ಬೆಂಗಳೂರು – ನಾನು ಎಲ್ಲಿಗೂ ಹೋಗುವುದಿಲ್ಲ,ಬಿಜೆಪಿಯಲ್ಲೇ ಇರುತ್ತೇನೆ.ಯಾರು ಎಲ್ಲಿಗೇ ಹೋಗಲಿ ನಾನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ನನಗೆ ಪಕ್ಷವು ಎಲ್ಲಾ ಸ್ಥಾನಮಾನ ನೀಡಿ ಗೌರವದಿಂದ ನಡೆಸಿಕೊಂಡಿದೆ, ಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಕ್ಷೇತ್ರದ ಜನತೆಯ ಋಣ ತೀರಿಸುವ ಕೆಲಸವಷ್ಟೇ ನನ್ನ ಮುಂದಿರುವ ಸವಾಲು. ಹೀಗೆಂದು ಒಂದೇ ಉಸಿರಿನಲ್ಲಿ ಬಡಬಡಿಸಿದ್ದು ಮಾಜಿ ಸಚಿವ ಗೋಪಾಲಯ್ಯ…
ಕಳೆದ ಹಲವು ದಿನಗಳಿಂದ ಕೇಳಿ ಬರುತ್ತಿರುವ ಸುದ್ದಿಗಳಂತೆ ಗೋಪಾಲಯ್ಯ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಲಿದ್ದಾರೆ.
ಈ ಸುದ್ದಿಗಳ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಗೋಪಾಲಯ್ಯ ನಾನು ಎಂದೂ ಕೂಡ ಬಿಜೆಪಿ ಬಿಟ್ಟು ಹೋಗುವ ಬಗ್ಗೆ ಯೋಚನೆಯನ್ನೇ ಮಾಡಿಲ್ಲ. ಕೆಲವು ಅನಿವಾರ್ಯ ಕಾರಣಗಳಿಂದ ಜೆಡಿಎಸ್ ಬಿಟ್ಟು, ಬಿಜೆಪಿಗೆ ಸೇರ್ಪಡೆಯಾದ ನಂತರ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಎಲ್ಲರ ವಿಶ್ವಾಸ ಗಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಎಂತಹ ಸಂದರ್ಭ ಬಂದರೂ ಬಿಜೆಪಿ ಬಿಡುವ ಬಗ್ಗೆ ನಾನು ಕನಸು ಮನಸಿನಲ್ಲೂ ಯೋಚನೆ ಮಾಡಿಲ್ಲ. ನನಗೆ ಸಚಿವ ಸ್ಥಾನ ನೀಡಿ ಕೇಳಿದ ಜಿಲ್ಲೆಯ ಉಸ್ತುವಾರಿಯನ್ನೇ ನೀಡಲಾಗಿತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ, ಮಾಜಿ ಸಚಿವರಾದ ಡಿ.ವಿ.ಸದಾನಂದಗೌಡ ಸೇರಿದಂತೆ ಪ್ರತಿಯೊಬ್ಬರೂ ನನ್ನನ್ನು ಗೌರವಾದರದಿಂದ ನೋಡಿಕೊಳ್ಳುತ್ತಾರೆ ಎಂದು ಹೇಳಿದರು ನಾನೂ ಕೂಡ ಅಷ್ಟೇ ವಿಶ್ವಾಸದಿಂದ ಬಿಜೆಪಿಯ ಪ್ರತಿಯೊಬ್ಬರನ್ನೂ ಗೌರವದಿಂದ ಕಾಣುತ್ತೇನೆ. ನನ್ನನ್ನು ಕಂಡರೆ ಆಗದ ಕೆಲವರು ಗೋಪಾಲಯ್ಯ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿಯನ್ನು ಹಬ್ಬಿಸುತ್ತಾರೆ. ಇದರ ಬಗ್ಗೆ ನಾನು ಮಾತನಾಡಿದಷ್ಟೂ ಗೊಂದಲಗಳು ಸೃಷ್ಟಿಯಾಗುತ್ತವೆ. ಎಲ್ಲದಕ್ಕೂ ಮೌನವೇ ನನ್ನ ಉತ್ತರ ಎಂದು ಹೇಳಿದರು.
ಮಹಾಲಕ್ಷ್ಮಿ ಲೇ ಔಟ್ ಕ್ಷೇತ್ರದ ಜನತೆ ನನ್ನನ್ನು ಮನೆಯ ಮಗನಂತೆ ಕಾಣುತ್ತಾರೆ. ಅವರ ವಿಶ್ವಾಸಕ್ಕೆ ಚ್ಯುತಿಯಾಗದಂತೆ ಜಾತಿ, ಧರ್ಮ, ಮೇಲು-ಕೀಳು ಯಾವುದನ್ನೂ ನೋಡದೇ ಪ್ರತಿಯೊಬ್ಬರಿಗೂ ಸರ್ಕಾರದ ಸವಲತ್ತುಗಳನ್ನು ಒದಗಿಸಿದ ತೃಪ್ತಿ ನನಗಿದೆ ಎಂದು ತಿಳಿಸಿದರು. ಕ್ಷೇತ್ರದಲ್ಲಿ ಹಿರಿಯ ನಾಗರಿಕರಿಗೆ ಉಚಿತವಾಗಿ ಆರೋಗ್ಯ ತಪಾಸಣೆ, ಶಸ್ತ್ರ ಚಿಕಿತ್ಸೆ, ಕನ್ನಡಕ ಒದಗಿಸುವುದು, ಹೃದಯ ಸಂಬಂ ಖಾಯಿಲೆಗಳಿಗೆ ಆರ್ಥಿಕ ನೆರವು, ಹಿರಿಯ ನಾಗರಿಕರಿಗೆ ಉಚಿತ ಔಷ ವಿತರಣೆ, ಶಾಲಾ ಮಕ್ಕಳಿಗೆ ನೋಟ್‍ಬುಕ್ ವಿತರಣೆ, ಬಿಪಿಎಲ್ ಪಡಿತರ ಚೀಟಿ ಒದಗಿಸುವುದು, ಡಿಪ್ಲಮೋ, ಐಟಿಐ ಸೇರಿದಂತೆ ವಿವಿಧ ಕೋರ್ಸುಗಳ ವ್ಯಾಸಂಗ ಮಾಡಿದವರಿಗೆ ಉದ್ಯೋಗ ಒದಗಿಸುವ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದರು.
ಕೆಲವು ಕಾರಣಗಳಿಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರಬಹುದು. ಕೇವಲ 5 ಗ್ಯಾರಂಟಿಗಳಿಗಾಗಿ ಜನತೆ ಮತ ಹಾಕಿಲ್ಲ. ಬೇರೆ ಬೇರೆ ಕಾರಣಗಳಿಗೆ ಗೆಲುವು ಕಾಂಗ್ರೆಸ್ ಪಡೆದುಕೊಂಡಿದೆ. ಆದರೆ 100 ದಿನ ಪೂರೈಸುವಷ್ಟರಲ್ಲೇ ಸರ್ಕಾರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಜನರು ಬಿಜೆಪಿಯೇ ಎಷ್ಟೋ ಮೇಲು ಎಂಬ ತೀರ್ಮಾನಕ್ಕೆ ಬರುತ್ತಿದ್ದಾರೆ ಎಂದು ತಿಳಿಸಿದರು ಕಾಂಗ್ರೆಸ್ ಜನರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಎಲ್ಲರಿಗೂ ಉಚಿತವಾಗಿ ಗ್ಯಾರಂಟಿ ಕೊಡುತ್ತೇವೆ ಎಂದು ಹೇಳಿದ್ದ ಸರ್ಕಾರ ನಂತರ ಷರತ್ತುಗಳನ್ನು ವಿಧಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬರಲಿರುವ ಲೋಕಸಭೆ ಚುನಾವಣೆಯಲ್ಲಿ ಕಳೆದ ಬಾರಿ ಗೆದ್ದಿದ್ದ 25 ಲೋಕಸಭಾ ಕ್ಷೇತ್ರಗಳನ್ನು ಮತ್ತೆ ಗೆಲ್ಲುವುದು ನಮ್ಮ ಮುಖ್ಯ ಗುರಿಯಾಗಿದೆ. ಈ ಬಾರಿ ಚುನಾವಣೆಯಲ್ಲಿ ಜನತೆ ಉಚಿತ ಯೋಜನೆಗಳಿಗೆ ಮರುಳಾಗುವ ಸಾಧ್ಯತೆ ಇಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಅಧಿಕಾರದಲ್ಲಿ ಮುಂದುವರೆಯಬೇಕೆಂಬುದು ಬಹುತೇಕರ ಅಪೇಕ್ಷೆಯಾಗಿದೆ.ಪ್ರತಿಪಕ್ಷಗಳು ಎಷ್ಟೇ ಮೈತ್ರಿ ಮಾಡಿಕೊಂಡು ನಮ್ಮ ವಿರುದ್ಧ ಅಪಪ್ರಚಾರ ನಡೆಸಿದರೂ ಈ ಬಾರಿ ಎನ್‍ಡಿಎ ಮೈತ್ರಿಕೂಟ 300 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಮೋದಿಯವರು ಕೇಂದ್ರದಲ್ಲಿ ಮತ್ತೊಮ್ಮೆ ಪ್ರಧಾನಿಯಾಗುವುದು ಸೂರ್ಯ, ಚಂದ್ರರಷ್ಟೇ ಸತ್ಯ ಎಂದು ವಿವರಿಸಿದರು.
ಕಾಂಗ್ರೆಸ್ ಏನೇ ಮರುಳು ಮಾಡಿದರೂ ಲೋಕಸಭಾ ಚುನಾವಣೆಯಲ್ಲಿ ಒಂದಂಕಿ ದಾಟುವುದಿಲ್ಲ. ನನ್ನ ಕ್ಷೇತ್ರವು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಸೇರಲಿದ್ದು, ಈ ಬಾರಿ ಬಿಜೆಪಿಯಿಂದ ಯಾರೇ ಅಭ್ಯರ್ಥಿಯಾದರೂ ಗೆಲ್ಲಿಸುವುದು ನಮ್ಮ ಮುಂದಿರುವ ಸವಾಲು ಎಂದು ಹೇಳಿದರು.
ಮತ್ತೆ ಮತ್ತೆ ನಾನು ಸ್ಪಷ್ಟಪಡಿಸುವುದೇ ನೆಂದರೆ ಎಂಥಹ ಸಂದರ್ಭದಲ್ಲೂ ಪಕ್ಷ ಬಿಟ್ಟು ಹೋಗುವ ಯೋಚನೆಯನ್ನು ನನ್ನ ಕನಸಿನಲ್ಲೂ ಮಾಡಿಲ್ಲ. ಕ್ಷೇತ್ರದ ಜನತೆ ವದಂತಿಗಳನ್ನು ನಂಬಬಾರದು. ನನ್ನನ್ನು ಅತೀ ಹೆಚ್ಚು ಮತಗಳಿಂದ ಗೆಲ್ಲಿಸಿ ಆಯ್ಕೆ ಮಾಡಿದ್ದೀರಿ. ನಿಮ್ಮ ಋಣ ತೀರಿಸುವ ಕೆಲಸವನ್ನು ಮಾಡುತ್ತೇನೆ. ಮಹಾಲಕ್ಷ್ಮಿ ಲೇ ಔಟ್ ಕ್ಷೇತ್ರವನ್ನು ಮಾತ್ರವಲ್ಲ, ಎಲ್ಲಾ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವುದು ನನ್ನ ಕರ್ತವ್ಯ ಎಂದು ಭಾವುಕವಾಗಿ ನುಡಿದರು.