಸಿ ಅರ್ಥ ಮಾಡಿಕೊಳ್ಳುತ್ತಾನೆ, ಈ ಮೂಲಕ ಓರ್ವ ವ್ಯಕ್ತಿಯ ಮೂಲ ಭಾಷೆ ಆನಂತರ ಬೇರೆ ಆತ ಕಲಿಯುವ ಬೇರೆ ಬೇರೆ ಭಾಷೆಗಳ ಪೋಷಕ ಭಾಷೆಯಾಗುತ್ತದೆ ಆದ್ದರಿಂದ ಆ ಮೂಲ ಭಾಷೆ ಆತನ ತಾಯಿ ಭಾಷೆಯಾಗುತ್ತದೆ. ಆದರೆ ಈಗ ಅನೇಕ ಮನೆಗಳಲ್ಲಿ ಮಕ್ಕಳು ಬರಿ ಇಂಗ್ಲಿಷ್ನಲ್ಲಿ ವಿಷಯಗಳನ್ನು ಅರ್ಥೈಸಿಕೊಳ್ಳಲು ಆರಂಭಿಸುತ್ತವೆ. ಮನೆಯಲ್ಲಿ ಬೇರೆ ಭಾಷೆಯಿದ್ದರೂ ಒಂದು ರೀತಿಯ ಪರಕೀಯ ವಾತಾವರಣದಲ್ಲಿ ಅವರ ಭಾಷಾ ಕ್ಷಮತೆ ಮೂಡಲಾರಂಭಿಸುತ್ತದೆ. ಇಂಗ್ಲಿಷ್ ಉತ್ತಮ ಉಳಿದೆಲ್ಲಾ ಭಾಷೆಗಳು ಅಧಮ ಎನ್ನುವ ಮನಸ್ಥಿತಿ ನಿರ್ಮಾಣವಾಗುತ್ತದೆ. ಮನೆಯಲ್ಲಿ ಎಲ್ಲರೂ ಬೇರೊಂದು ಭಾಷೆಯಲ್ಲಿ ತಮ್ಮ ಸರಳ ಭಾವನೆಗಳನ್ನು ದಿನದ ಆಗುಹೋಗುಗಳನ್ನು ಅನುಭವಗಳನ್ನು ವ್ಯಕ್ತಪಡಿಸುತ್ತಿದ್ದರೆ ಇಂಗ್ಲಿಷ್ ಭಾಷೆ ಮಾತನಾಡುವ ಮಗು ಅದನ್ನೆಲ್ಲ ಇಂಗ್ಲಿಷ್ ಗೆ ತರ್ಜುಮೆ ಮಾಡಿಕೊಳ್ಳುತ್ತಾ ಭಾವನಾರಹಿತವಾಗಿ ಮಾತನಾಡುತ್ತದೆ. ಆದರೆ ಇದೆಲ್ಲದರ ಬಗ್ಗೆ ಆ ಪೋಷಕರಿಗೆ ತಕರಾರಿರುವುದಿಲ್ಲ. ಇಂಗ್ಲಿಷ್ನಲ್ಲಿ ಮಾತನಾಡಿದಾಗ ಇಂಗ್ಲಿಷ್ ಭಾಷಿಕರಲ್ಲ ಆ ಮನೆಯ ಇತರ ಸದಸ್ಯರೊಂದಿಗೆ ಭಾವನಾತ್ಮಕವಾದ ಸಂಬಂಧ ಮೂಡುವುದರಲ್ಲಿ ಕೊರತೆಯಿರುತ್ತದೆ.
ಅದಲ್ಲದೆ ಮುಖ್ಯವಾಗಿ ಅನೇಕ ಇಂಥಾ ಮಕ್ಕಳೊಂದಿಗೆ ಇಂಗ್ಲಿಷ್ ಮಾತಾಡುವ ಮನೆಗಳಲ್ಲಿ ಆ ಇಂಗ್ಲಿಷ್ ಬಹಳ ತಳಮಟ್ಟದ್ದಾಗಿರುತ್ತದೆ. ಆ ಇಂಗ್ಲಿಷ್ ಬರಿಯ ಸರಳ ವಾಕ್ಯಗಳು ಮತ್ತು ಬಹಳಷ್ಟು ಭಾರತೀಯ ಭಾಷೆಗಳಿಂದ ಪ್ರಭಾವಿತವಾಗಿದ್ದಾಗಿರುತ್ತದೆ. ಆ ರೀತಿಯ ಇಂಗ್ಲಿಷ್ ಮಾತಾಡುತ್ತಾ ಬೆಳೆದ ಮಕ್ಕಳು ಉತ್ತಮ ಮಟ್ಟದ ಇಂಗ್ಲಿಷ್ನಲ್ಲಿ ಸಂವಹನ ಮಾಡಲು ಸನ್ನದ್ಧರಾಗಿ ಬೆಳೆಯುತ್ತಾರೆ ಎಂಬ ಖಾತ್ರಿ ಇಲ್ಲ. ಇಂಗ್ಲಿಷ್ ಮೂಲದ ಕುಟುಂಬದಲ್ಲಿ ಮಗುವಿನ ವ್ಯಕ್ತಿತ್ವದ್ಮೂ ಮೂಲಭೂತ ಅಂಶಗಳೂ ಇಂಗ್ಲಿಷ್ ವಾತಾವರಣದಲ್ಲಿ ರೂಪ ಪಡೆಯುತ್ತವೆ ಮತ್ತು ಬೆಳೆಯುತ್ತವೆ ಆದರೆ ಭಾರತೀಯ ಭಾಷಿಕರ ಮನೆಗಳಲ್ಲಿ ಆಕಡೆ ಆ ಭಾಷೆಯೂ ಅಲ್ಲದೆ ಇಂಗ್ಲಿಷ್ನಲ್ಲೂ ಇಲ್ಲದೆ ಎನ್ನುವಂತೆ ಮಕ್ಕಳ ವ್ಯಕ್ತಿತ್ವ ಟೊಳ್ಳಾಗುವ ಸಾಧ್ಯತೆಯೇ ಹೆಚ್ಚು.
ನಮ್ಮ ಸುತ್ತಮುತ್ತಲಿನ ಪ್ರಪಂಚ ಒಂದು ಭಾಷೆಯೊಂದಿಗೆ ಬಹಳಷ್ಟು ತಳಕು ಹಾಕಿಕೊಂಡಿರುವಾಗ ಅದನ್ನು ದಿನನಿತ್ಯ ತರ್ಜುಮೆ ಮಾಡಿಕೊಂಡು ಅರ್ಥೈಸಿಕೊಳ್ಳುವುದು ಪ್ರಯಾಸದಾಯಕ ಮಾತ್ರವಲ್ಲದೆ ಮೂರ್ಖತನ ಕೂಡ. ಮಕ್ಕಳು ಇಂಗ್ಲಿಷ್ ಕಲಿಯಲೇಬೇಕು, ಅದು ಅವಶ್ಯಕವೂ ಹೌದು ಆದರೆ ಮನೆಯಲ್ಲಿ ತಂದೆ ತಾಯಿ ಅಜ್ಜ ಅಜ್ಜಿ ಚಿಕ್ಕಪ್ಪ ಚಿಕ್ಕಮ್ಮ ಅಣ್ಣ ತಂಗಿಯರೊಂದಿಗೆ ಮಾತನಾಡಿದರೆ ಮಾತ್ರ ಇಂಗ್ಲಿಷ್ ಮೇಲೆ ಹಿಡಿತ ಬರುತ್ತದೆ ಎನ್ನುವುದು ಭ್ರಮೆಯಷ್ಟೆ. ಆ ರೀತಿ ಕಲಿತ ಇಂಗ್ಲಿಷ್ ಮನೆ ಮಟ್ಟದ್ದಷ್ಟೇ ಆಗಿರುತ್ತದೆ ಅದು ಬೌದ್ಧಿಕ ಪೋಷಣೆಗೆ ಮತ್ತು ಬೆಳವಣಿಗೆಗೆ ಅವಶ್ಯಕವಾದ ಇಂಗ್ಲಿಷ್ ಆಗಿರುವುದಿಲ್ಲ.
‘ಬೆಳಗ್ಗಿನಿಂದ ರಾತ್ರಿವರೆಗೆ ಬಳಸುವ ಪದಗಳಲ್ಲಿ ಬಹುತೇಕ ಪದಗಳು ಇಂಗ್ಲಿಷ್ ನವೇ ಆಗಿರುತ್ತವೆ ಆದ್ದರಿಂದ ಇನ್ನು ಒಂದು ಹತ್ತಿಪ್ಪತ್ತು ಪರ್ಸೆಂಟ್ ಕನ್ನಡ ಅಥವ ಇತರ ಮಾತೃ ಭಾಷೆ ಬಳಸೋ ಬದಲು ಇಂಗ್ಲಿಷ್ನಲ್ಲೇ ಮಾತಾಡಬಹುದಲ್ಲ’ ಎಂಬ ವಾದ ಕೆಲವು ಪೋಷಕರದ್ದು. ವಸ್ತುಗಳು ಮತ್ತು ವಿಷಯಗಳು ಯಾವ ಭಾಷೆಯಲ್ಲಿವೆ ಎನ್ನುವುದು ಮುಖ್ಯವಲ್ಲ ಆದರೆ ಅದನ್ನು ಜೋಡಿಸುವ ಪದಗಳು ಯಾವ ಭಾಷೆಯಲ್ಲಿದೆ ಎನ್ನುವುದು ಮುಖ್ಯ. ಉದಾಹರಣೆಗೆ ‘ Roadಗೆ ಹೋಗಿ car ಒಳಗಿರೋ bag ತೆಕ್ಕೊಂಡು gate close ಮಾಡಿಕೊಂಡು door ಹಾಕ್ಕೊಂಡು ಬಾ’ ಎನ್ನುವುದರಲ್ಲಿ ಇರೋ ಪದಗಳ್ಳಲ್ಲಿ ಆ ವಿಷಯಗಳನ್ನು ವಸ್ತುಗಳನ್ನು ಜೋಡಿಸುವ ಪದಗಳು ಕನ್ನಡದಾಗಿರುವುದೇ ವಿಶೇಷ. ಇಲ್ಲಿ ಆರು ಇಂಗ್ಲಿಷ್ ಪದಗಳಿವೆ ಎಂದು ಇಡೀ ವಾಕ್ಯವನ್ನು ಇಂಗ್ಲಿಷ್ನಲ್ಲಿ ಹೇಳುವ ಅವಶ್ಯಕತೆ ಇಲ್ಲ ಮತ್ತು ಅದು ಆ ಮನೆಯ ಮತ್ತು ಆ ಪರಿಸರಕ್ಕೂ ಒಗ್ಗುವುದಿಲ್ಲ. ‘ಇಂಗ್ಲಿಷ್ ಭಾಷೆಯ ಪದಗಳನ್ನು ಭಾಷಾಂತರ ಮಾಡಿ ಕನ್ನಡ ಪದಗಳನ್ನು ಹುಡುಕಿ ಮಾತಾಡುವುದು ಪ್ರಯಾಸದಾಯಕ ಆದ್ದರಿಂದ ಇಂಗ್ಲಿಷ್ನಲ್ಲೇ ಮಾತಾಡಿದರಾಯಿತು’ ಎಂಬುದೂ ಒಂದು ವಾದ. ಆದರೆ ಎಲ್ಲಾ ಇಂಗ್ಲಿಷ್ ಪದಗಳಿಗೂ ಕನ್ನಡ ಪದಗಳನ್ನು ಹುಡುಕುವುದು ಭಂಡತನ. ಆ ರೀತಿ ಎಲ್ಲಾ ಇಂಗ್ಲಿಷ್ ಪದಗಳಿಗೆ ಕನ್ನಡ ಪದಗಳಿಲ್ಲ ಇರುವುದು ಸಾಧ್ಯವೂ ಇಲ್ಲ. ಇಂಗ್ಲಿಷ್ ನಲ್ಲಿ ಪದ ವೈವಿಧ್ಯತೆ ಇದ್ದರೆ ಕನ್ನಡದಲ್ಲಿ ಭಾವ ವೈವಿದ್ಯತೆ ಇದೆ. ಇಂಗ್ಲಿಷ್ ಮತ್ತು ಕನ್ನಡ ಬೇರೆ ಬೇರೆ ಭಾಷೆಗಳು ಅವುಗಳನ್ನು ಹೋಲಿಸುವುದು ಅಪ್ರಬುದ್ದತೆ. ಕನ್ನಡ ಭಾಷೆಯಲ್ಲಿರುವ ರಾಗ,ಭಾವ, ಒತ್ತು ಮತ್ತು ಸೂಕ್ಷ್ಮಗಳು ಇಂಗ್ಲಿಷ್ ನಲ್ಲಿ ಇಲ್ಲ. ಒಂದು ಭಾರತೀಯ ಭಾಷೆ ಅದು ಪರಿಸರಕ್ಕೆ ಒಗ್ಗಿದ ಭಾಷೆ.
ಮಕ್ಕಳು ಶಾಲೆಯಲ್ಲಿ ಕಲಿಯುವ ಇಂಗ್ಲಿಷ್ ಸಾಕು, ಬೇಕಿದ್ದರೆ ಅವರು ತಾವಾಗಿಯೇ ಇಂಗ್ಲಿಷ್ ಕಲಿತುಕೊಳ್ಳಲಿ. ಅದಕ್ಕೆ ವಿಪುಲ ಅವಕಾಶಗಳಿವೆ. ಸಿನೆಮಾ, ಟಿವಿ ಇಂಟರ್ನೆಟ್, ಗೇಮ್ಸ್ ಎಲ್ಲವೂ ಇಂಗ್ಲಿಷ್ ಮಯ ಮತ್ತು ಅಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಇಂಗ್ಲಿಷ್ ಅನ್ನೂ ಕಲಿಯ ಬಹುದು. ಅದು ಬಿಟ್ಟು ಮಾತೃ ಭಾಷೆಯನ್ನೂ ಕಲಿಯದೇ ಪರಿಸರಕ್ಕೂ ಒಗ್ಗದೆ, ಮನೆಯಲ್ಲಿ ಇಂಗ್ಲಿಷ್ ಗೊತ್ತಿಲ್ಲದವರು ಮಾತನಾಡುವ ತಪ್ಪು ತಪ್ಪು ಇಂಗ್ಲಿಷ್ ಕಲಿತು ಆಕಡೆ ತಮ್ಮ ಮನೆಗಳಲ್ಲೇ ಪರಕೀಯರಾಗಿ ಎಡಬಿಡಂಗಿಗಳಂತೆ ಮಕ್ಕಳು ಬೆಳೆಯುವುದು ಬಿಟ್ಟು ಮಣ್ಣಿನ ಮತ್ತು ಪರಿಸರದ ವಾಸನೆಯನ್ನು ಅಂಟಿಸಿಕೊಂಡು ನೆಲದ ಮಕ್ಕಳಾಗಿ ಸಹಜವಾಗಿ ಬೆಳೆದರೆ ಅವರು ಎಲ್ಲಾ ಕಡೆಯೂ ಸಲ್ಲುವಂತ ವ್ಯಕ್ತಿತ್ವ ಇರುವಂಥವರಾಗಿ ರೂಪುಗೊಳ್ಳುವುದರಲ್ಲಿ ಸಂಶಯವೇ ಇಲ್ಲ. ಪೋಷಕರು ಈ ನಿಟ್ಟಿನಲ್ಲಿ ಯೋಚಿಸುವುದು ಈ ಸಂದರ್ಭದಲ್ಲಂತೂ ಬಹಳ ಅವಶ್ಯವಿದೆ.

